Siddique Kappan: ಎರಡು ವರ್ಷಗಳ ಬಳಿಕ ಪತ್ರಕರ್ತ ಸಿದ್ದೀಕ್ ಕಪ್ಪನ್ ಜೈಲಿನಿಂದ ಬಿಡುಗಡೆ
Kerala Journalist Releasing After 2 Years: ಪಿಎಂಎಲ್ಎ ಕಾಯ್ದೆ ಅಡಿ ಎರಡು ವರ್ಷಗಳ ಹಿಂದೆ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಇಲ್ಲಿಯ ಸೆಷೆನ್ಸ್ ನ್ಯಾಯಾಲಯ ಜಾಮೀನು ನೀಡಿದ್ದು, ಇಂದು ಬೆಳಗ್ಗೆ ಅವರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.
ಲಕ್ನೋ: ಪಿಎಂಎಲ್ಎ ಕಾಯ್ದೆ (PMLA Act) ಅಡಿ ಎರಡು ವರ್ಷಗಳ ಹಿಂದೆ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ (Siddique Kappan) ಅವರಿಗೆ ಇಲ್ಲಿಯ ಸೆಷೆನ್ಸ್ ನ್ಯಾಯಾಲಯ ಜಾಮೀನು ನೀಡಿದ್ದು, ಇಂದು ಬೆಳಗ್ಗೆ ಅವರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿದ್ದೀಕ್ ಕಪ್ಪನ್ ಬಿಡುಗಡೆಗೊಳಿಸಿ ಸೆಷನ್ಸ್ ಕೋರ್ಟ್ (Lucknow District and Sessions Court) ಆದೇಶಕ್ಕೆ ಸಹಿಹಾಕಿದೆ. ಗುರುವಾರ ಬೆಳಗ್ಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅವರ ಪರ ವಕೀಲ ಇಶಾನ್ ಬಾಘೆಲ್ ನಿನ್ನೆ ಬುಧವಾರ ಮಾಹಿತಿ ನೀಡಿದ್ದಾರೆ.
ಜಾರಿ ನಿರ್ದೇಶನಾಲಯವು ಪತ್ರಕರ್ತ ಸಿದ್ದೀಕ್ ಕಪ್ಪನ್ ವಿರುದ್ಧ ಪಿಎಂಎಲ್ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. 2020 ಅಕ್ಟೋಬರ್ ತಿಂಗಳಲ್ಲಿ ಕಪ್ಪನ್ ಅವರನ್ನು ಲಕ್ನೋ ಕಾರಾಗೃಹದಲ್ಲಿ ಇರಿಸಲಾಗಿತ್ತು. ಎರಡು ವರ್ಷಗಳಿಗೂ ಹೆಚ್ಚು ಕಾಲ ಅವರು ಜೈಲಿನಲ್ಲಿಯೇ ಇದ್ದು, ಇದೀಗ ಬಿಡುಗಡೆಯಾಗುತ್ತಿದ್ದಾರೆ.
ಸಿದ್ದೀಕ್ ಕಪ್ಪನ್ ವಿರುದ್ಧ ಪಿಎಂಎಲ್ಎ ಕಾಯ್ದೆ ಅಡಿ ಒಂದೆರಡು ಪ್ರಕರಣಗಳು ದಾಖಲಾಗಿವೆ. 2022ರ ಸೆಪ್ಟೆಂಬರ್ 9ರಂದು ಸುಪ್ರೀಂಕೋರ್ಟ್ ಆತನಿಗೆ ಒಂದು ಪ್ರಕರಣದಲ್ಲಿ ಜಾಮೀನು ನೀಡಿತು. ಮತ್ತೊಂದು ಪ್ರಕರಣ ಬಾಕಿ ಇದ್ದರಿಂದ ಜೈಲಿನಲ್ಲೇ ಮುಂದುವರಿದಿದ್ದರು. ಅದಾದ ಬಳಿಕ ಡಿಸೆಂಬರ್ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ಸಿದ್ದೀಕ್ ಕಪ್ಪನ್ಗೆ ಮತ್ತೊಂದು ಪ್ರಕರಣದಲ್ಲಿ ಜಾಮೀನು ನೀಡಿತ್ತು. ಆದಾಗ್ಯೂ ಅವರನ್ನು ಜೈಲಿನಲ್ಲಿ ಮುಂದುವರಿಸಲಾಗಿತ್ತು.
ನಿನ್ನೆ ಲಕ್ನೋ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಸಂಜಯ್ ಶಂಕರ್ ಪಾಂಡೆ, ಸಿದ್ದೀಕ್ ಕಪ್ಪನ್ ಮೇಲೆ ಬೇರೆ ಯಾವುದೇ ಪ್ರಕರಣ ಇಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡಿ ಎಂದು ಲಕ್ನೋ ಕಾರಾಗೃಹ ಅಧಿಕಾರಿಗೆ ನಿರ್ದೇಶನ ನೀಡಿತು.
ಯಾಕೆ ಬಂಧನ?
ಕೇರಳದ ಮಲಪ್ಪುರಂನವರಾದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರು ಉತ್ತರಪ್ರದೇಶದ ಹಾಥ್ರಸ್ ಪಟ್ಟಣದಲ್ಲಿ 2020 ಅಕ್ಟೋರ್ 5ರಂದು ದಲಿತ ಮಹಿಳೆ ಮೇಲೆ ಸಂಭವಿಸಿದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Hathras Dalit Woman Rape and Murder) ಸುದ್ದಿಯನ್ನು ಕವರ್ ಮಾಡಲೆಂದು ಹೋಗಿದ್ದರು. ಮಥುರಾ ಟಾಲ್ ಪ್ಲಾಜಾ ಬಳಿಕ ಸಿದ್ದೀಕ್ ಕಪ್ಪನ್ ಸೇರಿ ನಾಲ್ವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಈ ನಾಲ್ವರು ಪಿಎಫ್ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಇಲ್ಲಿ ಕಾನೂನು ವ್ಯವಸ್ಥೆಯನ್ನು ಹಾಳು ಮಾಡುವ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ಆರೋಪವಾಗಿತ್ತು. ಅದರಂತೆ ಐಟಿ, ಯುಎಪಿಎ ಮತ್ತು ಇಪಿಸಿ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಕಪ್ಪನ್ ವಿರುದ್ಧ ಪ್ರಕರಣಗಳು ದಾಖಲಾದವು. ನಂತರ ಮನಿ ಲಾಂಡ್ರಿಂಗ್ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯವು ಸಿದ್ದೀಕ್ ಕಪ್ಪನ್ ಮೇಲೆ ಪ್ರಕರಣ ದಾಖಲಿಸಿತು.
Published On - 8:08 am, Thu, 2 February 23