Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh Elections: ಗೆಲುವಿನ ಏಣಿಯಾಗಬಲ್ಲ ಒಬಿಸಿ ನಾಯಕರಿಗೆ ಗಾಳ ಹಾಕುತ್ತಿದೆ ಎಸ್​ಪಿ, ಫಲ ಕೊಟ್ಟೀತೆ ಅಖಿಲೇಶ್ ಯಾದವ್ ತಂತ್ರ

ಬಿಜೆಪಿ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನದೇ ಆದ ಸೋಷಿಯಲ್ ಎಂಜಿನಿಯರಿಂಗ್ ನಡೆಸಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಈಗ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಇದೇ ತಂತ್ರ ಅನುಸರಿಸುತ್ತಿದ್ದಾರೆ.

Uttar Pradesh Elections: ಗೆಲುವಿನ ಏಣಿಯಾಗಬಲ್ಲ ಒಬಿಸಿ ನಾಯಕರಿಗೆ ಗಾಳ ಹಾಕುತ್ತಿದೆ ಎಸ್​ಪಿ, ಫಲ ಕೊಟ್ಟೀತೆ ಅಖಿಲೇಶ್ ಯಾದವ್ ತಂತ್ರ
ಅಖಿಲೇಶ್ ಯಾದವ್
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 13, 2022 | 6:37 PM

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನದೇ ಆದ ಸೋಷಿಯಲ್ ಎಂಜಿನಿಯರಿಂಗ್ ನಡೆಸಿ ಅಧಿಕಾರದ ಗದ್ದುಗೆ ಹಿಡಿದಿತ್ತು. ಈ ಬಾರಿ ಬಿಜೆಪಿಯ ತಂತ್ರವನ್ನು ಬಿಜೆಪಿಯ ವಿರುದ್ಧವೇ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಬಳಸುತ್ತಿದ್ದಾರೆ. ಇದರಿಂದಾಗಿ ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್ ಯಾದವ್​ಗೆ ನಿಜಕ್ಕೂ ಲಾಭವಾಗುತ್ತಾ ಎಂಬುದೇ ಈಗಿರುವ ಕುತೂಹಲ.

ಉತ್ತರ ಪ್ರದೇಶದಲ್ಲಿ ಫೆ.10ರಿಂದ ಮೊದಲ ಹಂತದ ಮತದಾನ ಆರಂಭವಾಗಲಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಪಕ್ಷಾಂತರ ಪರ್ವ ಕೂಡ ಆರಂಭವಾಗಿದೆ. ಈಗಾಗಲೇ ಬಿಜೆಪಿ ಪಕ್ಷದ ಏಳು ಮಂದಿ ಶಾಸಕರು, ಮೂವರು ಸಚಿವರು ಬಿಜೆಪಿ ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪಕ್ಷವು ಸಮಾಜವಾದಿ ಪಕ್ಷದ ಓರ್ವ ಶಾಸಕ, ಕಾಂಗ್ರೆಸ್ ಪಕ್ಷದ ಓರ್ವ ಶಾಸಕನನ್ನು ತನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಆದರೆ, ಚುನಾವಣೆ ಹೊತ್ತಿನಲ್ಲಿ ಶಾಸಕರು ಪಕ್ಷ ತೊರೆಯುತ್ತಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಬಿಜೆಪಿ ಪಕ್ಷ ಈ ಬಾರಿ ಹಾಲಿ ಶಾಸಕರ ಪೈಕಿ ಕನಿಷ್ಠ 100 ಮಂದಿಗೆ ಮತ್ತೆ ಟಿಕೆಟ್ ನೀಡುತ್ತಿರಲಿಲ್ಲ. ಹೀಗಾಗಿ ಟಿಕೆಟ್ ಸಿಗದವರು ಪಕ್ಷ ತೊರೆಯುತ್ತಿದ್ದಾರಾ ಎಂದು ನೋಡಿದರೆ, ಅದು ಕೂಡ ಇಲ್ಲ. ಪಕ್ಷ ತೊರೆಯುತ್ತಿರುವ ಶಾಸಕರೆಲ್ಲಾ ಒಬಿಸಿ ಸಮುದಾಯಗಳ ನಾಯಕರು. ತಮ್ಮ ಸಮುದಾಯಗಳ ಮೇಲೆ ಹಿಡಿತ ಹೊಂದಿರುವವರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಡೆಸುತ್ತಿರುವ ಸೋಷಿಯಲ್ ಎಂಜಿನಿಯರಿಂಗ್ ಭಾಗವಾಗಿ ಬಿಜೆಪಿಯಲ್ಲಿದ್ದ ಯಾದವೇತರ ಓಬಿಸಿ ಸಮುದಾಯದ ನಾಯಕರೇ ಈಗ ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಬಿಜೆಪಿಯ ಒಬಿಸಿ ನಾಯಕರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. ಆದರೆ, ಕಳೆದ 3 ದಿನಗಳಲ್ಲಿ 7 ಶಾಸಕರು ಬಿಜೆಪಿ ಪಕ್ಷ ತ್ಯಜಿಸಿದ್ದಾರೆ.

