ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಿಸುವ ಕೇಂದ್ರದ ಕ್ರಮಕ್ಕೆ ಕೇರಳ ಮುಸ್ಲಿಂ ಸಂಘಟನೆಗಳ ವಿರೋಧ

Raising legal age of marriage for women: ಪುರುಷ ಮತ್ತು ಮಹಿಳೆಯರ ವಿವಾಹ ವಯೋಮಿತಿಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಸರ್ಕಾರ ಮಹಿಳೆಯರ ವಿವಾಹ ವಯೋಮಿತಿಯನ್ನು 21ಕ್ಕೆ ಏರಿಸಲು ನಿರ್ಧರಿಸಿದೆ. ಇದಕ್ಕೆ ಕೇರಳದ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕ್ರಿಶ್ಚಿಯನ್ ಸಂಘಟನೆಗಳು ಸ್ವಾಗತಿಸಿವೆ.

ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಿಸುವ ಕೇಂದ್ರದ ಕ್ರಮಕ್ಕೆ ಕೇರಳ ಮುಸ್ಲಿಂ ಸಂಘಟನೆಗಳ ವಿರೋಧ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: shivaprasad.hs

Dec 18, 2021 | 8:13 AM

ಪುರುಷ ಮತ್ತು ಮಹಿಳೆಯರ ವಿವಾಹ ವಯೋಮಿತಿಯಲ್ಲಿ ಏಕರೂಪತೆ ತರುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯನ್ನು ತರಲು ಸರ್ಕಾರ ಯೋಜಿಸಿದೆ. ಈ ನಿರ್ಧಾರವನ್ನು ಕೇರಳದ ಹಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ. ಆದರೆ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. ಮುಸ್ಲಿಂ ಲೀಗ್ ನಾಯಕ ಇಟಿ ಮೊಹಮ್ಮದ್ ಬಶೀರ್ ಶುಕ್ರವಾರ ಲೋಕಸಭೆಯಲ್ಲಿ ವಯೋಮಿತಿ ಹೆಚ್ಚಳದ ನಿರ್ಣಯ ಮಂಡಿಸಿ, ಈ ನಿರ್ಧಾರ ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿದೆ ಮತ್ತು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸುವ ಮತ್ತೊಂದು ಹೆಜ್ಜೆಯಾಗಿದೆ ಎಂದು ಹೇಳಿದರು. 

“ನಾವು ಇದನ್ನು ವಿರೋಧಿಸುತ್ತೇವೆ. ಸಂಘ ಪರಿವಾರದ ನೆಚ್ಚಿನ ಅಜೆಂಡಾವಾದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮದುವೆ, ವಿಚ್ಛೇದನ ಮತ್ತು ಆಸ್ತಿಯ ಹಕ್ಕನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಈ ಸಮಸ್ಯೆಗಳು ನಮ್ಮ ನಂಬಿಕೆಗೆ ಸಂಬಂಧಿಸಿವೆ,” ಎಂದು ಬಶೀರ್ ಹೇಳಿದರು. ಜತೆಗೆ ಈ ವಿಷಯದ ಬಗ್ಗೆ ಒಮ್ಮತವನ್ನು ರೂಪಿಸಲು ಇತರ ರಾಜಕೀಯ ಪಕ್ಷಗಳೊಂದಿಗೆ ಮಾತನಾಡುತ್ತೇನೆ ಎಂದೂ ಅವರು ಹೇಳಿದ್ದಾರೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಮುಸ್ಲಿಂ ಲೀಗ್‌ನ ಮಹಿಳಾ ವಿಭಾಗ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದು, ಮದುವೆಯ ವಯಸ್ಸನ್ನು ಏರಿಸುವುದು ‘ಲಿವ್-ಇನ್ ಸಂಬಂಧಗಳು ಮತ್ತು ನ್ಯಾಯಸಮ್ಮತವಲ್ಲದ ಸಂಬಂಧಗಳಿಗೆ’ ದಾರಿ ಮಾಡಿಕೊಡುತ್ತದೆ ಎಂದು ಹೇಳಿದೆ. ಸುನ್ನಿ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳ ಜಮೈತ್-ಉಲ್-ಉಲೇಮಾ ಮತ್ತು ಇತರ ಅನೇಕ ಧಾರ್ಮಿಕ ಸಂಸ್ಥೆಗಳು ಸಹ ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿವೆ..

