Lakhimpur Kheri Violence: ಅಜಯ್ ಮಿಶ್ರಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ; ಅ.11ರಂದು ಮೌನವ್ರತ ಆಚರಿಸಲು ನಿರ್ಧಾರ
ಲಖಿಂಪುರ ಖೇರಿ ಹಿಂಸಾಚಾರ ನಡೆದಾಗಿನಿಂದಲೂ ಕಾಂಗ್ರೆಸ್ ತಿರುಗಿಬಿದ್ದಿದೆ. ನಿನ್ನೆ ಭಾರತೀಯ ಯುವ ಕಾಂಗ್ರೆಸ್ (IYC) ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿದೆ.
ಲಖನೌ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ (Lakhimpur Kheri violence)ದಲ್ಲಿ ಆಶಿಶ್ ಮಿಶ್ರಾ ಬಂಧನವಾಗುತ್ತಿದ್ದಂತೆ, ಅವರ ಅಪ್ಪ, ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ (Ajay Mishra) ರಾಜೀನಾಮೆಗೆ ಆಗ್ರಹ ಹೆಚ್ಚುತ್ತಿದೆ. ಸಚಿವ ಸ್ಥಾನದಿಂದ ಅವರನ್ನು ಕೆಳಗೆ ಇಳಿಸಬೇಕು ಎಂದು ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಇದೀಗ ಕಾಂಗ್ರೆಸ್ ಮೌನ ವ್ರತ ನಡೆಸಲು ಮುಂದಾಗಿದೆ. ಅಜಯ್ ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ, ಅಕ್ಟೋಬರ್ 11ರಂದು ಮೌನವ್ರತ ಆಚರಿಸುವಂತೆ ಕಾಂಗ್ರೆಸ್ ಹೈಕಮಾಂಡ್ ದೇಶಾದ್ಯಂತ ಎಲ್ಲ ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರಿಗೆ ಸೂಚನೆ ನೀಡಿದೆ.
ಅಕ್ಟೋಬರ್ 11ರಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾಂಗ್ರೆಸ್ ಮುಖ್ಯಸ್ಥರು, ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ರಾಜಭವನದ ಎದುರು ಅಥವಾ ಕೇಂದ್ರ ಸರ್ಕಾರದ ಕಚೇರಿಗಳ ಎದುರಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೌನ ವ್ರತ ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಆಶಿಶ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆಶಿಶ್ ಮಿಶ್ರಾ ನಿನ್ನೆ ಉತ್ತರಪ್ರದೇಶ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ನಂತರವಷ್ಟೇ ತಮ್ಮ ಉಪವಾಸ ಕೈಬಿಟ್ಟಿದ್ದರು.
ಲಖಿಂಪುರ ಖೇರಿ ಹಿಂಸಾಚಾರ ನಡೆದಾಗಿನಿಂದಲೂ ಕಾಂಗ್ರೆಸ್ ತಿರುಗಿಬಿದ್ದಿದೆ. ನಿನ್ನೆ ಭಾರತೀಯ ಯುವ ಕಾಂಗ್ರೆಸ್ (IYC) ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿದೆ. ಸುನೀಲ್ ಭಾಗ್ ರಸ್ತೆಯಿಂದ ಕೃಷ್ಣಾ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ನಿವಾಸಕ್ಕೆ ಇವರೆಲ್ಲ ಮೆರವಣಿಗೆ ಹೊರಟಿದ್ದರು. ಆದರೆ ಪೊಲೀಸರು ಅವರನ್ನು ತಡೆದು, ಬ್ಯಾರಿಕೇಡ್ಗಳನ್ನು ಹಾಕಿದ್ದರು. ಪ್ರತಿಭಟನಾನಿರತರಲ್ಲಿ ಕೆಲವರು ಬ್ಯಾರಿಕೇಡ್ಗಳನ್ನೂ ಹತ್ತಿದ್ದರು. ಹಾಗೇ, ಇಂದು ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ವಾರಾಣಸಿಯಲ್ಲಿ ಕಿಸಾನ್ ನ್ಯಾಯ ರ್ಯಾಲಿ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಈ ರ್ಯಾಲಿ ಹಮ್ಮಿಕೊಂಡಿದ್ದು, ರೈತರಿಗೆ ನ್ಯಾಯ ಒದಗಿಸಲು ಆಗ್ರಹಿಸಲಿದೆ. ಇನ್ನು ಆಶಿಶ್ ಮಿಶ್ರಾ ಈಗಾಗಲೇ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ: IPL 2021 Qualifier 1: ದಾಖಲೆಯ 23ನೇ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾದ ಸಿಎಸ್ಕೆ: ಪ್ಲೇಯಿಂಗ್ XI ನಲ್ಲಿ ಪ್ರಮುಖ ಬದಲಾವಣೆ?
ರಮ್ಯಾ ಬರೆದ ಚಿತ್ರ ನೋಡಿ ತಲೆ ಕೆರೆದುಕೊಂಡ ಫ್ಯಾನ್ಸ್; ಜೀವನದ ಅರ್ಥ ವಿವರಿಸಿದ ಗೆರೆಗಳು