ಬಿಜೆಪಿ ವಿರುದ್ದ ಅದರದ್ದೇ ತಂತ್ರ ಬಳಕೆ 2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಯಾದವ್ ಹೊರತುಪಡಿಸಿ ಉಳಿದ ಒಬಿಸಿ ಸಮುದಾಯಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವ ತಂತ್ರ ಅನುಸರಿಸಿತ್ತು. ಈಗ ಅದೇ ತಂತ್ರವನ್ನು ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಅನುಸರಿಸುತ್ತಿದ್ದಾರೆ. ಅಖಿಲೇಶ್ ಯಾದವ್ ನಡೆಸುತ್ತಿರುವ ಸೋಷಿಯಲ್ ಎಂಜಿನಿಯರಿಂಗ್ ಭಾಗವಾಗಿ ಉತ್ತರ ಪ್ರದೇಶ ಸಂಪುಟದಲ್ಲಿ ಸಚಿವರಾಗಿದ್ದ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್, ಧರ್ಮಸಿಂಗ್ ಸೈನಿ ಬಿಜೆಪಿ ತ್ಯಜಿಸಿದ್ದಾರೆ. ಈ ಮೂವರು ತಮ್ಮತಮ್ಮ ಸಮುದಾಯಗಳಲ್ಲಿ ಪ್ರಭಾವಿಗಳಾದವರು. ತಮ್ಮ ಸಮುದಾಯಗಳ ಮೇಲೆ ಹಿಡಿತ ಹೊಂದಿರುವವರು. ಇದರಿಂದಾಗಿ ಉತ್ತರಪ್ರದೇಶದಲ್ಲಿ ಜಾತಿ ಲೆಕ್ಕಾಚಾರ ಎಸ್​ಪಿ ಪಕ್ಷಕ್ಕೆ ಅನುಕೂಲವಾಗುತ್ತಾ? ಎಂಬ ಚರ್ಚೆ ನಡೆಯುತ್ತಿದೆ. ಅಖಿಲೇಶ್ ಯಾದವ್ ಅವರು ಸಹ ಇದೀಗ ಯಾದವ್ ಹೊರತುಪಡಿಸಿ ಉಳಿದ ಒಬಿಸಿ ಸಮುದಾಯಗಳನ್ನು ತಮ್ಮತ್ತ ಸೆಳೆಯಲು ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ.

