ಕೃಷ್ಣಾ ನದಿ ನ್ಯಾಯಮಂಡಳಿಯ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ, ಎಲ್ಲಿಯವರೆಗೆ?
ಕೇಂದ್ರ ಜಲಶಕ್ತಿ ಸಚಿವಾಲಯವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳ ನಡುವಿನ ಕೃಷ್ಣಾ ನದಿ ನೀರಿನ ವಿವಾದ ಪರಿಹರಿಸಲು ರಚಿಸಲಾದ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಧಿಕಾರಾವಧಿಯನ್ನು ವಿಸ್ತರಿಸಿದೆ. ನ್ಯಾಯಮಂಡಳಿಯು ತನ್ನ ಕೆಲಸ ಮುಗಿಸಲು ಹೆಚ್ಚಿನ ಸಮಯ ಕೋರಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತರ-ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಅಡಿಯಲ್ಲಿ ಈ ವಿಸ್ತರಣೆ ಮಾಡಲಾಗಿದೆ.

ನವದೆಹಲಿ, ಜುಲೈ 16: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ನಡುವಿನ ಕೃಷ್ಣಾ ನದಿ (Krishna River) ವಿವಾದ ಪರಿಹಾರಕ್ಕಾಗಿ ಸೃಷ್ಟಿಸಲಾಗಿರುವ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ (Krishna Water Disputes Tribunal) ಅಧಿಕಾರದ ಅವಧಿಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು 2026ರ ಜುಲೈ 31 ರವರೆಗೆ ವಿಸ್ತರಿಸಿದೆ. ತನ್ನ ಕೆಲಸವನ್ನು ಪೂರ್ಣಗೊಳಿಸಲು ನ್ಯಾಯಮಂಡಳಿ ಹೆಚ್ಚಿನ ಸಮಯ ಕೋರಿದ ಹಿನ್ನೆಲೆಯಲ್ಲಿ ಜಲಶಕ್ತಿ ಸಚಿವಾಲಯ ಅಂತರ-ರಾಜ್ಯ ನದಿ ನೀರು ವಿವಾದ ಕಾಯ್ದೆ 1956 ರ ಅಧಿಕಾರಗಳ ಅಡಿಯಲ್ಲಿ ವಿಸ್ತರಣೆ ಮಾಡಿದೆ.
ಸಚಿವಾಲಯವು ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆಯ ಸೆಕ್ಷನ್ 5(3) ಅನ್ನು ಉಲ್ಲೇಖಿಸಿ, “ಸಾರ್ವಜನಿಕ ಹಿತಾಸಕ್ತಿಗಾಗಿ ಮತ್ತು ರಾಜ್ಯಗಳ ಕಳವಳಗಳನ್ನು ಪರಿಹರಿಸಲು” ಹೆಚ್ಚಿನ ಸಮಯವನ್ನು ನೀಡಿದೆ. ಜಲಶಕ್ತಿ ಸಚಿವಾಲಯ ಈ ಹಿಂದೆ ನ್ಯಾಯಮಂಡಳಿಯ ಅಧಿಕಾರಾವಧಿಯನ್ನು 2024 ರ ಮಾರ್ಚ್ ಅಧಿಸೂಚನೆಯ ಮೂಲಕ 2025ರ ಜುಲೈ 31 ರವರೆಗೆ ವಿಸ್ತರಿಸಿತ್ತು.
ಏನಿದು ಕೃಷ್ಣ ಜಲವಿವಾದ ನ್ಯಾಯಮಂಡಳಿ
ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು 2004ರ ಏಪ್ರಿಲ್ನಲ್ಲಿ ಕೃಷ್ಣ ಜಲವಿವಾದ ನ್ಯಾಯಮಂಡಳಿ ರಚನೆ ಮಾಡಿತು. ನ್ಯಾಯಮಂಡಳಿಯು 2010ರ ಡಿಸೆಂಬರ್ನಲ್ಲಿ ತನ್ನ ಆರಂಭಿಕ ವರದಿಯನ್ನು ಸಲ್ಲಿಸಿತ್ತು.
ಇದನ್ನೂ ನೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸತತ ಮಳೆ, ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಪ್ರಮಾಣ ಹೆಚ್ಚಳ
ಆದರೆ, ರಾಜ್ಯಗಳು ಎತ್ತಿದ ಉಲ್ಲೇಖಗಳು ಮತ್ತು ಆಕ್ಷೇಪಣೆಗಳಿಗೆ ಹೆಚ್ಚಿನ ವಿಚಾರಣೆಗಳು ಮತ್ತು ನಿರ್ಧಾರಗಳು ಅಗತ್ಯವಾಗಿದ್ದವು. 2014 ರಲ್ಲಿ ಆಂಧ್ರ ಪ್ರದೇಶ ರಾಜ್ಯ ವಿಭಜನೆಯು ಈ ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸಿತು. ನಂತರ ಹೊಸದಾಗಿ ರೂಪುಗೊಂಡ ತೆಲಂಗಾಣ ರಾಜ್ಯವು ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ತನಗೂ ಪಾಲು ಬೇಕೆಂದು ಕೇಳಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Wed, 16 July 25







