AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆಗೆ ಹಾಜರಾಗಿಲ್ಲ, ಆದರೂ ಪಾಸ್; ಕೇರಳದ ಎಸ್ಎಫ್ಐ ಕಾರ್ಯದರ್ಶಿ ಪಿ.ಎಂ ಆರ್ಶೋ ಅಂಕಪಟ್ಟಿ ವಿವಾದ

PM Arsho: ಆರ್ಶೋ ಅವರ ಅಂಕಪಟ್ಟಿಯಲ್ಲಿ ಪಾಸ್ ಎಂದು ತೋರಿಸಿದೆ.ಆದರೆ ವಿಷಯಗಳ ಅಂಕಗಳನ್ನು ದಾಖಲಿಸಬೇಕಾದ ಕಾಲಂನಲ್ಲಿ ಸೊನ್ನೆ ಎಂದು ಬರೆಯಲಾಗಿದೆ. ಇದು ತಾಂತ್ರಿಕ ದೋಷ ಎಂದು ಕಾಲೇಜು ಹೇಳಿದೆ.

ಪರೀಕ್ಷೆಗೆ ಹಾಜರಾಗಿಲ್ಲ, ಆದರೂ ಪಾಸ್; ಕೇರಳದ ಎಸ್ಎಫ್ಐ ಕಾರ್ಯದರ್ಶಿ ಪಿ.ಎಂ ಆರ್ಶೋ ಅಂಕಪಟ್ಟಿ ವಿವಾದ
ಪಿ.ಎಂ ಆರ್ಶೋImage Credit source: Facebook/PM Arsho
Follow us
ರಶ್ಮಿ ಕಲ್ಲಕಟ್ಟ
|

Updated on: Jun 06, 2023 | 8:54 PM

ಕೊಚ್ಚಿ: ಕೇರಳದ (Kerala) ಎರ್ನಾಕುಲಂನ ಮಹಾರಾಜಾಸ್ ಕಾಲೇಜು ವಿದ್ಯಾರ್ಥಿ ಹಾಗೂ ಎಸ್‌ಎಫ್‌ಐ (Students Federation of India -SFI)ರಾಜ್ಯ ಕಾರ್ಯದರ್ಶಿ ಪಿ.ಎಂ ಆರ್ಶೋ (PM Arsho) ಅವರ ಮಾರ್ಕ್ ಲಿಸ್ಟ್ ಈಗ ವಿವಾದಕ್ಕೀಡಾಗಿದೆ. ಮಾರ್ಕ್ ಲಿಸ್ಟ್ ನಲ್ಲಿ ಅಂಕಗಳ ಕಾಲಂನಲ್ಲಿ ಏನೂ ನಮೂದಿಸಿಲ್ಲ. ಆದರೂ ಪಾಸ್ ಎಂದು ತೋರಿಸಲಾಗಿದೆ. ಆರ್ಶೋ ಮೂರನೇ ಸೆಮಿಸ್ಟರ್ ಪುರಾತತ್ವ ವಿಭಾಗದ (MA Archeology) ಪರೀಕ್ಷೆ ಬರೆದಿಲ್ಲ ಎನ್ನಲಾಗಿದ್ದು, ಅಂಕಪಟ್ಟಿಯಲ್ಲಿ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತೋರಿಸಲಾಗಿದೆ. ಆರ್ಶೋ ರಿಮಾಂಡ್‌ನಲ್ಲಿದ್ದಾಗ ಮೂರನೇ ಸೆಮಿಸ್ಟರ್ ಪುರಾತತ್ವ ಪರೀಕ್ಷೆ ನಡೆದಿತ್ತು. ಹಾಗಾದರೆ ಹಾಜರಾಗದ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾದದ್ದು ಹೇಗೆ?. ಆರ್ಶೋ ಮರು ಪ್ರವೇಶ ಪಡೆದು ಪರೀಕ್ಷೆ ಬರೆದಿದ್ದರೂ ಮೊದಲ ಪರೀಕ್ಷೆಯಲ್ಲಿ ಅವರು ಪಾಸಾಗಿದ್ದಾರೆ ಎಂದು ಅಂಕಪಟ್ಟಿಯಲ್ಲಿ ತೋರಿಸಲಾಗಿದೆ.

ಆದಾಗ್ಯೂ, ತೇರ್ಗಡೆಯಾಗಿದ್ದಾರೆ ಎಂದು ತೋರಿಸುವ ಅಂಕಪಟ್ಟಿ ತಾಂತ್ರಿಕ ದೋಷದಿಂದ ಕೂಡಿದೆ ಎಂದು ಮಹಾರಾಜ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ. ಅಂಕಪಟ್ಟಿ ಪ್ರಕಟಿಸುವ ವೆಬ್‌ಸೈಟ್‌ಗೆ ಸಂಬಂಧಿಸಿದಂತೆ ಕೆಲವು ದೋಷಗಳಿವೆ. ವಿವಾದದ ಕಾರಣ ಅಂಕಪಟ್ಟಿಯನ್ನು ಸೈಟ್‌ನಿಂದ ತೆಗೆದುಹಾಕಲಾಗಿದೆ ಎಂದು ಕಾಲೇಜು ಹೇಳಿದೆ.  ಅಂಕಪಟ್ಟಿ ವಿವಾದಕ್ಕೆ ಸಂಬಂಧಿಸಿದಂತೆ ಘಟನೆಯನ್ನು ಖಂಡಿಸಿ ಕೆಎಸ್‌ಯು ಪ್ರತಿಭಟನೆ ನಡೆಸಿದೆ.