ಏಕೆಂದರೆ, ಸಮಾಜವಾದಿ ಪಕ್ಷಕ್ಕೆ ಯಾದವ್ ಸಮುದಾಯ ಹಾಗೂ ಮುಸ್ಲಿಂ ಸಮುದಾಯದ ಭದ್ರ ವೋಟ್ ಬ್ಯಾಂಕ್ ಇದೆ. ಈ ವೋಟ್ ಬ್ಯಾಂಕ್ ಆಚೆಗೂ ಮತಗಳನ್ನು ಗಳಿಸಿದರೆ ಮಾತ್ರವೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎಂಬುದು ಅಖಿಲೇಶ್ ಯಾದವ್​ಗೆ ಅರಿವಾಗಿದೆ. ಈ ಕಾರಣಕ್ಕಾಗಿ ಯಾದವ್ ಸಮುದಾಯದ ಜೊತೆಗೆ ಉಳಿದ ಒಬಿಸಿ ಮತಗಳನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಲಾಲ್ ಜೀ ವರ್ಮಾ ಹಾಗೂ ರಾಮಚಲ್ ರಾಜಭರ್​ರಂಥ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಯಾದವ್ ಹೊರತುಪಡಿಸಿ ಇತರೆ ಒಬಿಸಿ ನಾಯಕರಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಎರಡನೇ ಪ್ರಭಾವಿ ನಾಯಕ. ಸ್ವಾಮಿ ಪ್ರಸಾದ್ ಮೌರ್ಯ ಕಳೆದ 3 ದಶಕಗಳಿಂದ ಉತ್ತರ ಪ್ರದೇಶ ರಾಜಕಾರಣದಲ್ಲಿ ಸಕ್ರಿಯವಾಗಿರುವ ನಾಯಕ. 2016ರಲ್ಲಿ ಬಿಜೆಪಿ ಸೇರುವ ಮುನ್ನ ಬಿಎಸ್​ಪಿ ಪಕ್ಷದಲ್ಲಿದ್ದರು. ಬೌದ್ಧ ಧರ್ಮ, ಅಂಬೇಡ್ಕರ್ ವಾದ ಹಾಗೂ ಕಾನ್ಷಿರಾಮ್ ತತ್ವಗಳ ಪರಿಪಾಲಕ. ಆದರೆ, ಸ್ವಾಮಿ ಪ್ರಸಾದ್ ಮೌರ್ಯ, ಸಿದ್ದಾಂತಕ್ಕಿಂತ ಹೆಚ್ಚಾಗಿ ಅವಕಾಶವಾದಿ ಎಂಬ ಟೀಕೆಯೂ ಇದೆ. ಈಗ ಎಸ್ಪಿ ಪಕ್ಷ ಸೇರುತ್ತಿರುವುದರಿಂದ ಎಸ್ಪಿ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಯಾದವ್, ಕುರ್ಮಿ ಸಮುದಾಯಗಳ ಬಳಿಕ ಸ್ವಾಮಿಪ್ರಸಾದ್ ಮೌರ್ಯ ಅವರ ಮೌರ್ಯ ಸಮುದಾಯವು ಒಬಿಸಿಗಳಲ್ಲಿ ಮೂರನೇ ಅತಿ ದೊಡ್ಡ ಸಮುದಾಯ. ಸ್ವಾಮಿ ಪ್ರಸಾದ್ ಮೌರ್ಯ ತಮ್ಮನ್ನು ಎಲ್ಲ ಸಮುದಾಯಗಳ ನಾಯಕ ಎಂದು ಬಿಂಬಿಸಿಕೊಂಡಿಲಿಲ್ಲ. ತಮ್ಮನ್ನು ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕ ಎಂದೇ ಬಿಂಬಿಸಿಕೊಂಡಿದ್ದಾರೆ.

ಸ್ವಾಮಿ ಪ್ರಸಾದ್ ಮೌರ್ಯ ಜೊತೆಗೆ ಇನ್ನೂ ಕೆಲ ನಾಯಕರನ್ನು ಎಸ್​ಪಿ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಪ್ರಜಾಪತಿ ಒಬಿಸಿ ಸಮುದಾಯದ ಬ್ರಿಜೇಶ್ ಪ್ರಜಾಪತಿ, ಕುರೀಲ್ ದಲಿತ ಸಮುದಾಯದ ಭಗವತಿ ಸಾಗರ್, ಲೋಧಾ ಸಮುದಾಯದ ರೋಶನ್ ಲಾಲ್ ವರ್ಮಾ, ಮೌರ್ಯ ಸಮುದಾಯದ ವಿನಯ್ ಶಕ್ಯರನ್ನು ಸೆಳೆಯಲು ಎಸ್​ಪಿ ಪ್ರಯತ್ನಿಸುತ್ತಿದೆ.

