AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್‌ನಿಂದ ಕೆನಡಾವರೆಗೆ ಬಿಷ್ಣೋಯ್ ಗ್ಯಾಂಗ್ ಹಾವಳಿ, ಜೈಲಿನಲ್ಲೇ ಕೂತು 700 ಶೂಟರ್‌ಗಳ ನಿಯಂತ್ರಣ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಾರತದ ಅತ್ಯಂತ ಅಪಾಯಕಾರಿ ಕ್ರಿಮಿನಲ್ ಸಿಂಡಿಕೇಟ್ ಆಗಿ ಬೆಳೆದಿದೆ. ಬಾಲಿವುಡ್ ನಟರಿಗೆ ಬೆದರಿಕೆ, ಹತ್ಯೆಗಳು, ಮತ್ತು 700ಕ್ಕೂ ಹೆಚ್ಚು ಶೂಟರ್‌ಗಳ ನಿಯಂತ್ರಣದ ಮೂಲಕ ಜೈಲಿನಿಂದಲೇ ಕಾರ್ಯನಿರ್ವಹಿಸುತ್ತದೆ. ಸುಲಿಗೆ, ಹವಾಲಾ, ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ದಂಧೆಯ ಮೂಲಕ ನೂರಾರು ಕೋಟಿ ಗಳಿಸುತ್ತದೆ. ಸಲ್ಮಾನ್ ಖಾನ್ ಮೇಲಿನ ಹಗೆತನವು ಅದರ ಕುಖ್ಯಾತಿಗೆ ಪ್ರಮುಖ ಕಾರಣವಾಗಿದೆ.

ಬಾಲಿವುಡ್‌ನಿಂದ ಕೆನಡಾವರೆಗೆ ಬಿಷ್ಣೋಯ್ ಗ್ಯಾಂಗ್ ಹಾವಳಿ, ಜೈಲಿನಲ್ಲೇ ಕೂತು 700 ಶೂಟರ್‌ಗಳ ನಿಯಂತ್ರಣ
ಲಾರೆನ್ಸ್​ Image Credit source: India TV
ನಯನಾ ರಾಜೀವ್
| Edited By: |

Updated on:Oct 19, 2026 | 11:23 AM

Share

ನವದೆಹಲಿ, ಅಕ್ಟೋಬರ್ 19: ಬಾಲಿವುಡ್​ ನಟ ಟೈಗರ್​ ಶ್ರಾಫ್​ ಅವರನ್ನು ರವಿವಾರ ಸಂಜೆ ಹತ್ಯೆಗೈಯುವ ಪ್ರಯತ್ನ ವಿಫಲವಾದ ಬೆನ್ನಲ್ಲೇ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್ ಬಗ್ಗೆ ಮತ್ತೆ ಚರ್ಚೆ ಪ್ರಾರಂಭವಾಗಿದೆ. ಟೈಗರ್​ ಶ್ರಾಫ್​ ಅವರನ್ನು ಹತ್ಯೆ ಮಾಡುವ ವಿಫಲ ಯತ್ನದ ಹಿಂದೆ ತಾವಿದ್ದೇವೆ ಎಂದು ಈಗಾಗಲೇ ಬಿಷ್ಣೋಯ್​ ಗ್ಯಾಂಗ್​ ಹೇಳಿದೆ. ​    

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇತ್ತೀಚಿನ ವರ್ಷಗಳಲ್ಲಿ ಭಾರತದ ಅಂಡರ್‌ವರ್ಲ್ಡ್‌ನಲ್ಲಿ ಅತ್ಯಂತ ಕುಖ್ಯಾತ ಮತ್ತು ದೊಡ್ಡ ಕ್ರಿಮಿನಲ್ ಸಿಂಡಿಕೇಟ್ ಆಗಿ ಬೆಳೆದಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, ರಾಜಸ್ಥಾನದ ಸುಖದೇವ್ ಸಿಂಗ್ ಗೊಗಾಮೆಡಿ ಕೊಲೆ ಹಾಗೂ ಮುಂಬೈ ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆಯಂತಹ ಪ್ರಕರಣಗಳ ನಂತರ ಈ ಗ್ಯಾಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಲ್ಲಿದೆ. ಜತೆಗೆ ಈಗ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೂ ಗುಂಡಿನ ದಾಳಿ ನಡೆದಿದ್ದು ಅದರ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಂಡಿದೆ.

ಗ್ಯಾಂಗ್ ಎಲ್ಲಿಯದ್ದು?

