ರಾಜದ್ರೋಹ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಲಕ್ಷದ್ವೀಪದ ಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ

ತಮ್ಮ ಫೇಸ್​ಬುಕ್ ಪೋಸ್ಟ್​ ಒಂದರಲ್ಲಿ ಚಿತ್ರ ನಿರ್ಮಾಪಕಿಯು, ತಾನು ಆ ಪದವನ್ನು ಬಳಸಿರುವುದು ನಿಜ ಆದರೆ ದೇಶ ಮತ್ತು ಕೇಂದ್ರ ಸರ್ಕಾರ ವಿರುದ್ಧ ಟೀಕೆ ಮಾಡಿಲ್ಲವೆಂದು ಹೇಳಿದ್ದಾರೆ.

ರಾಜದ್ರೋಹ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಲಕ್ಷದ್ವೀಪದ ಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ
ಆಯೆಷಾ ಸುಲ್ತಾನಾ

ತಮ್ಮ ವಿರುದ್ಧ ದಾಖಲಾಗಿರುವ ರಾಜದ್ರೋಹ ಪ್ರಕರಣ ವಿರುದ್ಧ ಲಕ್ಷದ್ವೀಪ ಖ್ಯಾತ ಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ ಅವರು ಸೋಮವಾರದಂದು ಕೇರಳ ಹೈಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಟಿವಿ ಚ್ಯಾನೆಲೊಂದರಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಲಕ್ಷದ್ವೀಪ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಸಿ ಅಬ್ದುಲ್ ಖಾದರ್ ಹಾಜಿ ಅವರು ಜೂನ್ 10ರಂದು ಸುಲ್ತಾನಾ ವಿರುದ್ಧ ದೂರು ಸಲ್ಲಿಸಿದ ನಂತರ ಲಕ್ಷದ್ವೀಪ ಪೊಲೀಸ್ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಮಲಯಾಳಂ ಟಿವಿ ಚ್ಯಾನೆಲ್​ನಲ್ಲಿ ನಡೆದ ಡಿಬೇಟ್​ನಲ್ಲಿ ಭಾಗವಹಿಸಿದ್ದ ಸುಲ್ತಾನಾ ಅವರು, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಕೇಂದ್ರ ಸರ್ಕಾರ ಲಾಂಚ್​ ಮಾಡಿರುವ ‘ಜೈವಿಕಆಯುಧ’ ಎಂದು ಬಣ್ಣಿಸಿದ್ದರು. ಲಕ್ಷದ್ವೀಪದಲ್ಲಿ ಪಟೇಲ್ ಅವರು ಜಾರಿಗೊಳಿಸಿರುವ ಅನೇಕ ನಿಯಮಗಳ ವಿರುದ್ಧ ದ್ವೀಪಸಮೂಹದಲ್ಲಿ ಎದ್ದಿರುವ ತೀವ್ರ ಕೋಪ ಮತ್ತು ಬೇಗುದಿಯ ಹಿನ್ನೆಲೆಯಲ್ಲಿ ಸುಲ್ತಾನಾ ಅವರಿಂದ ಟೀಕೆಗಳು ವ್ಯಕ್ತವಾಗಿದ್ದವು. ಪಟೇಲ್ ಅವರ ನಿಯಮಗಳು ನಮ್ಮ ದೈನಂದಿನ ಊಟ ಕಸಿದುಕೊಳ್ಳುವ ಅಪಾಯವಿದೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.

ಜೂನ್​ 10ರಂದು ದಾಖಲಾಗಿರುವ ದೂರಿನಲ್ಲಿ, ಸುಲ್ತಾನಾ ಅವರ ದುರುದ್ದೇಶಪೂರಿತ ಆರೋಪಗಳು ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಹುಟ್ಟಲು ಕಾರಣವಾಗಿವೆ ಎಂದು ಖಾದರ್ ಹೇಳಿದ್ದಾರೆ. ಸುಲ್ತಾನಾ ವಿರುದ್ಧ ಕವರಟ್ಟಿ ಪೊಲೀಸ್​ ಸ್ಟೇಷನ್​ನಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 121 (ರಾಜದ್ರೋಹ) ಮತ್ತು 153 ಬಿ ಅಡಿಯಲ್ಲಿ ಕೇಸ್ ದಾಖಲಾಗಿದ್ದು ಜೂನ್ 20 ರಂದು ಠಾಣೆಗೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಪ್ರಸ್ತುತವಾಗಿ ಸುಲ್ತಾನಾ ಕೊಚ್ಚಿಯಲ್ಲಿ ವಾಸವಾಗಿದ್ದಾರೆ.

