ಕೊಚ್ಚಿ: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪದ ಚಲನಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ. ಹಿರಿಯ ವಕೀಲ ಪಿ.ವಿಜಯಭಾನು ಅವರ ಮೂಲಕ ಆಯಿಷಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ತನಿಖಾ ಅಧಿಕಾರಿಯ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು.
ವಿಚಾರಣೆಯ ನಂತರ ಆಕೆಯನ್ನು ಬಂಧಿಸಬೇಕಾದರೆ, ಜಾಮೀನುದಾರರೊಂದಿಗೆ ಬಾಂಡ್ ಅನ್ನು ಕಾರ್ಯಗತಗೊಳಿಸಿದ ನಂತರ ಆಕೆಯನ್ನು ಒಂದು ವಾರ ಮಧ್ಯಂತರ ನಿರೀಕ್ಷಿತ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ವಿಚಾರಣೆ ವೇಳೆ ಆಕೆಯನ್ನು ಬಂಧಿಸಲು ಪ್ರಸ್ತಾಪಿಸಿದರೆ, ವಕೀಲರನ್ನು ಒದಗಿಸುವ ಮೂಲಕ ಆಕೆಗೆ ಕಾನೂನು ನೆರವು ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ವಾಸ್ತವಿಕ ದೂರುದಾರ ಪ್ರತೀಶ್ ವಿಶ್ವನಾಥ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಆಕೆಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಲಕ್ಷದ್ವೀಪ ಆಡಳಿತವು ಪೊಲೀಸರ ಪರವಾಗಿ ನ್ಯಾಯಾಲಯದ ಮುಂದೆ ವಾದಿಸಿತ್ತು. ಜೂನ್ 9 ರಂದು ದಾಖಲಾದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಆಯೆಷಾ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಲಕ್ಷದ್ವೀಪ ಆಡಳಿತದ ಸ್ಥಾಯಿ ಸಲಹೆಗಾರ ಎಸ್. ಮನು ಅವರು ಬುಧವಾರ ಹೈಕೋರ್ಟ್‌ಗೆ ಹೇಳಿಕೆ ಸಲ್ಲಿಸಿದ್ದಾರೆ.
ಹೇಳಿಕೆಯ ಪ್ರಕಾರ, ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ ಮತ್ತು ಅರ್ಜಿದಾರರ ವಿಚಾರಣೆ ಅದರ ಪ್ರಗತಿಗೆ ಅನಿವಾರ್ಯವಾಗಿದೆ.
ಸುದ್ದಿವಾಹಿನಿಯ ನ್ಯೂಸ್ ಚರ್ಚೆಯಲ್ಲಿ ಆಯೆಷಾ ಸುಲ್ತಾನಾ ಅವಪು , ಕೇಂದ್ರ ಸರ್ಕಾರವು ಲಕ್ಷದ್ವೀಪಕ್ಕೆ ಭೇಟಿ ನೀಡುವವರಿಗೆ ಕೊವಿಡ್ -19 ಕ್ವಾರಂಟೈನ್ ನಿಯಮವನ್ನು ನಿರ್ಬಂಧಿಸಿದೆ. ಈ ಮೂಲಕ ಭಾರತ ಸರ್ಕಾರ ಕೊವಿಡ್ ಅನ್ನು ದ್ವೀಪವಾಸಿಗಳ ವಿರುದ್ಧ ಜೈವಿಕ ಶಸ್ತ್ರಾಸ್ತ್ರವಾಗಿ ಬಳಸುವುದು, ಲಕ್ಷದ್ವೀಪದ ಜನರಲ್ಲಿ ದ್ವೇಷ ಅಥವಾ ತಿರಸ್ಕಾರವನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ. ಇದು ಭಾರತ ಸರ್ಕಾರದ ಬಗ್ಗೆ ಜನರಲ್ಲಿ ಅಸಮಾಧಾನವನ್ನು ಉಂಟುಮಾಡುವ ಪ್ರಯತ್ನವೆಂದು ಪರಿಗಣಿಸಬಹುದು ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಆಯೆಷಾ ಹೇಳಿಕೆಯು ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಸಾರ್ವಜನಿಕ ಶಾಂತಿಗೆ ಅಸ್ವಸ್ಥತೆ ಅಥವಾ ಗೊಂದಲವನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿದೆ ಎಂದು ಲಕ್ಷದ್ವೀಪ ಆಡಳಿತವು ವಾದಿಸಿದೆ. ಇದು ದೇಶೀಯ ಭಾವೈಕ್ಯತೆಗೆ ಪೂರ್ವಾಗ್ರಹ ಪೀಡಿತವಾದ ಪ್ರತಿಪಾದನೆಯಾಗಿದೆ, ದೇಶದ್ರೋಹ ಆರೋಪದ ಬಗ್ಗೆ ವಿವರಣೆ ನೀಡಿದ ಆಡಳಿತ ಹೇಳಿದೆ.
ಇದನ್ನೂ ಓದಿ: ರಾಜದ್ರೋಹ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಲಕ್ಷದ್ವೀಪದ ಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ
ಇದನ್ನೂ ಓದಿ: ಲಕ್ಷದ್ವೀಪ ಬಿಜೆಪಿ ಘಟಕದಲ್ಲಿ ತಳಮಳ. ಚಿತ್ರ ನಿರ್ಮಾಪಕಿ ಆಯೆಶಾ ಸುಲ್ತಾನಾ ಬೆಂಬಲಿಸಿ ಪದಾಧಿಕಾರಿಗಳ ರಾಜೀನಾಮೆ
Published On - 7:00 pm, Thu, 17 June 21