Gender neutral ಶಿಕ್ಷಕರನ್ನು ಸರ್, ಮೇಡಂ ಎನ್ನುವ ಬದಲು ಟೀಚರ್ ಎಂದು ಸಂಬೋಧಿಸಲು ವಿದ್ಯಾರ್ಥಿಗಳಿಗೆ ನಿರ್ದೇಶಿಸಿದ ಕೇರಳದ ಶಾಲೆ
ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ, ಕೇರಳದ ಪಾಲಕ್ಕಾಡ್ ಜಿಲ್ಲೆಯ ಓಲಶ್ಶೇರಿ ಹಿರಿಯ ಮೂಲ ಶಾಲೆಯು ತನ್ನ ವಿದ್ಯಾರ್ಥಿಗಳನ್ನು ಇನ್ನು ಮುಂದೆ ತಮ್ಮ ಶಿಕ್ಷಕರನ್ನು ಸರ್ ಅಥವಾ ಮೇಡಂ ಎಂದು ಸಂಬೋಧಿಸದಂತೆ ಕೇಳಿಕೊಂಡಿದೆ.
ಕೇರಳದ (kerala) ಶಾಲಾ ವಿದ್ಯಾರ್ಥಿಗಳು ಇನ್ನು ಮುಂದೆ ಶಿಕ್ಷಕರನ್ನು ಸರ್ ಅಥವಾ ಮೇಡಂ ಎಂದು ಕರೆಯುವುದಿಲ್ಲ. ಬದಲಾಗಿ, ರಾಜ್ಯದಾದ್ಯಂತ ಶಾಲೆಗಳು ಜೆಂಡರ್ ನ್ಯೂಟ್ರಲ್ (gender-neutral) ಪದ ‘ಟೀಚರ್’ (Teacher)ಅನ್ನು ಬಳಸುತ್ತವೆ. ಲಿಂಗ ಸಮಾನತೆಯ (gender equality) ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ, ಕೇರಳದ ಪಾಲಕ್ಕಾಡ್ ಜಿಲ್ಲೆಯ ಓಲಶ್ಶೇರಿ ಹಿರಿಯ ಬೇಸಿಕ್ ಸ್ಕೂಲ್ (Senior Basic School) ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ಶಿಕ್ಷಕರನ್ನು ಸರ್ ಅಥವಾ ಮೇಡಂ ಎಂದು ಸಂಬೋಧಿಸದಂತೆ ಕೇಳಿಕೊಂಡಿದೆ. ಬದಲಾಗಿ, ಡಿಸೆಂಬರ್ 1, 2021 ರಿಂದ ಬೋಧನಾ ಅಧ್ಯಾಪಕರನ್ನು ಕೇವಲ ‘ಟೀಚರ್’ ಎಂದು ಸಂಬೋಧಿಸಲು ವಿದ್ಯಾರ್ಥಿಗಳಿಗೆ ನಿರ್ದೇಶಿಸಲಾಗಿದೆ. ಓಲಶ್ಶೇರಿ (Olassery) ಬೇಸಿಕ್ ಶಾಲೆಯಲ್ಲಿ ಒಂಬತ್ತು ಮಹಿಳೆಯರು ಮತ್ತು ಎಂಟು ಪುರುಷ ಬೋಧಕ ಸಿಬ್ಬಂದಿಯೊಂದಿಗೆ ಸುಮಾರು 300 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ಪ್ರಾಂಶುಪಾಲರಾದ ಎಚ್.ವೇಣುಗೋಪಾಲನ್ ಅವರ ಪ್ರಕಾರ, ಅಧ್ಯಾಪಕರನ್ನು ಸರ್ ಮತ್ತು ಮೇಡಂ ಎಂದು ಕರೆಯುವ ಬದಲು ಟೀಚರ್ ಎಂದು ಸಂಬೋಧಿಸುವ ಆಲೋಚನೆಯನ್ನು ಸಿಬ್ಬಂದಿಯಲ್ಲಿ ಒಬ್ಬರಾದ ಸಂಜೀವ್ ಕುಮಾರ್ ಮುಂದಿಟ್ಟರು. ನಂತರ ಸಿಬ್ಬಂದಿ ಮಂಡಳಿಯ ಅನುಮೋದನೆಯೂ ಸಿಕ್ಕಿತು.