ಮುಸ್ಲಿಂ ಸಂಸ್ಥೆಗಳ ವಿರೋಧಕ್ಕೆ ಸಿಪಿಐ(ಎಂ)ನ ಮಹಿಳಾ ವಿಭಾಗ, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಬೆಂಬಲ ನೀಡಿವೆ. ‘‘ನಾವು ಸರ್ಕಾರದ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತೇವೆ. ಇದು ಮಹಿಳೆಯರಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಲಿಂಗ ಅಂತರವನ್ನು ಕಡಿಮೆ ಮಾಡುವ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಬದಲು, ಕೋಮು ದೃಷ್ಟಿಕೋನದಿಂದ ಕೂಡಿದ ಹೊಸ ಕಾನೂನನ್ನು ಸರ್ಕಾರವು ಹೊರತರುತ್ತಿದೆ ಎಂದು ಎಐಡಿಡಬ್ಲ್ಯುಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಳ ಸ್ವಾಗತಿಸಿದ  ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್: ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಪುರುಷರು ಮತ್ತು ಮಹಿಳೆಯರ ಮದುವೆಯ ವಯಸ್ಸಿನಲ್ಲಿ ಏಕರೂಪತೆಯನ್ನು ತರುವ ನಿರ್ಧಾರವನ್ನು ಶ್ಲಾಘಿಸಿದೆ. ‘‘ಶಿಕ್ಷಣವು ಒಂದು ಪ್ರಮುಖ ಅಂಶವಾಗಿ ಉಳಿದಿದೆ ಎಂದು ನಾವು ಭಾವಿಸುತ್ತೇವೆ ಮತ್ತು 21 ರ ಹೊತ್ತಿಗೆ ಮಹಿಳೆಯರು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಅವಕಾಶವನ್ನು ಪಡೆಯುತ್ತಾರೆ. ಇದು ಪ್ರಬುದ್ಧ ಸಂಬಂಧ ಮತ್ತು ಆರೋಗ್ಯಕರ ಕುಟುಂಬಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ನಾವು ನಿರ್ಧಾರವನ್ನು ಸಕಾರಾತ್ಮಕವಾಗಿ ನೋಡುತ್ತೇವೆ’’ ಎಂದು ಕೆಸಿಬಿಸಿ ಕುಟುಂಬ ಆಯೋಗದ ಕಾರ್ಯದರ್ಶಿ ಫಾದರ್ ಪಾಲ್ ಸಿಮೆಂತಿ ಹೇಳಿದ್ದಾರೆ.

ಬಿಜೆಪಿ ವಕ್ತಾರ ಬಿ ಗೋಪಾಲಕೃಷ್ಣನ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ‘‘ಇದು ಮಹಿಳೆಯರ ಒಟ್ಟಾರೆ ಆರೋಗ್ಯವನ್ನು ರಕ್ಷಿಸುವ ಮತ್ತು ಪ್ರಬುದ್ಧತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಎಡಪಕ್ಷಗಳ ಮಹಿಳಾ ಘಟಕದಂತಹ ಪ್ರಗತಿಪರ ಶಕ್ತಿಗಳು ಇದನ್ನು ವಿರೋಧಿಸುತ್ತಿರುವುದು ಬೇಸರದ ಸಂಗತಿ. ಅದೇ ಶಕ್ತಿಗಳು ಒಮ್ಮೆ ತ್ರಿವಳಿ ತಲಾಖ್ ಅನ್ನು ವಿರೋಧಿಸಿದ್ದವು’’ ಎಂದಿದ್ದಾರೆ.

ಇದನ್ನೂ ಓದಿ:

ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ : ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ

Ganga Expressway: ಇಂದು ಪ್ರಧಾನಿ ಮೋದಿ ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ; ಗಂಗಾ ಎಕ್ಸ್​ಪ್ರೆಸ್​ ವೇಗೆ ಶಂಕುಸ್ಥಾಪನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada