Sputnik V: ಶೀಘ್ರದಲ್ಲೇ ಬೆಂಗಳೂರು ಸೇರಿ 9 ನಗರಗಳಲ್ಲಿ ಲಭ್ಯವಾಗಲಿದೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ
ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಬಳಕೆಗೆ ಸಿಗಲಿದೆ. ಪರೀಕ್ಷೆಗಳು ಮುಗಿದ ತಕ್ಷಣ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಮ್ಮ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ ಎಂದು ರೆಡ್ಡೀಸ್ ಲ್ಯಾಬೋರೇಟರಿ ತಿಳಿಸಿದೆ.
ದೆಹಲಿ: ರಷ್ಯನ್ ಕೊವಿಡ್ 19 ಲಸಿಕೆ ಸ್ಪುಟ್ನಿಕ್ ವಿ ಇನ್ನು ಕೆಲವೇ ದಿನಗಳಲ್ಲಿ ಒಟ್ಟು 9 ಮಹಾನಗರಗಳಲ್ಲಿ ಲಭ್ಯವಾಗಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬೋರೇಟರಿ ಇಂದು ತಿಳಿಸಿದೆ. ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತ, ಚೆನ್ನೈ, ವಿಶಾಖಪಟ್ಟಣಂ, ಬಡ್ಡಿ, ಕೊಲ್ಲಾಪುರ ಮತ್ತು ಮಿರಿಯಲಗುಡ ನಗರಗಳಲ್ಲಿ ವಾಣಿಜ್ಯಾತ್ಮಕ ಮಾರುಕಟ್ಟೆಗಳಲ್ಲಿ ಸಿಗಲಿದೆ ಎಂದು ಡಾ. ರೆಡ್ಡೀಸ್ ಲ್ಯಾಬೋರೇಟರಿ ಹೇಳಿದೆ.
ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ರಷಿಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್(RDIF)ನೊಂದಿಗೆ ಸಹಯೋಗಹೊಂದಿರುವ ಡಾ. ರೆಡ್ಡೀಸ್ ಲ್ಯಾಬೋರೇಟರಿಸ್, ಸ್ಪುಟ್ನಿಕ್ ವಿ ಪ್ರಾರಂಭದಲ್ಲಿ ಹೈದರಾಬಾದ್ನಲ್ಲಿ ಮಾತ್ರ ಸಿಗಲಿದೆ ಎಂದು ಹೇಳಿತ್ತು. ಇದೀಗ ಈ 9 ನಗರಗಳಲ್ಲಿ ಕೂಡ ಲಸಿಕೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆ ಸಿಗಲಿದೆ ಎಂಬುದನ್ನೂ ರೆಡ್ಡೀಸ್ ಲ್ಯಾಬೋರೇಟರಿ ಹೇಳಿದೆ.
ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಬಳಕೆಗೆ ಸಿಗಲಿದೆ. ಪರೀಕ್ಷೆಗಳು ಮುಗಿದ ತಕ್ಷಣ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಮ್ಮ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಹಾಗಂತ ಸದ್ಯಕ್ಕೇನೂ ಜನರಿಗೆ ಕೊವಿನ್ ಆ್ಯಪ್ನಲ್ಲಿ ಸ್ಪುಟ್ನಿಕ್ ವಿ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಲಸಿಕೆಯನ್ನು ವಾಣಿಜ್ಯಾತ್ಮಕವಾಗಿ ಬಿಡುಗಡೆ ಮಾಡುವವರೆಗೂ ನೋಂದಣಿಗೆ ಕಾಯಲೇಬೇಕಾಗುತ್ತದೆ ಎಂದು ಲ್ಯಾಬೋರೇಟರಿ ತಿಳಿಸಿದೆ.
ಸದ್ಯ ಕೇಂದ್ರ ಸರ್ಕಾರ ಸ್ಪುಟ್ನಿಕ್ ವಿ ಲಸಿಕೆಯ ಬೆಲೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್ಗೆ 1410 ರೂ.ನಿಗದಿಪಡಿಸಿದೆ. ಈ ಲಸಿಕೆ ಕೊರೊನಾ ವಿರುದ್ಧ ಶೇ. 94.3ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.
ಇದನ್ನೂ ಓದಿ: Tokyo Olympics: ಟೋಕಿಯೊ ಒಲಿಂಪಿಕ್ಸ್ಗೆ ಭಾರತೀಯ ಮಹಿಳಾ ಹಾಕಿ ತಂಡ ಪ್ರಕಟ, 8 ಹೊಸ ಮುಖಗಳಿಗೆ ಅವಕಾಶ
Published On - 5:50 pm, Thu, 17 June 21