ತಮ್ಮ ಫೇಸ್​ಬುಕ್ ಪೋಸ್ಟ್​ ಒಂದರಲ್ಲಿ ಚಿತ್ರ ನಿರ್ಮಾಪಕಿಯು, ತಾನು ಆ ಪದವನ್ನು ಬಳಸಿರುವುದು ನಿಜ ಆದರೆ ದೇಶ ಮತ್ತು ಕೇಂದ್ರ ಸರ್ಕಾರ ವಿರುದ್ಧ ಟೀಕೆ ಮಾಡಿಲ್ಲವೆಂದು ಹೇಳಿದ್ದಾರೆ.

‘ಜನರ ಆಕ್ರೋಷಕ್ಕೆ ಕಾರಣವಾಗಿರುವ ಪ್ರಫುಲ್ ಪಟೇಲ್ ಅವರು ಕೆಲ ನಿರ್ಣಯಗಳ ಬಗ್ಗೆ ನಾನು ಉಲ್ಲೇಖ ಮಾಡಿದ್ದೇನೆ. ಹೊಸ ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತವಾಗತ್ತಿದ್ದರೂ ಅವರು ಜನರನ್ನು ಕೆರಳಿಸುವುದನ್ನು ಮುಂದುವರೆಸಿದ್ದಾರೆ. ಒಬ್ಬ ಸ್ಥಳೀಯ ನಿವಾಸಿಯಾಗಿ ಅವುಗಳನ್ನು ವಿರೋಧಿಸುವ ಹಕ್ಕು ನನಗಿದೆ,’ ಎಂದು ಆಕೆ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಹಲವಾರು ಬಿಜೆಪಿ ನಾಯಕರು ಸುಲ್ತಾನಾ ಅವರ ವಿರುದ್ಧ ರಾಜದ್ರೋಹದ ಕೇಸ್​ ದಾಖಲಿಸಿರುವುದನ್ನು ವಿರೋಧಿಸಿದ್ದಾರೆ. ಕಳೆದ ವಾರ ವರದಿಯಾಗಿರುವ ಹಾಗೆ ಸುಮಾರು ಇಂದು ಡಜನ್ ಸ್ಥಳೀಯ ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಲಕ್ಷದ್ವೀಪ ಬಿಜೆಪಿ ಘಟಕವು ರಾಜೀನಾಮೆ ವದಂತಿಗಳನ್ನು ತಳ್ಳಿಹಾಕಿ, ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದೆ.

ಕಳೆದ ಕೆಲ ದಿನಗಳಿಂದ ಲಕ್ಷದ್ವೀಪದ ನಿವಾಸಿಗಳು, ಅಲ್ಲಿನ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಜಾರಿಗೊಳಿಸಿರುವ ಹೊಸ ಸುಧಾರಣೆಗಳ ವಿರುದ್ಧ ತೀವ್ರ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅವರಲ್ಲಿ ಹಲವಾರು ಜನ ಸದರಿ ನಿಯಮಗಳು ಸ್ಥಳೀಯರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂದು ಹೇಳುತ್ತಿದ್ದಾರೆ.

ಪಟೇಲ್ ಅವರು ಜಾರಿಗೊಳಿಸಿರುವ ಲಕ್ಷದ್ವೀಪ ಸಮಾಜವಿರೋಧಿ ತಡೆ ಕಾಯ್ದೆ (ಗೂಂಡಾ ಕಾಯ್ದೆ), ಲಕ್ಷದ್ವೀಪ ಪ್ರಾಣಿ ಸಂರಕ್ಷಣೆ ಕಾಯ್ದೆ ಮತ್ತು ಲಕ್ಷದ್ವೀಪ ಪಂಚಾಯತ್ ಕಾಯ್ದೆ 2021ಮತ್ತು ಇತರ ಕೆಲ ಕಾಯ್ದೆಗಳನ್ನು ವಿರೋಧಿಸಿ ಜನ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಡಿಸೆಂಬರ್ 2020 ರಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಪಟೇಲ್ ಅವರು, ತಾವು ಜಾರಿಗೊಳಿಸಿರುವ ಹೊಸ ಕಾಯಿದೆಗಳ ವಿರುದ್ಧ ಸ್ಥಳೀಯ ಜನ ಮತ್ತು ಪಕ್ಕದ ರಾಜ್ಯ ಕೇರಳದ ರಾಜಕಾರಣಿಗಳಿಂದ ವಿರೋಧ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