ಈ ಗ್ಯಾಂಗ್‌ನ ಮೂಲ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ (ಈಗ ಫಾಜಿಲ್ಕಾ) ಅಬೋಹರ್ ಸಮೀಪದ ಧತ್ತರನ್‌ವಾಲಿ ಗ್ರಾಮ. ಲಾರೆನ್ಸ್ ಬಿಷ್ಣೋಯ್ (ಜನನ 1993)  ಶ್ರೀಮಂತ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಈತನ ತಂದೆ ಹರಿಯಾಣ ಪೊಲೀಸ್ ಪಡೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದರು.

ಆರಂಭಿಕ ದಿನಗಳು: ಚಂಡೀಗಢದ ಡಿಎವಿ ಕಾಲೇಜು ಹಾಗೂ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು (LLB) ವಿದ್ಯಾಭ್ಯಾಸ ಮಾಡಲು ಹೋದಾಗ ವಿದ್ಯಾರ್ಥಿ ರಾಜಕೀಯದಲ್ಲಿ ಭಾಗಿಯಾದ. ಕಾಲೇಜು ಚುನಾವಣೆಯ ಜಗಳಗಳು, ಗಲಾಟೆಗಳು ಮುಂದುವರೆದು ಅಪರಾಧ ಲೋಕಕ್ಕೆ ಪ್ರವೇಶಿಸಲು ಕಾರಣವಾಯಿತು. ಕಾಲೇಜಿನಲ್ಲೇ ಈತನಿಗೆ ಮತ್ತೊಬ್ಬ ಕುಖ್ಯಾತ ದರೋಡೆಕೋರ ಗೋಲ್ಡಿ ಬ್ರಾರ್ (ಸತೀಂದರ್‌ಜಿತ್ ಸಿಂಗ್) ನಂಟು ಬೆಳೆಯಿತು.

ಭಾರತದಲ್ಲಿ ಎಷ್ಟು ಜನ ಇದ್ದಾರೆ?

ಸದಸ್ಯರ ಸಂಖ್ಯೆ: ಈ ಸಿಂಡಿಕೇಟ್‌ನಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಸೇರಿ ಸುಮಾರು 700 ಕ್ಕೂ ಹೆಚ್ಚು ಶೂಟರ್‌ಗಳು ಹಾಗೂ ಸಕ್ರಿಯ ಸದಸ್ಯರಿದ್ದಾರೆ.

ವ್ಯಾಪ್ತಿ: ಕೇವಲ ಪಂಜಾಬ್‌ಗೆ ಸೀಮಿತವಾಗದೆ, ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಈ ಗ್ಯಾಂಗ್‌ನ ಬಲವಾದ ನೆಟ್‌ವರ್ಕ್ ಇದೆ.

ವಿದೇಶಿ ಸಂಪರ್ಕ: ಭಾರತದಲ್ಲಷ್ಟೇ ಅಲ್ಲದೆ ಕೆನಡಾ, ಅಮೆರಿಕ, ಯುಕೆ, ದುಬೈ, ಥಾಯ್ಲೆಂಡ್ ಮತ್ತು ಅಜರ್‌ಬೈಜಾನ್‌ಗಳಲ್ಲೂ ಈ ಗ್ಯಾಂಗ್‌ನ ಹ್ಯಾಂಡ್ಲರ್‌ಗಳು ನೆಲೆಸಿದ್ದಾರೆ.

ಇದನ್ನೂ ಓದಿ:

Explained: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್​ನ ಅಸಲಿಯತ್ತೇನು?

ಗ್ಯಾಂಗ್ ಹೇಗೆ ಕೆಲಸ ಮಾಡುತ್ತದೆ?

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾನ್ಯ ರೌಡಿ ಗ್ಯಾಂಗ್‌ಗಳಿಗಿಂತ ಭಿನ್ನವಾಗಿ, ಕಾರ್ಪೊರೇಟ್ ಮಾದರಿಯಲ್ಲಿ ಮತ್ತು “ಡಿ-ಕಂಪನಿ” (ದಾವೂದ್ ಇಬ್ರಾಹಿಂ ಸಿಂಡಿಕೇಟ್) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ:

ಜೈಲಿನಿಂದಲೇ ರಿಮೋಟ್ ಕಂಟ್ರೋಲ್: ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಅತ್ಯಂತ ಬಿಗಿ ಭದ್ರತೆಯ ಸಬರಮತಿ ಜೈಲಿನಲ್ಲಿದ್ದಾನೆ (ಹಿಂದೆ ತಿಹಾರ್ ಜೈಲಿನಲ್ಲಿದ್ದ). ಅಲ್ಲಿಂದಲೇ ಆತ ರಹಸ್ಯವಾಗಿ ಎನ್‌ಕ್ರಿಪ್ಟೆಡ್ ಆ್ಯಪ್‌ಗಳ (ಸಿಗ್ನಲ್, ಟೆಲಿಗ್ರಾಂ) ಮೂಲಕ ವಿದೇಶದಲ್ಲಿರುವ ತನ್ನ ಆಪ್ತರಿಗೆ ಸೂಚನೆ ನೀಡುತ್ತಾನೆ.

