ಹಿಂದೂಸ್ಥಾನಿ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನ

1991ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ ಮತ್ತು 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2013ರಲ್ಲಿ ಸಂಗೀತ​ ನಾಟಕ​ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಹಿಂದೂಸ್ಥಾನಿ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನ
ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್​. (Image courtesy: facebook.com/iUGMK)
Follow us
Lakshmi Hegde
|

Updated on:Jan 17, 2021 | 5:32 PM

ಮುಂಬೈ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ರಾಮ್​ಪುರ್​ ಸಹಸ್ವಾನ್ ಘರಾಣೆಯ ಖ್ಯಾತ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್​ (89) ಇಂದು ನಿಧನರಾದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮಧ್ಯಾಹ್ನ 12.37ರ ಹೊತ್ತಿಗೆ ಮುಸ್ತಫಾ ಖಾನ್​ ಕೊನೆಯುಸಿರು ಎಳೆದಿದ್ದಾರೆಂದು ಅವರ ಸೊಸೆ ನಮ್ರತಾ ಗುಪ್ತಾ ಖಾನ್​ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಆರೋಗ್ಯವಾಗಿಯೇ ಇದ್ದರು. ನಮ್ಮ ಮನೆಯಲ್ಲಿ ಅವರನ್ನು ನೋಡಿಕೊಳ್ಳಲು 24 ಗಂಟೆಯೂ ನರ್ಸ್​ ಇರುತ್ತಾರೆ. ಇಂದು ಅವರಿಗೆ ಮಸಾಜ್​ ಮಾಡುತ್ತಿದ್ದಾಗ ವಾಂತಿಯಾಯಿತು. ನಾನು ಕೂಡಲೇ ಹೋದೆ. ಅಷ್ಟರಲ್ಲಿಯೇ ಕಣ್ಣುಗಳು ಮುಚ್ಚಿದ್ದವು.. ನಿಧಾನವಾಗಿ ಉಸಿರಾಡಲು ಶುರು ಮಾಡಿದ್ದರು. ನಾನು ವೈದ್ಯರಿಗೆ ಕರೆ ಮಾಡಿದೆ. ಅವರು ಬರುವಷ್ಟರಲ್ಲಿ ಪ್ರಾಣ ಹೋಗಿತ್ತು ಎಂದು ನಮ್ರತಾ ಗುಪ್ತಾ ಹೇಳಿದ್ದಾರೆ.

ಮಾರ್ಚ್​ 3ಕ್ಕೆ ಖಾನ್​ಗೆ 90ವರ್ಷ ಆಗುತ್ತಿತ್ತು. 2019ರಲ್ಲಿ ಮಿದುಳು ಸ್ಟ್ರೋಕ್​ಗೆ ಒಳಗಾಗಿದ್ದರು. ಆಗ ಅವರ ಎಡಭಾಗಕ್ಕೆ ಪಾರ್ಶ್ವವಾಯು ಆಗಿತ್ತು. ಇದರಿಂದ ದಿನವೂ ಮಸಾಜ್​ ಮಾಡಲಾಗುತ್ತಿತ್ತು. ಅದರ ಹೊರತಾಗಿ ಆರೋಗ್ಯವಾಗಿಯೇ ಇದ್ದ ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದು ಇಡೀ ಕುಟುಂಬಕ್ಕೆ ಶಾಕ್​ ಆಗಿದೆ ಎಂದೂ ಸೊಸೆ ನಮ್ರತಾ ನೋವಿನಿಂದ ಹೇಳಿದ್ದಾರೆ. ತನ್ನ ಮಾವನ ನಿಧನದ ಸುದ್ದಿಯನ್ನು ತಮ್ಮ ಫೇಸ್​ಬುಕ್​ನಲ್ಲೂ ಹಂಚಿಕೊಂಡಿದ್ದಾರೆ. ಖಾನ್​ ಅವರ ಅಂತ್ಯಕ್ರಿಯೆ ಇಂದು ಸಂಜೆಯೇ ಸಂತಾಕ್ರೂಜ್​ ಕಬರ್​ಸ್ತಾನ್​ನಲ್ಲಿ ನಡೆಯಲಿದೆ.

