
ಕೇರಳದ 60 ವರ್ಷದ ವೃದ್ಧರೊಬ್ಬರ ಜೀವನದಲ್ಲಿ ನಡೆದಿರುವ ಘಟನೆ ಇಡೀ ದೇಶದ ಗಮನ ಸೆಳೆದಿದೆ. ತಾನು ನಿವೃತ್ತಿಯಾಗಬೇಕಾದ ವಯಸ್ಸಿನಲ್ಲಿ ಈ ವ್ಯಕ್ತಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ (Appointment Letter) ಕೈ ಸೇರಿದೆ. ಹೌದು, ಭರ್ತಿ 20 ವರ್ಷಗಳ ಹಿಂದೆ ಅವರು ಹಾಕಿದ್ದ ಅರ್ಜಿಗೆ ಈಗ ಸರ್ಕಾರ ಸ್ಪಂದಿಸಿದೆ. ಮಲಪ್ಪುರಂನ 60 ವರ್ಷದ ಅಬ್ದುಲ್ ಮಜೀದ್ ಎಂಬುವವರು ಭರ್ತಿ ಎರಡು ದಶಕಗಳ (20 ವರ್ಷ) ನಂತರ ಸರ್ಕಾರಿ ಕೆಲಸದ ನೇಮಕಾತಿ ಪತ್ರ ಪಡೆದಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಪತ್ರ ಬರುವಷ್ಟರಲ್ಲಿ ಅವರು ಸರ್ಕಾರಿ ಸೇವೆಗೆ ಸೇರಬೇಕಾದ ವಯಸ್ಸಿನ ಮಿತಿಯನ್ನೇ ದಾಟಿಹೋಗಿದ್ದಾರೆ.
ಅಬ್ದುಲ್ ಮಜೀದ್ ಅವರು 2005 ರಲ್ಲಿ ಕೇರಳ ಸಾರ್ವಜನಿಕ ಸೇವಾ ಆಯೋಗ (KPSC) ನಡೆಸಿದ್ದ ‘ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ’ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಶ್ರೇಣಿ ಪಟ್ಟಿ (Rank List) ಯಲ್ಲೂ ಸ್ಥಾನ ಪಡೆದಿದ್ದರು. ಸಾಮಾನ್ಯವಾಗಿ ಈ ರ್ಯಾಂಕ್ ಪಟ್ಟಿಗಳು 3 ವರ್ಷಗಳ ಕಾಲ ಮಾತ್ರ ಮಾನ್ಯವಾಗಿರುತ್ತವೆ. ಅದರಂತೆ ಇವರ ಪಟ್ಟಿಯ ಅವಧಿಯು 2008 ರಲ್ಲೇ ಮುಕ್ತಾಯಗೊಂಡಿತ್ತು.
ಆದರೆ ವ್ಯವಸ್ಥೆಯ ಆಮೆಗತಿಯ ಕೆಲಸ ಎಂತಹುದು ಎಂದರೆ, ರ್ಯಾಂಕ್ ಪಟ್ಟಿ ರದ್ದಾಗಿ 18 ವರ್ಷಗಳು ಕಳೆದ ನಂತರ, ಅಂದರೆ ಇತ್ತೀಚೆಗೆ (ಏಪ್ರಿಲ್ 24, 2026 ರಂದು) ಪಿಎಸ್‌ಸಿ ಮಜೀದ್ ಅವರಿಗೆ ನೇಮಕಾತಿಯ ಸಲಹಾ ಪತ್ರವನ್ನು (Advice Memo) ಕಳುಹಿಸಿದೆ. 20 ವರ್ಷಗಳ ಹಿಂದೆ ಬರೆದ ಪರೀಕ್ಷೆಗೆ ಈಗ ಕೆಲಸದ ಆಫರ್ ಬಂದಿರುವುದನ್ನು ನೋಡಿ ಮಜೀದ್ ದಂಗಾಗಿದ್ದಾರೆ.
ನೇಮಕಾತಿ ಪತ್ರ ಕೈ ಸೇರಿದಾಗ ಮಜೀದ್ ಅವರಿಗೆ ಅತೀವ ಸಂತೋಷವಾಗಿದ್ದರೂ, ಮರುಕ್ಷಣವೇ ಅದು ತೀವ್ರ ನಿರಾಶೆಗೆ ತಿರುಗಿತು. ಏಕೆಂದರೆ, ಅಧಿಕೃತ ದಾಖಲೆಗಳ ಪ್ರಕಾರ ಮೇ 27, 2026 ಕ್ಕೆ ಮಜೀದ್ ಅವರಿಗೆ ಭರ್ತಿ 60 ವರ್ಷ ತುಂಬಿದೆ. ನಿಯಮಗಳ ಪ್ರಕಾರ 60 ವರ್ಷ ದಾಟಿದ ವ್ಯಕ್ತಿ ಹೊಸದಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಲು ಅರ್ಹನಾಗಿರುವುದಿಲ್ಲ.
ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ
ಪ್ರಸ್ತುತ ಉದ್ಯೋಗ ವಂಚಿತರಾಗಿರುವ ಮಜೀದ್ ಅವರಿಗೆ ಈಗ ಒಂದು ತಾಂತ್ರಿಕ ಅಂಶದಲ್ಲಿ ಸಣ್ಣ ಭರವಸೆ ಮೂಡಿದೆ. ಅವರ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯ ಪ್ರಕಾರ ಅವರ ಜನ್ಮ ದಿನಾಂಕ ಮೇ 27, 1966 ಎಂದು ದಾಖಲಾಗಿದೆ (ಅದರಂತೆ ಅವರಿಗೆ 60 ವರ್ಷ ತುಂಬಿದೆ). ಆದರೆ, ತಮ್ಮ ನಿಜವಾದ ಜನ್ಮ ದಿನಾಂಕ ಮೇ 27, 1967 ಎಂದು ಮಜೀದ್ ವಾದಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಇಲಾಖೆ ಇವರ ಈ ದಾಖಲೆಯನ್ನು ಪರಿಶೀಲಿಸಿ ಜನ್ಮ ದಿನಾಂಕವನ್ನು ಸರಿಪಡಿಸಿದರೆ, ಇವರಿಗೆ ಸದ್ಯ 59 ವರ್ಷ ತುಂಬಿದಂತಾಗುತ್ತದೆ. ಆಗ ಇನ್ನು ಕನಿಷ್ಠ ಒಂದು ವರ್ಷವಾದರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಇವರಿಗೆ ಕಾನೂನಾತ್ಮಕವಾಗಿ ಅರ್ಹತೆ ಸಿಗುತ್ತದೆ.
ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಬ್ದುಲ್ ಮಜೀದ್ ಅವರು ಕೇರಳದ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕ ಮತ್ತು ವಕೀಲರಾದ ಎನ್. ಶಂಸುದ್ದೀನ್ ಅವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:53 am, Wed, 3 June 26