ದಾರಾಸಿಂಗ್ ಚೌಹಾಣ್, ನೋನಿಯಾ ಒಬಿಸಿ ಸಮುದಾಯಕ್ಕೆ ಸೇರಿದವರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡ ವೋಟ್ ಬ್ಯಾಂಕ್ ಆಗಿದ್ದ ಸಮುದಾಯ ಇದು. 2017ರಲ್ಲಿ ದಾರಾಸಿಂಗ್ ಚೌಹಾಣ್, ಬಿಎಸ್​ಪಿ ತ್ಯಜಿಸಿ ಬಿಜೆಪಿ ಸೇರಿದವರು. ಈಗ ಎಸ್​ಪಿ ಸೇರಿದ್ದಾರೆ. ಬಿಎಸ್​ಪಿಯಲ್ಲಿದ್ದಾಗ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2004ರಲ್ಲಿ ಎಸ್​ಪಿ ಸೇರಿ ಲೋಕಸಭೆಗೆ ಸ್ಪರ್ಧಿಸಿದ್ದರು. ಬಳಿಕ ಮತ್ತೆ ಬಿಎಸ್​ಪಿಗೆ ವಾಪಸ್ ಹೋಗಿದ್ದರು. 2009ರಲ್ಲಿ ಗೋಸಿ ಲೋಕಸಭಾ ಕ್ಷೇತ್ರದಿಂದ ಬಿಎಸ್​ಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2014ರ ಮೋದಿ ಅಲೆಯಲ್ಲಿ ದಾರಾಸಿಂಗ್ ಚೌಹಾಣ್ ಸೋಲು ಅನುಭವಿಸಿದ್ದರು. 2017ರಲ್ಲಿ ಬಿಜೆಪಿ ಸೇರಿದ್ದ ದಾರಾಸಿಂಗ್ ಚೌಹಾಣ್​ರನ್ನು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ದಾರಾಸಿಂಗ್ ಚೌಹಾಣ್ ಸಹಾಯದಿಂದ ನೋನಿಯಾ ಸಮುದಾಯದ ಮತಗಳನ್ನು ಎಸ್ಪಿ ಪಕ್ಷದತ್ತ ಸೆಳೆಯಲು ಅಖಿಲೇಶ್ ಯಾದವ್ ಯತ್ನಿಸುತ್ತಿದ್ದಾರೆ.

ಅಖಿಲೇಶ್ ಯಾದವ್ ಈಗಾಗಲೇ ಉತ್ತರ ಪ್ರದೇಶದಲ್ಲಿ ಒಬಿಸಿ ಸಮುದಾಯದ ಸಣ್ಣ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ದೂರ ಸರಿದಿದ್ದ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಜೊತೆಗೂ ಮೈತ್ರಿ ಮಾಡಿಕೊಂಡಿದ್ದಾರೆ. ಸುಹೇಲ್ ದೇವ್ ರಾಜಭರ್, ಜಾಟ್ ಸಮುದಾಯದಲ್ಲಿ ಪ್ರಭಾವಿಯಾಗಿರುವ ರಾಷ್ಟ್ರೀಯ ಲೋಕದಳ ಪಕ್ಷದ ಜಯಂತ್‌ ಚೌಧರಿ ಮೈತ್ರಿ ಮಾಡಿಕೊಂಡಿದ್ದಾರೆ. ಸಣ್ಣ ರಾಜಕೀಯ ಪಕ್ಷಗಳ ಜೊತೆಗಿನ ಮೈತ್ರಿ ಮೂಲಕ ಹಿಂದೆಯೇ ಸೋಷಿಯಲ್ ಎಂಜಿನಿಯರಿಂಗ್​ನ ಹೊಸ ದಾಳ ಉರುಳಿಸಿದ್ದರು. ಚುನಾವಣೆ ಘೋಷಣೆಯ ಬಳಿಕವೂ ಅದನ್ನು ಮುಂದುವರಿಸಿದ್ದಾರೆ. ಸಮಾಜವಾದಿ ಪಕ್ಷದ ಅಧಿನಾಯಕ ಮುಲಾಯಂ ಸಿಂಗ್ ಯಾದವ್​ಗೆ ಮೊದಲೇ ಮೌಲಾನಾ ಮುಲಾಯಂ ಎಂಬ ಹೆಸರಿದೆ. ಅಂದರೆ, ಮುಲಾಯಂ ಸಿಂಗ್ ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಇದ್ದಂತೆ. 1989ರಲ್ಲಿ ಅಯೋಧ್ಯೆಯಲ್ಲಿ ಹಿಂದೂ ಕರಸೇವಕರ ಮೇಲೆ ಮುಲಾಯಂ ಸಿಂಗ್ ಸರ್ಕಾರ ಗೋಲಿಬಾರ್ ನಡೆಸಿದ ಬಳಿಕ ಮುಲಾಯಂ ಸಿಂಗ್​ಗೆ ಮೌಲಾನಾ ಮುಲಾಯಂ ಎಂಬ ಹೆಸರು ಬಂದಿದೆ. ಯಾದವ್ ಮತ್ತು ಮುಸ್ಲಿಂ ಮತಗಳು ಎಸ್​ಪಿ ಪಕ್ಷದ ಪ್ರಬಲ ವೋಟ್ ಬ್ಯಾಂಕ್. ಈ ವೋಟ್ ಬ್ಯಾಂಕ್ ಜೊತೆಗೆ ಈಗ ಒಬಿಸಿ ಸಮುದಾಯಗಳ ಮತಬ್ಯಾಂಕ್ ಸೆಳೆಯುವ ಪ್ರಯತ್ನವೂ ಜೋರಾಗಿ ನಡೆಯುತ್ತಿದೆ.

