ಕೃಷ್ಣಾ ನದಿ ನೀರು ಬಳಕೆಗೆ ಅಧಿಸೂಚನೆ ವಿಚಾರ; ವಿಚಾರಣೆ ಡಿಸೆಂಬರ್‌ಗೆ ಮುಂದೂಡಿ ವಿಸ್ತೃತ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಕೇಂದ್ರ ಸರ್ಕಾರದ ಹಿರಿಯ ನ್ಯಾಯವಾದಿ ವಾಸೀಂ ಎ. ಖಾದ್ರಿಯವರು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವ ಪ್ರಕ್ರಿಯೆ ಕೇಂದ್ರ ಸರ್ಕಾರದ ಉನ್ನತ ಹಂತದಲ್ಲಿ ವಿಲೇವಾರಿ ಕುರಿತು ಪರಿಶೀಲನೆಯಲ್ಲಿರುವುದರಿಂದ ಎರಡು ವಾರಗಳ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಕೋರಿದ ಹಿನ್ನೆಲೆಯಲ್ಲಿ ಕರ್ನಾಟಕದ ವಾದವನ್ನು ಆಲಿಸಿದ ನಂತರ ಡಿಸೆಂಬರ್ 13ರಂದು ವಿಚಾರಣೆಗೆ ಕಲಾಪದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಆದೇಶಿಸಿತು.
ದೆಹಲಿ: ಕೃಷ್ಣಾ ನದಿ ನೀರು ಬಳಕೆಗೆ ಅಧಿಸೂಚನೆ ಹೊರಡಿಸುವ ವಿಚಾರಣೆಯನ್ನು ಸುಪ್ರೀಂಕೋರ್ಟ್ ಡಿಸೆಂಬರ್ 13ಗೆ ಮುಂದೂಡಿದೆ. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ 30.12.2010ರ ಮತ್ತು 29.11.2013ರ ಅಂತಿಮ ಐತೀರ್ಪುಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್ ನಲ್ಲಿ ತಕ್ಷಣ ಪ್ರಕಟಿಸಬೇಕೆಂದು ಕರ್ನಾಟಕ ಮಹಾರಾಷ್ಟ್ರ ಸರ್ಕಾರಗಳು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠ ಡಿಸೆಂಬರ್ 13ರಂದು ವಿಸ್ತೃತ ವಿಚಾರಣೆಗೆ ಈ ಪ್ರಕರಣವನ್ನು ಪಟ್ಟಿ ಮಾಡಬೇಕೆಂದು ಸೂಚಿಸಿದೆ.
ಕೇಂದ್ರ ಸರ್ಕಾರದ ಹಿರಿಯ ನ್ಯಾಯವಾದಿ ವಾಸೀಂ ಎ. ಖಾದ್ರಿಯವರು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವ ಪ್ರಕ್ರಿಯೆ ಕೇಂದ್ರ ಸರ್ಕಾರದ ಉನ್ನತ ಹಂತದಲ್ಲಿ ವಿಲೇವಾರಿ ಕುರಿತು ಪರಿಶೀಲನೆಯಲ್ಲಿರುವುದರಿಂದ ಎರಡು ವಾರಗಳ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಕೋರಿದ ಹಿನ್ನೆಲೆಯಲ್ಲಿ ಕರ್ನಾಟಕದ ವಾದವನ್ನು ಆಲಿಸಿದ ನಂತರ ಡಿಸೆಂಬರ್ 13ರಂದು ವಿಚಾರಣೆಗೆ ಕಲಾಪದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಆದೇಶಿಸಿತು.
ಕರ್ನಾಟಕದ ಪರವಾಗಿ ವಿಸ್ತೃತವಾದ ವಾದ ಮಂಡಿಸಿದ ನ್ಯಾಯವಾದಿ ಶ್ಯಾಂ ದಿವಾನ್ ಕೇಂದ್ರ ಸರ್ಕಾರವು ನ್ಯಾಯಾಧಿಕರಣದ ಆದೇಶಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಲು ಸರ್ವೋಚ್ಛ ನ್ಯಾಯಾಲಯವು ದಿನಾಂಕ:16.09.2011ರಂದು ನೀಡಿದ ತಡೆಯಾಜ್ಞೆ ಅಡ್ಡಿ ಯುಂಟುಮಾಡುತ್ತಿದೆ. ಆದರೆ ಅಂತರರಾಜ್ಯ ಜಲವಿವಾದ ಕಾಯಿದೆಯ ಕಲಂ6ರ ಅಡಿಯಲ್ಲಿ ನ್ಯಾಯಾಧಿಕರಣದ ಐತೀರ್ಪುಗಳು ಸರ್ವೋಚ್ಛ ನ್ಯಾಯಾಲಯದ ಡಿಕ್ರಿಗೆ ಸಮಾನವಾಗಿದ್ದು ತಕ್ಷಣ ಅವುಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಬೇಕೆಂದು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಪ್ರಕಟಿಸಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ನಿರ್ದೇಶನ ನೀಡಿ ಗೆಜೆಟ್ ಪ್ರಕಟಣೆಗೆ ಅವಕಾಶ ಕಲ್ಪಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವನ್ನು ಪ್ರಾರ್ಥಿಸಿದರು.
ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 (ಬ್ರಿಜೇಶ್ ಕುಮಾರ್ ಆಯೋಗ) ಐತೀರ್ಪು 2050ನೇ ಇಸವಿ ವರೆಗೆ ಜಾರಿಯಲ್ಲಿ ಇರುತ್ತದೆ. ಈಗಾಗಲೇ 10 ಅಮೂಲ್ಯ ವರ್ಷಗಳನ್ನು ನಾವು ಕಳೆದುಕೊಂಡಿದ್ದೇವೆ. 1205 ಕಿ.ಮೀ. ಉದ್ದದ ಕಾಲುವೆ ಜಾಲವನ್ನು ನಿರ್ಮಾಣ ಮಾಡಿದ್ದು, 13321 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ ನೀರು ಮಾತ್ರ ವ್ಯರ್ಥವಾಗಿ ಬಂಗಾಳ ಕೊಲ್ಲಿ ಸಾಗರವನ್ನು ಸೇರುತ್ತಿದೆ. ರೈತರು ಕಾಲುವೆಗಳಿಗೆ ನೀರು ಒದಗಿಸುವಂತೆ ಚಳುವಳಿ ಮಾಡುತ್ತಿದ್ದಾರೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ತೆಲಂಗಾಣದ ನ್ಯಾಯವಾದಿ ಸಿ.ಎಸ್.ವೈದ್ಯನಾಥನ್ ರವರು ಈ ಪ್ರಕರಣದಲ್ಲಿ ವಿವರವಾದ ವಾದ ಮಂಡನೆಗೆ ಅವಕಾಶ ಕೋರಿದರು. 4 ರಾಜ್ಯಗಳು ತಮ್ಮ ವಾದ ಪ್ರತಿವಾದಗಳ ಪ್ರಮುಖ ಅಂಶಗಳನ್ನು ಒಳಗೊಂಡ ಮೂರು ಪುಟದ ಟಿಪ್ಪಣಿಯನ್ನು ವಿಚಾರಣೆಗೆ 48 ಗಂಟೆಗಳಿಗೂ ಮುನ್ನ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿ ಡಿಸೆಂಬರ್ 13ರಂದು ಮಧ್ಯಾಹ್ನ 2.00 ಗಂಟೆಗೆ ಪ್ರಕರಣದ ವಿಚಾರಣೆಗೆ ನಿಗದಿಪಡಿಸಿದರು.
ಇದನ್ನೂ ಓದಿ: ಶಿವಮೊಗ್ಗ: ಉದ್ಯಾನವನಕ್ಕೆ ಪುನೀತ್ ಹೆಸರು; ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಅಪ್ಪು ನಮನ ಕಾರ್ಯಕ್ರಮಕ್ಕೆ ಚಾಲನೆ