ಸರ್ಕಾರಿ ಅಧಿಕಾರಿಗಳಿಗೆ ಜೆಂಡರ್ ನ್ಯೂಟ್ರಲ್ ಶೀರ್ಷಿಕೆಗಳನ್ನು ಪ್ರತಿಪಾದಿಸುವ ಸಾಮಾಜಿಕ ಕಾರ್ಯಕರ್ತ ಬೋಬನ್ ಮಾಟ್ಟುಮಂತ ಅವರ ಅಭಿಯಾನದಿಂದ ಶಿಕ್ಷಕರು ಸ್ಫೂರ್ತಿ ಪಡೆದಿದ್ದಾರೆ ಎಂದು ವೇಣುಗೋಪಾಲನ್ ದಿ ಟೆಲಿಗ್ರಾಫ್‌ಗೆ ತಿಳಿಸಿದರು. ಜನರು ಅವರನ್ನು ಸರ್, ಮೇಡಂ ಎಂದು ಕರೆಯುವ ಪರಿಪಾಠವನ್ನು ತೊಲಗಿಸಬೇಕು ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರ ಹೆಜ್ಜೆಗಳನ್ನು ಅನುಸರಿಸಿ, ಸಂಜೀವ್ ಈ ಆಲೋಚನೆಯನ್ನು ಪ್ರಸ್ತಾಪಿಸಿದರು ಮತ್ತು ಅವರ ಸಹ ಶಿಕ್ಷಕರು ಮತ್ತು ಸಿಬ್ಬಂದಿ ಮಂಡಳಿ ಇದನ್ನು ಬೆಂಬಲಿಸಿತು ಎಂದಿದ್ದಾರೆ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ‘ಸರ್’ ಮತ್ತು ‘ಮೇಡಂ’ ಬಳಕೆಯನ್ನು ನಿಷೇಧಿಸಿದ ಹತ್ತಿರದ ಪಂಚಾಯತ್‌ನಿಂದ ಈ ಶಾಲೆ ಸ್ಫೂರ್ತಿ ಪಡೆದಿದೆ. ಮಾಥುರ್ ಪಂಚಾಯತ್ ವಸಾಹತುಶಾಹಿ ನಮಸ್ಕಾರಗಳನ್ನು ಸಹ ಕೈಬಿಟ್ಟಿದೆ ಮತ್ತು ಪಂಚಾಯತ್‌ನಿಂದ ಯಾವುದೇ ಸೇವೆಗಳನ್ನು ಪಡೆಯಲು ನಾಗರಿಕರು “ಬೇಡಿಕೆ” ಯೊಡ್ಡಬೇಕು ವಿನಮ್ರವಾಗಿ ವಿನಂತಿಸುವ ಅಗತ್ಯವಿಲ್ಲ ಎಂದು ಹೇಳಿತ್ತು.
ಅಂದ ಹಾಗೆ ಇದು ಜೆಂಡರ್ ನ್ಯೂಟ್ರಾಲಿಟಿ ಬಗ್ಗೆ ತೆಗೆದುಕೊಂಡ ಮೊದಲ ಹೆಜ್ಜೆಯಲ್ಲ. ಇತ್ತೀಚೆಗೆ, ರಾಜ್ಯದ ಹಲವಾರು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಜೆಂಡರ್ ನ್ಯೂಟ್ರಲ್ ಸಮವಸ್ತ್ರವನ್ನು ಅಳವಡಿಸಿಕೊಂಡಿವೆ. ಕೊಯಿಕ್ಕೋಡ್ ಜಿಲ್ಲೆಯ ಬಾಲುಶ್ಶೇರಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯು ಇದಕ್ಕಾಗಿ ಉಪಕ್ರಮವನ್ನು ತೆಗೆದುಕೊಂಡಿದ್ದು ಯುನಿಸೆಕ್ಸ್ ಸಮವಸ್ತ್ರವನ್ನು ಅಳವಡಿಸಿದ ಮೊದಲ ಶಾಲೆಯಾಗಿದೆ. ಕೇರಳದ ಒಂದು ಡಜನ್ ಶಾಲೆಗಳು ಹೊಸ ಜೆಂಡರ್ ನ್ಯೂಟ್ರಲ್ ಸಮವಸ್ತ್ರಕ್ಕೆ ಬದಲಾಗಿವೆ. ಆದರೆ ಇನ್ನೂ ಅನೇಕ ಶಾಲೆಗಳು ಕ್ರಮೇಣ ಇದನ್ನು ಅನುಸರಿಸುವ ಸಾಧ್ಯತೆಯಿದೆ. ಈ ನಿರ್ಧಾರಕ್ಕೆ ಬೆಂಬಲವನ್ನು ವಿಸ್ತರಿಸಿರುವ ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ, ರಾಜ್ಯ ಸರ್ಕಾರವು ಯಾವುದೇ ಲಿಂಗ ಪಕ್ಷಪಾತವಿಲ್ಲದೆ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Gender neutral uniforms ಕೇರಳದಲ್ಲಿ ಶಾಲಾಮಕ್ಕಳಿಗೆ ಜೆಂಡರ್ ನ್ಯೂಟ್ರಲ್ ಸಮವಸ್ತ್ರ, ವಿರೋಧವೇಕೆ?