ಕೇರಳ ರಾಜಭವನದ ಅಡುಗೆಮನೆ ಇನ್ಮುಂದೆ ಪಕ್ಕಾ ವೆಜಿಟೇರಿಯನ್: ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ನೂತನ ರಾಜ್ಯಪಾಲರ ಆದೇಶ
ಕೇರಳದ ನೂತನ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ರಾಜಭವನದ ಅಡುಗೆಮನೆಯಲ್ಲಿ ಮಾಂಸಾಹಾರ ನಿಷೇಧಿಸಿ, ಸಸ್ಯಾಹಾರ ಮಾತ್ರ ತಯಾರಿಸಲು ಆದೇಶಿಸಿದ್ದಾರೆ. ಇದು ರಾಜ್ಯದಲ್ಲಿ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಾಯಕರು ಇದನ್ನು "ಆಹಾರದ ಹಕ್ಕು" ಉಲ್ಲಂಘನೆ ಹಾಗೂ "ಸಂಘ ಪರಿವಾರದ ಅಜೆಂಡಾ" ಎಂದು ಖಂಡಿಸಿದ್ದಾರೆ. ರಾಜಭವನದ ಸಿಬ್ಬಂದಿಯ ಆಹಾರ ಆಯ್ಕೆಯ ಮೇಲೆ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ತಿರುವನಂತಪುರಂ, ಅಕ್ಟೋಬರ್ 24: ಕೇರಳದ 29ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ಬಿಜೆಪಿ ಮುಖಂಡ ಓಂ ಪ್ರಕಾಶ್ ಮಾಥುರ್, ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ರಾಜ್ಯದಲ್ಲಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದಾರೆ. ರಾಜಭವನದ (ಲೋಕ ಭವನ) ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನು ಮಾತ್ರ ತಯಾರಿಸಬೇಕು ಮತ್ತು ಯಾವುದೇ ಮಾಂಸಾಹಾರಿ ಖಾದ್ಯಗಳನ್ನು ಬೇಯಿಸಬಾರದು ಎಂದು ಅವರು ನೀಡಿರುವ ನಿರ್ದೇಶನವು ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟ ಹಾಗೂ ವಿರೋಧ ಪಕ್ಷ ಸಿಪಿಐ(ಎಂ) ಎರಡರ ಕೆಂಗಣ್ಣಿಗೆ ಗುರಿಯಾಗಿದೆ.
ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ಮಾಥುರ್ ಅವರಿಗೆ ಪ್ರಮಾಣ ವಚನ ಬೋಧಿಸಿದ ಕೆಲವೇ ಗಂಟೆಗಳಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ವಾಕ್ಸಮರಕ್ಕೆ ನಾಂದಿ ಹಾಡಿದೆ. ತಮಿಳುನಾಡು ರಾಜ್ಯಪಾಲರಾಗಿ ವರ್ಗಾವಣೆಗೊಂಡ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಸ್ಥಾನಕ್ಕೆ ಮಾಥುರ್ ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಾಯಕರ ತೀವ್ರ ಆಕ್ಷೇಪ ಕೆ.ಸಿ. ವೇಣುಗೋಪಾಲ್ ಕಿಡಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಆಲಪ್ಪುಳ ಸಂಸದ ಕೆ.ಸಿ. ವೇಣುಗೋಪಾಲ್ ಈ ನಿರ್ಧಾರವನ್ನು ಕಟುವಾಗಿ ಖಂಡಿಸಿದ್ದು, “ಕೇರಳವು ಶ್ರೀಮಂತ ಮೀನು ಸಂಪನ್ಮೂಲ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿರುವ ಕರಾವಳಿ ರಾಜ್ಯ. ಕೇರಳೀಯರು ತಾವು ಏನು ತಿನ್ನಬೇಕು ಎಂಬುದನ್ನು ಆಯ್ಕೆ ಮಾಡಲು ಸ್ವತಂತ್ರರು. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ಆಹಾರ ಪದ್ಧತಿಯನ್ನು ಇಡೀ ಕಚೇರಿಯ ಮೇಲೆ ಹೇರುವುದು ಸಂವಿಧಾನ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇದು ಕೇರಳದಲ್ಲಿ ಸಂಘ ಪರಿವಾರದ ಕೇಸರಿ ಅಜೆಂಡಾವನ್ನು ಜಾರಿಗೆ ತರುವ ಹುನ್ನಾರ” ಎಂದು ಆರೋಪಿಸಿ, ಆದೇಶವನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸಿದರು.
