Kinnaur Landslide: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; 1 ಶವ ಪತ್ತೆ, 10 ಜನರ ರಕ್ಷಣೆ, ಸುಮಾರು 50 ಜನ ನಾಪತ್ತೆ

Himachal Pradesh Landslide | ಹಿಮಾಚಲ ಪ್ರದೇಶದ ಕಿಣ್ಣಾವುರ್​ನಲ್ಲಿ ಭೂಕುಸಿತವಾಗಿದ್ದು, 50ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಈಗಾಗಲೇ 10 ಜನರನ್ನು ರಕ್ಷಿಸಲಾಗಿದ್ದು, ಒಬ್ಬರ ಶವವನ್ನು ಹೊರಗೆ ತೆಗೆಯಲಾಗಿದೆ.

Kinnaur Landslide: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; 1 ಶವ ಪತ್ತೆ, 10 ಜನರ ರಕ್ಷಣೆ, ಸುಮಾರು 50 ಜನ ನಾಪತ್ತೆ
ಭೂಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 11, 2021 | 4:36 PM

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಭಾರೀ ಭೂಕುಸಿತ ಉಂಟಾಗಿದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್, ಟ್ರಕ್ ಕೂಡ ಅವಶೇಷಗಳಡಿ ಸಿಲುಕಿವೆ. ಈ ವಾಹನಗಳಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದಾರೆ. ಈಗಾಗಲೇ 10 ಜನರನ್ನು ರಕ್ಷಣೆ ಮಾಡಲಾಗಿದ್ದು, ಒಂದು ಶವವನ್ನು ಹೊರಗೆ ತೆಗೆಯಲಾಗಿದೆ. ಹಿಮಾಚಲ ಪ್ರದೇಶದ ಕಿಣ್ಣಾವುರ್ (Kinnaur Landslide) ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ (Rescue Operation) ಮುಂದುವರೆದಿದೆ.

ಕಿಣ್ಣಾವುರ್​ನಲ್ಲಿ ಇಂದು ಮಧ್ಯಾಹ್ನ 12.45ಕ್ಕೆ ಈ ಭೂಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ಹಿಮಾಚಲ ಪ್ರದೇಶದ ಸಾರಿಗೆ ಬಸ್ ಸಂಚರಿಸುತ್ತಿದ್ದಾಗಲೇ ಭೂಕುಸಿತ ಉಂಟಾಗಿದ್ದು, ಬಸ್​ ಹಾಗೂ ಅದರ ಹಿಂದೆ ಮುಂದೆ ಬರುತ್ತಿದ್ದ ಕೆಲವು ವಾಹನಗಳು ಕೂಡ ಮಣ್ಣಿನಡಿ ಮುಚ್ಚಿಹೋಗಿವೆ. ಆ ಬಸ್​ನಲ್ಲಿದ್ದ 40ಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿದ್ದಾರೆ. ಇದರ ಜೊತೆ ಟ್ರಕ್ ಹಾಗೂ ಕಾರುಗಳಲ್ಲಿದ್ದ ಸುಮಾರು 10 ಜನರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಕರೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಕುಸಿತದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದಷ್ಟು ಬೇಗ ರಕ್ಷಣಾ ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರವಲ್ಲದೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಹಿಮಾಚಲ ಪ್ರದೇಶದ ಭೂ ಕುಸಿತದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಹೆಚ್​ಆರ್​ಸಿಟಿಸಿ ಸಾರಿಗೆ ಬಸ್, ಟ್ರಕ್, ಕಾರುಗಳು ಭೂಕುಸಿತದಿಂದ ಮಣ್ಣಿನಡಿ ಮುಚ್ಚಿಹೋಗಿವೆ. ರೆಕಾಂಗ್ ಪಿಯೋ- ಶಿಮ್ಲಾ ಹೆದ್ದಾರಿ ಬಂದ್ ಆಗಿದ್ದು, ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

2 ವಾರಗಳ ಹಿಂದಷ್ಟೇ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ 9 ಪ್ರವಾಸಿಗರು ಸಾವನ್ನಪ್ಪಿದ್ದರು. ಕಿಣ್ಣಾವುರ್ ಜಿಲ್ಲೆಯ ಭೂಕುಸಿತದಲ್ಲಿ 50ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ. 10 ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್​​ಡಿಆರ್​ಎಫ್​ ತಂಡದ ಜೊತೆಗೆ ಐಟಿಬಿಟಿ ತಂಡದವರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಮಣ್ಣಿನಡಿ ಸಿಲುಕಿದ 40ಕ್ಕೂ ಹೆಚ್ಚು ಜನ

Landslide in Himachal Pradesh ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ, ಮುರಿದು ಬಿತ್ತು ಸೇತುವೆ: 9 ಪ್ರವಾಸಿಗರು ಸಾವು

(Kinnaur Landslide 1 Dead 10 Rescued above 50 Trapped in Himachal Pradesh Landslide Video is Here)

Published On - 4:36 pm, Wed, 11 August 21