ಪೂಂಚ್ನಲ್ಲಿ ಉಗ್ರ ದಾಳಿ; ಇಬ್ಬರು ಭಯೋತ್ಪಾದಕರ ಸ್ಕೆಚ್ ಬಿಡುಗಡೆ; 20 ಲಕ್ಷ ರೂ ತಲೆದಂಡ ಘೋಷಣೆ
Poonch terror attack: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಾಹಸಿತಾರ್ ಎಂಬಲ್ಲಿ ವಾಯುಪಡೆಗೆ ಸೇರಿದ ವಾಹನದ ಮೇಲೆ ಉಗ್ರರು ದಾಳಿ ಮಾಡಿ, ವಿಕ್ಕಿ ಪಹಾಡೆ ಎಂಬವರನ್ನ ಬಲಿಪಡೆದಿದ್ದರು. ಆ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಮೇ 4, ಶನಿವಾರ ರಾತ್ರಿ ಈ ಕೃತ್ಯ ಸಂಭವಿಸಿದೆ. ಭದ್ರತಾ ಪಡೆಗಳು ಉಗ್ರರನ್ನು ಹಿಡಿಯಲು ಇಡೀ ಶಾಹಸಿತಾರ್ ಪ್ರದೇಶ ಜಾಲಾಡುತ್ತಿದ್ದಾರೆ. ಇದೇ ವೇಳೆ ಪೂಂಚ್ನಲ್ಲಿ ದಾಳಿ ಮಾಡಿದ್ದಾರೆಂದು ಶಂಕಿಸಲಾಗಿರುವ ಇಬ್ಬರು ಉಗ್ರರ ರೇಖಾಚಿತ್ರವನ್ನು ರಚಿಸಲಾಗಿದ್ದು ಸಾರ್ವಜನಿಕರ ಗಮನಕ್ಕೆ ಬಿಡುಗಡೆ ಮಾಡಲಾಗಿದೆ. ಇವರ ಬಗ್ಗೆ ಯಾರಾದರೂ ಸುಳಿವು ಕೊಟ್ಟರೆ 20 ಲಕ್ಷ ರೂ ಬಹುಮಾನ ಕೊಡುವುದಾಗಿ ಘೋಷಿಸಲಾಗಿದೆ.
ನವದೆಹಲಿ, ಮೇ 6: ಕಳೆದ ವಾರ ಕಾಶ್ಮೀರದ ಪೂಂಚ್ ಸೆಕ್ಟರ್ನಲ್ಲಿ ಭಾರತೀಯ ವಾಯುಸೇನೆಯ ವಾಹನದ (Indian Air Force vehicle) ಮೇಲೆ ದಾಳಿ ಮಾಡಿ ಒಬ್ಬ ಯೋಧರನ್ನು ಬಲಿತೆಗೆದುಕೊಂಡಿದ್ದ ಉಗ್ರಗಾಮಿಗಳನ್ನು ಹೆಡೆಮುರಿ ಕಟ್ಟಲು ಸೇನಾ ಪಡೆಗಳು ಅವಿರತ ಪ್ರಯತ್ನ ಮಾಡುತ್ತಿವೆ. ಘಟನೆ ನಡೆದ ಶಾಹಸಿತಾರ್ (Shahsitar) ಮೊದಲಾದ ಕಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೇ 5ರಂದು ಸಂಭವಿಸಿದ ಈ ದಾಳಿಯ ರೂವಾರಿಗಳೆನ್ನಲಾದ ಇಬ್ಬರು ಪಾಕಿಸ್ತಾನೀ ಉಗ್ರಗಾಮಿಗಳ ಸ್ಕೆಚ್ ಅನ್ನು ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ. ಇವರ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ ಬಹುಮಾನ ಕೊಡುವುದಾಗಿಯೂ ಘೋಷಿಸಲಾಗಿದೆ.