ಇದನ್ನೂ ಓದಿ: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ರಮೇಶ್ ಚೆನ್ನಿತ್ತಲ ಹೇಳಿಕೆ: ಗೃಹ ಸಚಿವ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿ, “ಒಬ್ಬರು ಏನು ಧರಿಸಬೇಕು, ಯಾವ ಭಾಷೆ ಮಾತನಾಡಬೇಕು ಮತ್ತು ಏನು ತಿನ್ನಬೇಕು ಎಂಬುದು ಅವರ ಸಂಪೂರ್ಣ ವೈಯಕ್ತಿಕ ಹಕ್ಕು. ನಮಗೆ ಏನು ಬೇಕೋ ಅದನ್ನು ತಿನ್ನುವ ಸ್ವಾತಂತ್ರ್ಯ ನಮಗಿದೆ, ಅದನ್ನು ಯಾರೂ ನಿರ್ಬಂಧಿಸಲು ಸಾಧ್ಯವಿಲ್ಲ” ಎಂದರು.
ಸಿಪಿಐ(ಎಂ) ಎಂ.ವಿ. ಗೋವಿಂದನ್ ಆಕ್ರೋಶ: ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು, “ಪ್ರಜಾಪ್ರಭುತ್ವದಲ್ಲಿ ಆಹಾರದ ಆಯ್ಕೆಯನ್ನು ಕಸಿದುಕೊಳ್ಳಲು ಯತ್ನಿಸಲಾಗುತ್ತಿದೆ. ದೇಶದಲ್ಲಿ ಆಹಾರವನ್ನೂ ಸಹ ಕೋಮುವಾದಿ ಅಸ್ತ್ರವನ್ನಾಗಿ ಬಳಸಿ ಧ್ರುವೀಕರಣ ಮಾಡುವ ಹುನ್ನಾರ ಇದರ ಹಿಂದಿದೆ” ಎಂದು ದೂರಿದರು.
ರಾಜಭವನದ ಸ್ಪಷ್ಟನೆ ಮತ್ತು ಹಿನ್ನೆಲೆ ರಾಜ್ಯಪಾಲರ ವೈಯಕ್ತಿಕ ಆಯ್ಕೆ: ಭಾರಿ ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ರಾಜ್ಯಪಾಲರ ಕಾರ್ಯಾಲಯದ ಮೂಲಗಳು, “ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರು ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದಾರೆ. ಹೀಗಾಗಿ ಅವರಿಗೆ ಅಡುಗೆ ಮಾಡುವ ಅಡುಗೆಮನೆಯಲ್ಲಿ ಮಾಂಸಾಹಾರ ತಯಾರಿಸದಂತೆ ಸೂಚಿಸಲಾಗಿದೆಯೇ ಹೊರತು, ಸಿಬ್ಬಂದಿಯ ಆಹಾರದ ಆಯ್ಕೆಯ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ” ಎಂದು ತಿಳಿಸಿವೆ.
ಸಿಬ್ಬಂದಿ ಆಹಾರಕ್ಕೆ ನಿರ್ಬಂಧವಿಲ್ಲ: ರಾಜಭವನದ ಮುಖ್ಯ ಅಡುಗೆಮನೆಯಲ್ಲಿ ಕೇವಲ ರಾಜ್ಯಪಾಲರು ಮತ್ತು ಅವರ ಆಪ್ತ ಸಿಬ್ಬಂದಿಗೆ ಮಾತ್ರ ಆಹಾರ ಸಿದ್ಧಪಡಿಸಲಾಗುತ್ತದೆ. ಇತರ ಉದ್ಯೋಗಿಗಳು ಮನೆಯಿಂದಲೇ ತರುವ ಅಥವಾ ಹೊರಗಿನಿಂದ ತರಿಸಿಕೊಳ್ಳುವ ಆಹಾರದ ಮೇಲೆ ಯಾವುದೇ ನಿಷೇಧವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಹಿಂದೆ ಕೇರಳದಲ್ಲಿ ಸೇವೆ ಸಲ್ಲಿಸಿದ್ದ ಹಲವು ರಾಜ್ಯಪಾಲರ ಅವಧಿಯಲ್ಲಿ ರಾಜಭವನದ ಅಡುಗೆಮನೆಯಲ್ಲಿ ಸ್ಥಳೀಯ ಮೀನು ಹಾಗೂ ಮಾಂಸದ ಸಾಂಪ್ರದಾಯಿಕ ಕೇರಳ ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು ಎಂಬುದು ಗಮನಾರ್ಹ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