2018ರಲ್ಲಿ ಪದ್ಮವಿಭೂಷಣಕ್ಕೆ ಪಾತ್ರರಾಗಿದ್ದರು ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ 1931ರ ಮಾರ್ಚ್​3ರಂದು ಉತ್ತರ ಪ್ರದೇಶದ ಬದೌನ್​ನಲ್ಲಿ ಜನಿಸಿದ್ದರು. ಇವರಿಗೆ ನಾಲ್ವರು ಕಿರಿಯ ಸಹೋದರರು ಮತ್ತು ಮೂವರು ಸೋದರಿಯರು ಇದ್ದಾರೆ. ಮುಸ್ತಫಾ ಖಾನ್​ರ ತಂದೆ ಉಸ್ತಾದ್ ವಾರಿಸ್​ ಹುಸೇನ್​ ಖಾನ್​ ಅವರ ತಂದೆ, ಉಸ್ತಾದ್ ಮರ್ರೆಡ್​ ಭಕ್ಷ್​ ಕೂಡ ಪ್ರಸಿದ್ಧ ಗಾಯಕರು. ಅಷ್ಟೇ ಅಲ್ಲ, ಇವರ ತಾಯಿ ಸಾಬ್ರಿ ಬೇಗಂ ಅವರು ಮತ್ತೋರ್ವ ಸಂಗೀತ ವಿದ್ವಾಂಸ ಉಸ್ತಾದ್​ ಇನಾಯತ್​ ಹುಸೇನ್​ ಖಾನ್​ರ ಮಗಳು. ಸಂಗೀತ ಕುಟುಂಬದಲ್ಲಿ ಜನಿಸಿದ ಮುಸ್ತಫಾ ಖಾನ್​, ತನ್ನ ತಂದೆ ಉಸ್ತಾದ್ ವಾರಿಸ್​ ಹುಸೇನ್​ ಖಾನ್​ರಿಂದಲೇ ಶಾಸ್ತ್ರೀಯ​ ಸಂಗೀತದ ಪ್ರಥಮ ಪಾಠ ಕಲಿತರು. ಅದಾದ ಬಳಿಕ ತಮ್ಮ ಸೋದರ ಸಂಬಂಧಿ​ ಉಸ್ತಾದ್​ ನಿಸಾರ್​ ಹುಸೇನ್​ ಖಾನ್​ರ ಬಳಿ ಸಂಗೀತಾಭ್ಯಾಸ ಮುಂದುವರಿಸಿದರು.

1991ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ ಮತ್ತು 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2013ರಲ್ಲಿ ಸಂಗೀತ​ ನಾಟಕ​ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಲತಾ ಮಂಗೇಶ್ಕರ್, ಎ.ಆರ್.ರೆಹಮಾನ್ ಶ್ರದ್ಧಾಂಜಲಿ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನಕ್ಕೆ ಸಂಗೀತ ಕ್ಷೇತ್ರದ ಖ್ಯಾತನಾಮರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್​, ಸಂಗೀತ ಸಂಯೋಜಕ ಎ.ಆರ್​.ರೆಹಮಾನ್​ ಮತ್ತಿತರರು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

ಉಸ್ತಾದ್ ಗುಲಾಮ್​ ಮುಸ್ತಫಾ ಖಾನ್​ ಸಾಹೇಬ್​ರ ನಿಧನದಿಂದ ತುಂಬಾ ದುಃಖವಾಗದೆ. ಅವರು ಅತ್ಯದ್ಭುತ ಗಾಯಕರು ಮಾತ್ರವಾಗಿರಲಿಲ್ಲ, ಅತ್ಯುತ್ತಮ ಗುಣಗಳುಳ್ಳವರಾಗಿದ್ದರು. ನನ್ನ ಹತ್ತಿರದ ಸಂಬಂಧಿಯೊಬ್ಬರು ಅವರಿಂದ ಸಂಗೀತ ಕಲಿತಿದ್ದರು ಎಂದು ಲತಾ ಮಂಗೇಶ್ಕರ್​ ನೆನಪಿಸಿಕೊಂಡಿದ್ದಾರೆ. ಎ.ಆರ್​.ರೆಹಮಾನ್ ಅವರೂ ಟ್ವೀಟ್ ಮಾಡಿ, ಮುಸ್ತಫಾ ಖಾನ್​ ಅವರು ನಮ್ಮೆಲ್ಲರಿಗೂ ಅತ್ಯಂತ ಒಳ್ಳೆಯ ಟೀಚರ್ ಆಗಿದ್ದರು ಎಂದು ಹೇಳಿದ್ದಾರೆ.

‘ಮುಸ್ತಫಾ ಖಾನ್​ ನಿಧನದಿಂದ ನನ್ನ ಹೃದಯವೇ ನಿಂತಂತಾಗಿದೆ. ನಮ್ಮ ದೇಶದ ಅತ್ಯಂತ ಗೌರವಾನ್ವಿತ ಮತ್ತು ಬಹುಮುಖ ಗಾಯಕರಲ್ಲಿ ಒಬ್ಬರಾಗಿದ್ದರು. ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ’ ಎಂದು ಉಸ್ತಾದ್​ ಅಮ್ಜಾದ್​ ಅಲಿ ಖಾನ್​ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್

ಸ್ವಾಮಿ ಹರ್ಷಾನಂದರ ಸ್ಮರಣೆ | ಮಗುವಿನಂತೆ ಕರೆಯುತ್ತಿದ್ದ ಮಹಾನ್​ ವ್ಯಕ್ತಿ, ಸಕಲರನ್ನೂ ಗೌರವಿಸುತ್ತಿದ್ದ ಸ್ವಾಮೀಜಿ

Published On - 5:19 pm, Sun, 17 January 21