ಶ್ರೀನಗರ: ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ (Poonch) ನಡೆದ ಉಗ್ರರ ದಾಳಿಯಲ್ಲಿ (Terrorists Attack) IAF ಕಾರ್ಪೋರಲ್ ವಿಕ್ಕಿ ಪಹಡೆ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಬಳಿಕ ಈ ಪ್ರಕರಣದ ಕುರಿತು ತನಿಖೆಯನ್ನು ಪ್ರಾರಂಭಿಸಲಾಯಿತು. ಮೂಲಗಳ ಪ್ರಕಾರ, ಪೂಂಚ್ ದಾಳಿಯ ತನಿಖೆಯಲ್ಲಿ ಮೂರು ಹೆಸರುಗಳು ಬಂದಿವೆ. ಅವುಗಳೆಂದರೆ, ಇಲಿಯಾಸ್ (ಮಾಜಿ ಪಾಕ್ ಆರ್ಮಿ ಕಮಾಂಡೋ), ಅಬು ಹಮ್ಜಾ (ಲಷ್ಕರ್ ಕಮಾಂಡರ್) ಮತ್ತು ಹಾಡೂನ್. ಈ ಮೂವರು ಉಗ್ರರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಇವರೇ ಈ ದಾಳಿಯ ಹಿಂದಿನ ಕಾರಣಕರ್ತರು ಎನ್ನಲಾಗಿದೆ.
ಈ ದಾಳಿಯಲ್ಲಿ ಮೂವರೂ ಉನ್ನತ ಶಕ್ತಿಯ ಆಕ್ರಮಣಕಾರಿ ರೈಫಲ್‌ಗಳು, ಅಮೆರಿಕಾ ನಿರ್ಮಿತ M4 ಮತ್ತು ರಷ್ಯಾದ ನಿರ್ಮಿತ AK-47 ಬಂದೂಕುಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಜಮ್ಮು ಕಾಶ್ಮೀರದ ಪೋಲಿಸ್‌ನ ರೇಖಾಚಿತ್ರದ ಪ್ರಕಾರ, ಹಮ್ಜಾ 30ರಿಂದ 32 ವರ್ಷ ವಯಸ್ಸಿನ ಮಧ್ಯಮ ಮೈಕಟ್ಟು ಮತ್ತು ತೆಳ್ಳಗಿನ ಮೈಬಣ್ಣದ ವ್ಯಕ್ತಿ ಎಂದು ವಿವರಿಸಲಾಗಿದೆ. ಆತ ಗಡ್ಡವನ್ನು ಟ್ರಿಮ್ ಮಾಡಿಸಿದ್ದಾನೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ವಾಯುಪಡೆಯ ವಾಹನದ ಮೇಲೆ ಉಗ್ರರ ದಾಳಿ; ಸೇನಾ ಅಧಿಕಾರಿಗಳಿಗೆ ಗಾಯ
ಆತ ಕೊನೆಯದಾಗಿ ಕಂದು ಶಾಲು ಮತ್ತು ಕಿತ್ತಳೆ ಬಣ್ಣದ ಬ್ಯಾಗ್‌ನೊಂದಿಗೆ ಪಠಾನಿ ಸೂಟ್ ಧರಿಸಿದ್ದ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು.
ಜೈಶ್-ಎ-ಮೊಹಮ್ಮದ್‌ನ ಅಂಗಸಂಸ್ಥೆಯಾದ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಸೂಚನೆಯಂತೆ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ರಾಜೌರಿ ಮತ್ತು ಪೂಂಚ್ ಅರಣ್ಯಗಳಲ್ಲಿ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಹಲವಾರು ಶಂಕಿತರ ಮಾಹಿತಿ ಕಲೆಹಾಕಿದ್ದಾರೆ ಮತ್ತು ಮೂವರು ಭಯೋತ್ಪಾದಕರೊಂದಿಗೆ ಅವರ ಸಂಪರ್ಕದ ಕುರಿತು ಹಲವರನ್ನು ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ಪೂಂಚ್‌ನಲ್ಲಿ ಉಗ್ರ ದಾಳಿ; ಇಬ್ಬರು ಭಯೋತ್ಪಾದಕರ ಸ್ಕೆಚ್ ಬಿಡುಗಡೆ; 20 ಲಕ್ಷ ರೂ ತಲೆದಂಡ ಘೋಷಣೆ
PAFF ಜೈಶ್ ಬೆಂಬಲಿತ ಭಯೋತ್ಪಾದಕ ಗುಂಪಾಗಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೂಂಚ್‌ನಲ್ಲಿ ನಾಲ್ವರು ಸೈನಿಕರನ್ನು ಕೊಂದ ಸೇನಾ ವಾಹನದ ಮೇಲಿನ ದಾಳಿಯ ಹಿಂದೆ ತಮ್ಮ ಕೈವಾಡವಿರುವುದಾಗಿ ಅದು ಹೇಳಿಕೊಂಡಿತ್ತು. ಮೇ 4ರಂದು ಪೂಂಚ್ ಜಿಲ್ಲೆಯ ಶಾಸಿತಾರ್ ಬಳಿ ಭಯೋತ್ಪಾದಕ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಐವರು ಐಎಎಫ್ ಸಿಬ್ಬಂದಿಗೆ ಬುಲೆಟ್ ಗಾಯಗಳಾಗಿದ್ದು, ಅವರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ವೇಳೆ ಒಬ್ಬರು ಸಾವನ್ನಪ್ಪಿದ್ದರು.
ಈ ದಾಳಿಯ ನಂತರ ಉಗ್ರರು ಅರಣ್ಯಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