ವಿದೇಶಿ ಹ್ಯಾಂಡ್ಲರ್‌ಗಳು:

ಕೆನಡಾದಲ್ಲಿ ಕುಳಿತ ಗೋಲ್ಡಿ ಬ್ರಾರ್

ಯುಎಸ್ ಅಥವಾ ಇತರ ದೇಶಗಳಲ್ಲಿರುವ ಲಾರೆನ್ಸ್‌ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್

ಜೈಲಿನಿಂದ ತಪ್ಪಿಸಿಕೊಂಡು ವಿದೇಶದಲ್ಲೇ ಇರುವ ರೋಹಿತ್ ಗೋದಾರ

ಇವರೆಲ್ಲರೂ ಹತ್ಯೆ, ಬೆದರಿಕೆಗಳ ಸ್ಕೆಚ್ ಹಾಕಿ, ಶೂಟರ್‌ಗಳನ್ನು ನಿಯೋಜಿಸುತ್ತಾರೆ.

ಮಾಡ್ಯುಲರ್ ಶೈಲಿ: ಕೃತ್ಯ ಎಸಗುವ ಶೂಟರ್‌ಗಳಿಗೆ ಒಬ್ಬರ ಮುಖ ಒಬ್ಬರಿಗೆ ಗೊತ್ತಿರುವುದಿಲ್ಲ. ಬೈಕ್,ಕಾರು ಕೊಡುವವರು ಬೇರೆ, ಬಂದೂಕು ಒದಗಿಸುವವರು ಬೇರೆ, ಹಣ ತಲುಪಿಸುವವರು ಬೇರೆ, ದಾಳಿ ನಡೆಸುವ ಶೂಟರ್‌ಗಳೇ ಬೇರೆ. ಹೀಗಾಗಿ ಪೊಲೀಸರು ಒಬ್ಬನನ್ನು ಹಿಡಿದರೂ ಇಡೀ ಜಾಲ ಪತ್ತೆಯಾಗುವುದು ಕಷ್ಟ.

ಯುವಕರ ನೇಮಕಾತಿ: ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಹರಿಯಾಣ, ಪಂಜಾಬ್, ಯುಪಿ, ಬಿಹಾರದ ಸಣ್ಣ ವಯಸ್ಸಿನ, ನಿರುದ್ಯೋಗಿ ಯುವಕರನ್ನು ಸೆಳೆಯುತ್ತಾರೆ. ‘ಗ್ಯಾಂಗ್‌ಸ್ಟರ್ ಗ್ಲಾಮರ್’, ಹಣ ಮತ್ತು ಅಗ್ಗದ ಜನಪ್ರಿಯತೆಯ ಆಮಿಷವೊಡ್ಡಿ ಅವರನ್ನು ಶೂಟರ್‌ಗಳಾಗಿ ಬಳಸಿಕೊಳ್ಳಲಾಗುತ್ತದೆ.

ಅವರಿಗೆ ಹಣ ಎಲ್ಲಿಂದ ಬರುತ್ತದೆ?

ಈ ಗ್ಯಾಂಗ್ ವಾರ್ಷಿಕ ನೂರಾರು ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ನಡೆಸುತ್ತದೆ. ಪಂಜಾಬ್ ಮತ್ತು ಬಾಲಿವುಡ್‌ನ ದೊಡ್ಡ ಸೆಲೆಬ್ರಿಟಿಗಳು, ಸಂಗೀತ ನಿರ್ಮಾಪಕರು ಮತ್ತು ಗಾಯಕರು. ರಿಯಲ್ ಎಸ್ಟೇಟ್ ಉದ್ಯಮಿಗಳು, ಮದ್ಯದ ಗುತ್ತಿಗೆದಾರರು, ಕ್ಲಬ್ ಮಾಲೀಕರು ಮತ್ತು ದೊಡ್ಡ ವ್ಯಾಪಾರಿಗಳಿಂದ ಬೆದರಿಕೆ ಕರೆಗಳ ಮೂಲಕ ತಿಂಗಳ ಮಾಮೂಲಿ ಅಥವಾ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲಾಗುತ್ತದೆ.

