Lakhimpur Kheri Violence: ಲಖನೌದಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ; ಅಖಿಲೇಶ್ ಯಾದವ್ಗೆ ಗೃಹಬಂಧನ
ಇಂದು ಬೆಳಗ್ಗೆ ಲಖನೌನಲ್ಲಿ ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಈ ದುಷ್ಕೃತ್ಯ ಮಾಡಿದವರು ಯಾರೆಂದು ಗೊತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ (Lakhimpur Kheri Violence) ಭುಗಿಲೆದ್ದಿದ್ದು, ಉದ್ವಿಗ್ನರ ಗುಂಪೊಂದು ಇಂದು ಲಖನೌದಲ್ಲಿ ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿದೆ. ನಿನ್ನೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಯುಪಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಅಲ್ಲಿ ಹಿಂಸಾಚಾರ ಶುರುವಾಗಿ ಇಲ್ಲಿಯವರೆಗೆ 8 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಘಟನೆಯ ಮುಖ್ಯ ರೂವಾರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಎಂಬ ಆರೋಪ ಕೇಳಿಬಂದಿದ್ದು ಅವರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿದೆ. ಆದರೆ ಇಂದೂ ಕೂಡ ಗಲಭೆ ನಡೆಯುತ್ತಲೇ ಇದೆ.
ಇಂದು ಬೆಳಗ್ಗೆ ಲಖನೌನಲ್ಲಿ ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ವಿಡಿಯೋ ವೈರಲ್ ಆಗಿದೆ. ವಾಹನಕ್ಕೆ ತಗುಲಿರುವ ಬೆಂಕಿ ನಂದಿಸಲು ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಯತ್ನಿಸುವುದನ್ನೂ ವಿಡಿಯೋದಲ್ಲಿ ನೋಡಬಹುದು. ಯಾರು ಬೆಂಕಿ ಹಚ್ಚಿದ್ದಾರೆಂದು ಗೊತ್ತಾಗಲಿಲ್ಲ ಎಂದೂ ಪೊಲೀಸ್ ತಿಳಿಸಿದ್ದಾರೆ. ಅದೂ ಕೂಡ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮನೆ ಸಮೀಪವೇ ಈ ಘಟನೆ ನಡೆದಿದೆ.
ಅಖಿಲೇಶ್ ಯಾದವ್ಗೆ ಗೃಹಬಂಧನ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿದ ಬೆನ್ನಲ್ಲೇ ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ನಿವಾಸದ ಹೊರಗೆ ಧರಣಿ ಕುಳಿತಿದ್ದರು. ರೈತರ ಮೇಲೆ ಬಿಜೆಪಿ ಸರ್ಕಾರ ನಡೆಸುತ್ತಿರುವಷ್ಟು ದೌರ್ಜನ್ಯವನ್ನು ಬ್ರಿಟೀಷರೂ ನಮ್ಮ ದೇಶ ವಾಸಿಗಳ ಮೇಲೆ ನಡೆಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಮೃತರ ಹತ್ತಿರದ ಸಂಬಂಧಿಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅದಾದ ಬಳಿಕ ಲಖಿಂಪುರಕ್ಕೆ ಹೋಗಲು ಮುಂದಾದ ಅವರನ್ನು ಪೊಲೀಸರು ವಶಕ್ಕೆ ಪಡೆದು, ಲಖನೌದಲ್ಲಿರುವ ಇಕೋ ಗಾರ್ಡನ್ಗೆ ಕರೆದುಕೊಂಡುಹೋಗಿದ್ದಾರೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ 20,799 ಹೊಸ ಕೊವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ 97.89
Cyclone Shaheen: ಓಮನ್, ಇರಾನ್ನಲ್ಲಿ ಶಾಹೀನ್ ಚಂಡಮಾರುತದಿಂದ 9ಕ್ಕೂ ಹೆಚ್ಚು ಜನ ಸಾವು
Published On - 11:01 am, Mon, 4 October 21