ಲಕ್ನೋ: ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಎಸ್ಐಟಿ ತಂಡ ಸಾಕಷ್ಟು ಮಾಹಿತಿಯನ್ನು ಕಲೆಹಾಕಿತ್ತು. ನ್ಯಾಯಾಂಗ ಬಂಧನದಲ್ಲಿರುವ ಆಶಿಶ್ ಮಿಶ್ರಾ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಇಂದು ನಡೆಸಲಿದ್ದಾರೆ. ಕಳೆದ ಅಕ್ಟೋಬರ್ 3ರಂದು ಲಖೀಂಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯರ ಭೇಟಿಯನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಹರಿಸಿದ ವಾಹನಗಳ ಪೈಕಿ ಒಂದು ಕಾರನ್ನು ಆಶಿಶ್ ಮಿಶ್ರಾ ಚಲಾಯಿಸುತ್ತಿದ್ದರು. ಪೊಲೀಸ್ ವಿಚಾರಣೆ ವೇಳೆ ಇದಕ್ಕೆ ಸಾಕ್ಷಿಯೂ ಸಿಕ್ಕಿತ್ತು.
ಆಶಿಶ್ ಮಿಶ್ರಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ 2 ಬಾರಿ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಆಶಿಶ್ ಮಿಶ್ರಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಲಖಿಂಪುರ ಖೇರಿಯಲ್ಲಿ ಪ್ರತಿಭಟನಾಕಾರರಿಗೆ ಕಾರಿನಿಂದ ಡಿಕ್ಕಿ ಹೊಡೆದು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಒಂದರ ಹಿಂದೊಂದು ವೇಗವಾಗಿ ಬಂದ ಎಸ್ಯುವಿ ಕಾರುಗಳು ರೈತರಿಗೆ ಡಿಕ್ಕಿ ಹೊಡೆದು ಹೋಗಿತ್ತು. ಬಳಿಕ ಅದರಲ್ಲಿ ಒಂದು ಕಾರನ್ನು ರೈತರು ಸುಟ್ಟು ಹಾಕಿದ್ದರು. ಆ ದಿನ ಉದ್ದೇಶಪೂರ್ವಕವಾಗಿಯೇ ವೇಗವಾಗಿ ಬಂದು ರೈತರ ಮೇಲೆ ಕಾರು ಹರಿಸಿ ಕೊಲ್ಲಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹಾಗೇ, ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು, ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು.
#WATCH | Security beefed up outside Sessions Court in Lakhimpur Kheri where Union MoS (Home) Ajay Kumar Mishra’s son Ashish, an accused in the violence case, will be produced by police today pic.twitter.com/iArRQS3Ryq
— ANI UP (@ANINewsUP) October 11, 2021
ಅ. 3ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ರೈತರಾಗಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಓಡಿಸುತ್ತಿದ್ದ ವಾಹನಗಳನ್ನು ರೈತರ ಮೇಲೆ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಆ ಎರಡು ಕಾರುಗಳಲ್ಲಿ ಒಂದು ಕಾರನ್ನು ಓಡಿಸುತ್ತಿದ್ದುದು ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಎಂದು ಎಫ್ಐಆರ್ ದಾಖಲಿಸಲಾಗಿತ್ತು.
ಲಖಿಂಪುರ ಖೇರಿ ಹತ್ಯೆಯಲ್ಲಿ ನನ್ನ ಮಗನ ಪಾತ್ರವೇನೂ ಇಲ್ಲ. ಆತ ಬಹಳ ಮುಗ್ಧ. ರೈತರ ಹತ್ಯೆ ನಡೆದ ಸ್ಥಳದಲ್ಲಿ ನನ್ನ ಮಗ ಇದ್ದುದಕ್ಕೆ ಸಾಕ್ಷಿ ಸಿಕ್ಕಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ. ಆತ ಅಲ್ಲಿರಲಿಲ್ಲ ಎಂಬುದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷಿಗಳಿವೆ. ವಿನಾಕಾರಣ ಅವನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆಶಿಶ್ ಭಾನುವಾರ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಆತನಿಗೆ ಆರೋಗ್ಯ ಸರಿಯಿಲ್ಲದ ಕಾರಣದಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಎಲ್ಲ ದಾಖಲೆಗಳ ಸಮೇತ ಆತ ವಿಚಾರಣೆಗೆ ಹಾಜರಾಗಲಿದ್ದಾನೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿದ್ದರು. ಹೆಚ್ಚಿನ ವಿಚಾರಣೆಗಾಗಿ ಇಂದು ಆಶಿಶ್ ಮಿಶ್ರಾ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: Lakhimpur Kheri Violence: ಅಜಯ್ ಮಿಶ್ರಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ; ಅ.11ರಂದು ಮೌನವ್ರತ ಆಚರಿಸಲು ನಿರ್ಧಾರ
Maharashtra Bandh: ಲಖಿಂಪುರ ಖೇರಿಯ ರೈತರ ಹತ್ಯೆ ವಿರೋಧಿಸಿ ಇಂದು ಮಹಾರಾಷ್ಟ್ರ ಬಂದ್