ಮೇ 4, ಶನಿವಾರ ಸಂಜೆ ಪೂಂಚ್ ಜಿಲ್ಲೆಯ ಶಾಹಸಿತಾರ್ ಎಂಬಲ್ಲಿ ಹೋಗುತ್ತಿದ್ದ ವಾಯುಪಡೆ ವಾಹನದ ಮೇಲೆ ಉಗ್ರರು ದಾಳಿ ಎಸಗಿದ್ದರು. ಈ ದುರ್ಘಟನೆಯಲ್ಲಿ ವಾಯುಪಡೆಯ ಕಾರ್ಪೊರಾಲ್ ಆಗಿದ್ದ ವಿಕ್ಕಿ ಪಹಾಡೆ ಮೃತಪಟ್ಟರು. ಇನ್ನೂ ನಾಲ್ವರು ಗಾಯಗೊಂಡಿದ್ದರು.
ಇದನ್ನೂ ಓದಿ: ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನಗದು, ಹಣ ಎಣಿಸಿ ಎಣಿಸಿ ಸುಸ್ತಾದ ಇಡಿ ಅಧಿಕಾರಿಗಳು
ದಾಳಿ ಬಳಿಕ ಪರಾರಿಯಾದ ಉಗ್ರರನ್ನು ಹಿಡಿಯಲು ಭದ್ರತಾ ಪಡೆ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಬುಲೆಟ್ಪ್ರೂಫ್ ವಾಹನ, ಶ್ವಾನ ದಳಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೂ ಕೂಡ ಅವರ ಬಗ್ಗೆ ಭದ್ರತಾ ಪಡೆಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ.
ಪೂಂಚ್ನಲ್ಲಿ ಉಗ್ರರ ದಾಳಿಗೆ ಬಲಿಯಾದ ವಿಕ್ಕಿ ಪಹಾಡೆ ಅವರು ಮಧ್ಯಪ್ರದೇಶದ ಛಿಂದವಾರ ಜಿಲ್ಲೆಯ ನೋನಿಯ ಕರಬಲ್ ಎಂಬಲ್ಲಿನವರು. ಅವರು ಪತ್ನಿ ಹಾಗು ಒಬ್ಬ ಮಗನನ್ನು ಅಗಲಿದ್ದಾರೆ. 2011ರಲ್ಲಿ ಅವರು ವಾಯುಪಡೆಗೆ ಸೇರ್ಪಡೆಯಾಗಿದ್ದು. ಸೋದರಿಯ ಮದುವೆಂದು ಸುದೀರ್ಘ ರಜೆ ಹಾಕಿದ್ದರು. ರಜೆ ಮುಗಿಸಿ ಕೆಲಸಕ್ಕೆ ಸೇರಿದ 15 ದಿನದಲ್ಲಿ ಪೂಂಚ್ನಲ್ಲಿ ಜವರಾಯನಿಗೆ ತಲೆಯೊಪ್ಪಿಸಬೇಕಾಯಿತು.
ಇದನ್ನೂ ಓದಿ: ಭಾರತ ಯಾರಿಗೆ ಶತ್ರು, ಯಾರಿಗೆ ಮಿತ್ರ? ಚೀನಾ ಮತ್ತಿತರ ದೇಶಗಳ ದೃಷ್ಟಿ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸರ್ವೆ
ವಿಕ್ಕಿ ಪಹಾಡೆ ಅವರ ಸೋದರಿ ಗೀತಾ ತನ್ನ ಅಣ್ಣನ ಸಾವಿಗೆ ನ್ಯಾಯ ಸಿಗಬೇಕೆಂದು ಕೋರಿದ್ದಾರೆ. ‘ನನ್ನ ಅಣ್ಣನ ಬಗ್ಗೆ ನನಗೆ ಹೆಮ್ಮೆ ಇದೆ. ಮೊನ್ನೆ ಅವರು ಅಸು ನೀಗಿದ ವಿಚಾರ ಗೊತ್ತಾಗಿದೆ. ನನ್ನ ಸೋದರನಿಗೆ ನ್ಯಾಯ ಬೇಕು,’ ಎಂದು ಗೀತಾ ಪಹಾಡೆ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