13 ಮಂದಿ ಬಿಜೆಪಿ ಶಾಸಕರು ಎಸ್​ಪಿ ಸೇರುತ್ತಾರೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದರು. ಎನ್‌ಸಿಪಿ ಪಕ್ಷವು ಉತ್ತರ ಪ್ರದೇಶದಲ್ಲಿ ಎಸ್​ಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತಿದೆ. ಶರದ್ ಪವಾರ್ ಅವರನ್ನು ಎಸ್​ಪಿ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಅಖಿಲೇಶ್ ಯಾದವ್ ಆಹ್ವಾನಿಸಿದ್ದಾರೆ. ಆದರೆ, ಬಿಜೆಪಿ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರೆ ಅತಿದೊಡ್ಡ ಒಬಿಸಿ ನಾಯಕ. ಬಿಜೆಪಿಯಲ್ಲಿ ಮೌರ್ಯ ಸಮುದಾಯದ ಕೇಶವಪ್ರಸಾದ್ ಮೌರ್ಯ ಈಗ ಡಿಸಿಎಂ ಆಗಿದ್ದಾರೆ. 2017ರಲ್ಲಿ ಶೇ 40ರಷ್ಟು ಮತಗಳೊಂದಿಗೆ ಬಿಜೆಪಿ ಪಕ್ಷ ಉತ್ತರ ಪ್ರದೇಶ ವಿಧಾನಸಭೆಯ 403 ಕ್ಷೇತ್ರಗಳ ಪೈಕಿ 312 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಎನ್‌ಡಿಎ 321 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈಗ ಯಾವುದೇ ಪಕ್ಷಕ್ಕೆ ಬಹುಮತ ಗಳಿಸಬೇಕಾದರೂ, ಶೇ 30ಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಲೇಬೇಕು.

ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಎಸ್​ಪಿ 47 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಪಕ್ಷ 7 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಬಿಎಸ್​ಪಿ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಶೇ 22ರಷ್ಟು ಮತ ಗಳಿಸಿತ್ತು. ಕಳೆದ ಚುನಾವಣೆಯಲ್ಲಿ ನಾವು 47 ಕ್ಷೇತ್ರಗಳಲ್ಲಿ ಗೆದ್ದಿದ್ದೆವು. ಈ ಬಾರಿ 400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ ಆದ 202 ಕ್ಷೇತ್ರ ಗೆದ್ದವರಿಗೆ ಸಿಎಂ ಹುದ್ದೆ ಒಲಿಯಲಿದೆ. ಮಾರ್ಚ್ 10ರಂದು ಉತ್ತರ ಪ್ರದೇಶದ ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಬಗ್ಗೆ ಜನರು ಕೊಡುವ ತೀರ್ಪು ಬಹಿರಂಗವಾಗಲಿದೆ.

ಇದನ್ನೂ ಓದಿ: ದಾರಾ ಸಿಂಗ್ ಚೌಹಾಣ್ ಜತೆಗಿರುವ ಫೋಟೊ ಟ್ವೀಟ್ ಮಾಡಿ ಸ್ವಾಗತ ಎಂದ ಅಖಿಲೇಶ್ ಯಾದವ್ ಇದನ್ನೂ ಓದಿ: ನನ್ನ ಕನಸಲ್ಲಿ ಪ್ರತಿದಿನ ಶ್ರೀಕೃಷ್ಣ ಬರುತ್ತಿದ್ದಾನೆ, ರಾಮರಾಜ್ಯ ಸ್ಥಾಪಿಸುವಂತೆ ಹೇಳುತ್ತಿದ್ದಾನೆ: ಅಖಿಲೇಶ್ ಯಾದವ್​​

Published On - 6:37 pm, Thu, 13 January 22

ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?