ಹವಾಲಾ ಮಾರ್ಗ:

ವಿದೇಶಗಳಲ್ಲಿ ಕುಳಿತ ಗೋಲ್ಡಿ ಬ್ರಾರ್ ಅಥವಾ ಅನ್ಮೋಲ್ ಬಿಷ್ಣೋಯ್‌ಗೆ ಸ್ಥಳೀಯವಾಗಿ ಸುಲಿಗೆ ಮಾಡಿದ ಹಣವನ್ನು ಹವಾಲಾ ದಂಧೆ ಮೂಲಕ ತಲುಪಿಸಲಾಗುತ್ತದೆ.

ಅಕ್ರಮ ಶಸ್ತ್ರಾಸ್ತ್ರ ದಂಧೆ:

ಪಾಕಿಸ್ತಾನ ಮತ್ತು ನೇಪಾಳ ಗಡಿಗಳ ಮೂಲಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು (Zigana ಪಿಸ್ತೂಲ್‌ಗಳು, AK-47, ಡ್ರೋನ್ ಮೂಲಕ ಬರುವ ಗನ್‌ಗಳು) ಭಾರತಕ್ಕೆ ಸಾಗಿಸುವುದು ಮತ್ತು ಇತರ ಸ್ಥಳೀಯ ಗ್ಯಾಂಗ್‌ಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು.

ಮಾದಕವಸ್ತು ಸಾಗಣೆ

ಪಾಕಿಸ್ತಾನದ ಕಳ್ಳಸಾಗಣೆದಾರರು ಮತ್ತು ಗಡಿಯಾಚೆಗಿನ ಜಾಲಗಳ ಮೂಲಕ ಹೆರಾಯಿನ್ ಮತ್ತಿತರ ಡ್ರಗ್ಸ್ ಸಾಗಾಟದಲ್ಲಿ ಗ್ಯಾಂಗ್ ಶಾಮೀಲಾಗಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.

ಸುಪಾರಿ ಹತ್ಯೆಗಳು

ಸ್ಥಳೀಯ ರಿಯಲ್ ಎಸ್ಟೇಟ್ ವಿವಾದಗಳು, ವ್ಯಾಪಾರ ಪೈಪೋಟಿ ಅಥವಾ ಗ್ಯಾಂಗ್‌ವಾರ್‌ಗಳಿಗಾಗಿ ಕೋಟ್ಯಂತರ ರೂಪಾಯಿ ಪಡೆದು ಕೊಲೆಗಳನ್ನು ಮಾಡಿಸುವುದು.

ಸಲ್ಮಾನ್ ಖಾನ್ ಮೇಲೇಕೆ ಕಣ್ಣು?

ಬಿಷ್ಣೋಯ್ ಸಮುದಾಯವು ಪ್ರಕೃತಿ ಮತ್ತು ಪ್ರಾಣಿಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಕೃಷ್ಣಮೃಗಗಳನ್ನು (Blackbuck) ಪೂಜ್ಯ ಭಾವನೆಯಿಂದ ಕಾಣುತ್ತದೆ. 1998 ರ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ವೇಳೆ ಜೋಧ್‌ಪುರದಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದೆ.

ಈ ಕಾರಣಕ್ಕಾಗಿ, ತನ್ನ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್ ಬಹಿರಂಗವಾಗಿ ಘೋಷಿಸಿದ್ದಾನೆ. ಈ ಪ್ರಕರಣವನ್ನು ಬಳಸಿಕೊಂಡು ತನ್ನ ಗ್ಯಾಂಗ್ ಅನ್ನು ದೇಶಾದ್ಯಂತ ದೊಡ್ಡದಾಗಿ ಬಿಂಬಿಸಿಕೊಳ್ಳುವುದು ಮತ್ತು ಅಂಡರ್‌ವರ್ಲ್ಡ್‌ನಲ್ಲಿ ಹೊಸ ಡಾನ್ ಆಗಿ ಮೆರೆಯುವುದು ಈತನ ಪ್ರಮುಖ ತಂತ್ರವೂ ಆಗಿದೆ. ಜತೆಗೆ ಟೈಗರ್ ಶ್ರಾಫ್ ಮೇಲೆ ಹಲ್ಲೆ ನಡೆಸಲೂ ಇದೇ ಕಾರಣ ಎನ್ನಲಾಗಿದೆ. ಸಲ್ಮಾನ್ ಖಾನ್ ಜತೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಬಾರದು ಎಂದು ಧಮ್ಕಿ ಹಾಕಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:48 am, Mon, 19 October 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More