Kerala Rain: ಕೇರಳದಲ್ಲಿ ಭಾರೀ ಮಳೆಯಿಂದ ಉಕ್ಕಿ ಹರಿದ ಪಂಬಾ ನದಿ; ಇಂದು ಶಬರಿಮಲೆ ಯಾತ್ರೆ ಸ್ಥಗಿತ

| Updated By: ಸುಷ್ಮಾ ಚಕ್ರೆ

Updated on: Nov 20, 2021 | 9:49 AM

Sabarimala Temple: ಭಾರೀ ಮಳೆಯಿಂದ ಕೇರಳದ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿದೆ. ಪಥನಾಂತಿಟ್ಟ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ಪಂಬಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಶಬರಿಮಲೆಗೆ ಇಂದು ಯಾತ್ರೆ ಕೈಗೊಳ್ಳದಂತೆ ಆದೇಶಿಸಲಾಗಿದೆ.

Kerala Rain: ಕೇರಳದಲ್ಲಿ ಭಾರೀ ಮಳೆಯಿಂದ ಉಕ್ಕಿ ಹರಿದ ಪಂಬಾ ನದಿ; ಇಂದು ಶಬರಿಮಲೆ ಯಾತ್ರೆ ಸ್ಥಗಿತ
ಶಬರಿಮಲೆ
Follow us on

ಪಥನಾಂತಿಟ್ಟ: ಕೇರಳ, ಆಂಧ್ರಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದೆ. ನಿರಂತರ ಮಳೆ ಹಾಗೂ ಪಂಬಾ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆಯ (Sabarimala) ಪ್ರಸಿದ್ಧ ಅಯ್ಯಪ್ಪ ದೇವಸ್ಥಾನಕ್ಕೆ ಇಂದು ಭಕ್ತರ ಯಾತ್ರೆಯನ್ನು ನಿಷೇಧಿಸಲಾಗಿದೆ. ಈ ಕುರಿತು ಕೇರಳದ ಪಥನಾಂತಿಟ್ಟ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಭಾರೀ ಮಳೆಯಿಂದ ಕೇರಳದ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿದೆ. ಪಥನಾಂತಿಟ್ಟ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವುದರಿಂದ ಪಂಬಾ ನದಿಯಲ್ಲಿ (Pamba River) ನೀರಿನ ಮಟ್ಟ ಏರಿಕೆಯಾಗಿದ್ದು, ಕಕ್ಕಿ-ಆನಾತೋಡ್ ಜಲಾಶಯಗಳ ಗೇಟ್‌ಗಳನ್ನು ತೆರೆಯಲಾಗಿದೆ. ಹಾಗೇ, ಪಂಬಾ ಅಣೆಕಟ್ಟಿನಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಯಾತ್ರಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಇಂದು ಪಂಬಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ಆದೇಶ ಹೊರಡಿಸಿದ್ದಾರೆ.

ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಅಯ್ಯಪ್ಪನ ದರ್ಶನಕ್ಕೆ ಬುಕ್ ಮಾಡಿರುವ ಯಾತ್ರಾರ್ಥಿಗಳಿಗೆ ಹವಾಮಾನ ಸರಿಯಾದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗುವುದು. ಮಳೆಯಿಂದ ಇಂದು ಶಬರಿಮಲೆಗೆ ಯಾತ್ರಾರ್ಥಿಗಳು ಪ್ರಯಾಣ ಕೈಗೊಳ್ಳದೆ ಸಹಕರಿಸುವಂತೆ ಕೋರುತ್ತೇವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೇರಳದಲ್ಲಿ ವಿಪರೀತ ಮಳೆಯಿದ್ದರೂ ನೂರಾರು ಭಕ್ತರು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಶಬರಿಮಲೆ ಬೆಟ್ಟವನ್ನು ಹತ್ತಿ ಚಾರಣ ಮಾಡುತ್ತಿದ್ದಾರೆ. ಎರಡು ತಿಂಗಳ ಕಾಲ ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗಾಗಿ ನವೆಂಬರ್ 16ರಂದು ಶಬರಿಮಲೆ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಮಳೆ ಮುಂದುವರೆಯುತ್ತಿದೆ. ಚೆನ್ನೈನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಆಂಧ್ರಪ್ರದೇಶದಲ್ಲಿ ಮಳೆಯಿಂದ 17 ಜನರು ಸಾವನ್ನಪ್ಪಿದ್ದಾರೆ, 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ.

ಪ್ರವಾಹದಿಂದಾಗಿ ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್​ಗಳು ಸಿಲುಕಿಕೊಂಡಿದ್ದು, ಇದರಿಂದಾಗಿ ಕನಿಷ್ಠ 12 ಜನರು ದುರ್ಮರಣಕ್ಕೀಡಾಗಿದ್ದಾರೆ. 18 ಜನ ನಾಪತ್ತೆಯಾಗಿದ್ದು, ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ (ಶುಕ್ರವಾರ, ನವೆಂಬರ್ 19) ಸುರಿದ ಮಳೆಗೆ ಪರ್ವಾಹ ಪರಿಸ್ಥಿತಿ ಉಂಟಾಗಿದೆ. ರಾಜಾಂಪೇಟ್ ಪ್ರದೇಶದಲ್ಲಿ ಪರಿಹಾರ ಕಾರ್ಯಾವಚರಣೆ ನಡೆಯುತ್ತಿದ್ದು, ಇದುವರೆಗೆ 12 ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

ತಮಿಳುನಾಡಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ. ನಿನ್ನೆ ಸಂಜೆ ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದ ಮನೆ ಕುಸಿದ ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ 9 ಜನರು ಸಾವನ್ನಪ್ಪಿದ್ದರು. ಮನೆಯ ಗೋಡೆ ಕುಸಿದು ಮನೆಯಲ್ಲಿ ವಾಸವಾಗಿದ್ದ ನಾಲ್ವರು ಮಹಿಳೆಯರು, ನಾಲ್ಕು ಮಕ್ಕಳು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಕೂಡ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ದಿಂಡುಗಲ್, ಪುದುಕೊಟ್ಟೈ, ತೇಣಿ, ವೆಲ್ಲೂರು, ಅರಿಯಲ್ಲೂರು, ನಾಗಪಟ್ಟಣಂ, ವಿಲ್ಲುಪುರ, ತಿರುವಾರೂರ್, ಮೈಲಾಡುಧುರೈ, ಕಲ್ಲಕುರಿಚಿ, ಕಡಲೂರು, ವಿಲ್ಲಿಪುರಂ, ತಂಜಾವೂರು ಮತ್ತು ಧರ್ಮಪುರಿಯಲ್ಲಿ ಶಾಲಾ- ಕಾಲೇಜುಗಳು ಮುಚ್ಚಲಿವೆ. ಇಂದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ.

ಇದನ್ನೂ ಓದಿ: Andhra Pradesh Rain: ಮಳೆಗೆ ನಲುಗಿದ ರಾಯಲಸೀಮೆ ಪ್ರಾಂತ್ಯ; ಒಟ್ಟು 17 ಮಂದಿ ಸಾವು, 100ಕ್ಕೂ ಅಧಿಕ ಜನ ನಾಪತ್ತೆ

Karnataka Dams Water Level: ರಾಜ್ಯಾದ್ಯಂತ ಮಳೆ ಅವಾಂತರ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Published On - 9:48 am, Sat, 20 November 21