ಆರ್ಶೋ ಅವರ ಅಂಕಪಟ್ಟಿಯಲ್ಲಿ ಪಾಸ್ ಎಂದು ತೋರಿಸಿದೆ.ಆದರೆ ವಿಷಯಗಳ ಅಂಕಗಳನ್ನು ದಾಖಲಿಸಬೇಕಾದ ಕಾಲಂನಲ್ಲಿ ಸೊನ್ನೆ ಎಂದು ಬರೆಯಲಾಗಿದೆ. ಇದು ತಾಂತ್ರಿಕ ದೋಷ ಎಂದು ಕಾಲೇಜು ಹೇಳಿದೆ.

ಆರ್ಶೋ ಹೆಸರನ್ನು ತೆಗೆದುಹಾಕಿದ ನಂತರ ಕಾಲೇಜು ನಂತರ ಪರಿಷ್ಕೃತ ಪಟ್ಟಿಯನ್ನು ನವೀಕರಿಸಿದೆ. ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್.ಬಿಂದು ಹೇಳಿದ್ದಾರೆ.

ತಾಂತ್ರಿಕ ದೋಷ ಅಥವಾ ವಿವಾದ ಸೃಷ್ಟಿಸಲು ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದು: ಆರ್ಶೋ

ಬರೆಯದೇ ಇರುವ ಪರೀಕ್ಷೆಯಲ್ಲಿ ಪಾಸ್ ಆಗಿರುವ ವಿವಾದ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಪಿ.ಎಂ.ಆರ್ಶೋ, ನಾನು ಪಾಸ್ ಆಗಿದ್ದೇನೆ ಎಂದು ಅಂಕ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ತಾಂತ್ರಿಕ ದೋಷ ಅಥವಾ ವಿವಾದ ಸೃಷ್ಟಿಸಲು ಯಾರೋ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವಾಗಿರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತೃಭೂಮಿ ನ್ಯೂಸ್‌ ಜತೆ ಮಾತನಾಡಿದ ಅವರು ಎಂಎ ಆರ್ಕಿಯಾಲಜಿ ಮೂರನೇ ಸೆಮಿಸ್ಟರ್‌ನಲ್ಲಿ ಒಂದೇ ಒಂದು ಪರೀಕ್ಷೆಯನ್ನು ಬರೆದಿಲ್ಲ. ಪರೀಕ್ಷೆಯ ಸಮಯದಲ್ಲಿ ಎರ್ನಾಕುಲಂ ಜಿಲ್ಲೆಗೆ ಪ್ರವೇಶಿಸಲು ಸಹ ಸಾಧ್ಯವಾಗಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳ ಕಾಲ ಜಿಲ್ಲೆಗೆ ಪ್ರವೇಶಿಸಬಾರದು ಎಂಬ ಜಾಮೀನು ಷರತ್ತು ಇತ್ತು. ಬರೆಯದೇ ಇರುವ ಪರೀಕ್ಷೆಯಲ್ಲಿ ನನ್ನನ್ನು ಪಾಸ್ ಮಾಡಲು ಯಾರನ್ನಾದರೂ ಕರೆಯುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅದರ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ: ಅಮಿತ್ ಶಾ ಭೇಟಿ ಬಗ್ಗೆ ಕುಸ್ತಿಪಟು ಬಜರಂಗ್ ಪುನಿಯಾ

ಪರೀಕ್ಷೆಯಲ್ಲಿ ಹೇಗೆ ಪಾಸ್ ಆದೆ ಎಂದು ಗೊತ್ತಿಲ್ಲ. ಬರೆಯದ ಪರೀಕ್ಷೆಯ ಫಲಿತಾಂಶ ನೋಡುವುದೇಕೆ ಎಂದು ನಾನು ಅಂಕ ಪಟ್ಟಿಯನ್ನು ನೋಡಿಲ್ಲ. ನನ್ನನ್ನು ಇಷ್ಟೊಂದು ಪ್ರೀತಿಯಿಂದ ಪಾಸ್ ಮಾಡಿದ್ದು, ಎಕ್ಸಾಮ್ ಕಂಟ್ರೋಲರ್ ಸೇರಿದಂತೆ ಇನ್ನು ಕೆಲವರು ಆಗಿರಬಹುದು. ಅವರು ನನ್ನನ್ನು ಇಷ್ಟೊಂದು ಪ್ರೀತಿಸುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು ಎಂದು ಆರ್ಶೋ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