Big Success: ಅಮರನಾಥ ಯಾತ್ರೆ ಧ್ವಂಸಗೊಳಿಸಲು ಪಾಕಿಸ್ತಾನದಿಂದ ಬಂದಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ
ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಹತ್ಯೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎನ್ಕೌಂಟರ್ ಮಹತ್ವ ಪಡೆದಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ (Encounter) ಒಟ್ಟು ಮೂವರು ಉಗ್ರಗಾಮಿಗಳನ್ನು (Terrorists) ಭದ್ರತಾ ಪಡೆಗಳು (Security Forces) ಹತ್ಯೆ ಮಾಡಿವೆ. ಈ ಪೈಕಿ ಇಬ್ಬರು ಪಾಕ್ ಪ್ರಜೆಗಳು. ಇವರೆಲ್ಲರೂ ಲಷ್ಕರ್-ಎ-ತಯ್ಯಬಾ ಉಗ್ರಗಾಮಿ ಸಂಘಟನೆಗೆ ಸೇರಿದವರು. ಇದೇ ಜೂನ್ 30ರಂದು ಆರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲೆಂದು ಪಾಕಿಸ್ತಾನವು ಇವರನ್ನು ಕಳಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ. ಶ್ರೀನಗರದ ಬೆಮಿಯಾ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು. ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಹತ್ಯೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎನ್ಕೌಂಟರ್ ಮಹತ್ವ ಪಡೆದಿದೆ. ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಅಮರನಾಥ ಯಾತ್ರೆಯನ್ನು ಹಾಳುಗೆಡವುವ ಉದ್ದೇಶದಿಂದ ಈ ಮೂವರು ಉಗ್ರರನ್ನು ಭಾರತಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಇಬ್ಬರು ಪಾಕಿಸ್ತಾನೀಯರಾದರೆ, ಒಬ್ಬಾತ ಸ್ಥಳೀಯ. ‘ಪಾಕಿಸ್ತಾನದಲ್ಲಿದ್ದು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಯೋಜಿಸುವವರು ಭಾರತಕ್ಕೆ ಇಬ್ಬರು ಲಷ್ಕರ್-ಎ-ತಯ್ಯಬಾ ಉಗ್ರರನ್ನು ಕಳುಹಿಸಿದ್ದರು. ಈ ಪೈಕಿ ಓರ್ವ ಸ್ಥಳೀಯನ್ನು, ಅನಂತ್ನಾಗ್ ಜಿಲ್ಲೆಯ ಆದಿಲ್ ಹುಸೇನ್ ಮಿರ್ ಎಂದು ಗುರುತಿಸಲಾಗಿದೆ. ಇವನು ಸಹ ಉಗ್ರರೊಂದಿಗೆ 2018ರಿಂದಲೂ ಪಾಕಿಸ್ತಾನದಲ್ಲಿಯೇ ಇದ್ದ’ ಎಂದು ಕಾಶ್ಮೀರದ ಐಜಿಪಿ ಹೇಳಿದ್ದಾರೆ. ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಇವನು 2018ರಲ್ಲಿ ತೆರಳಿದ್ದ.
ಈ ಕಾರ್ಯಾಚರಣೆಯನ್ನು ‘ದೊಡ್ಡ ಯಶಸ್ಸು’ ಎಂದು ಕರೆದಿರುವ ಕಾಶ್ಮೀರ ಐಜಿಪಿ ವಿಜಯ್ ಕುಮಾರ್, ‘ಸತ್ತ ಮೂವರು ಉಗ್ರರ ಪೈಕಿ ಒಬ್ಬಾತ ಪಾಕಿಸ್ತಾನದ ಫೈಸಲಾಬಾದ್ಗೆ ಸೇರಿದವನು. ಎನ್ಕೌಂಟರ್ ನಡೆದ ಸ್ಥಳದಲ್ಲಿ ಹಲವು ದಾಖಲೆಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಸೊಪೊರೆಯಲ್ಲಿ ನಡೆದಿದ್ದ ಎನ್ಕೌಂಟರ್ನಲ್ಲಿ ತಪ್ಪಿಸಿಕೊಂಡಿದ್ದ ಇಬ್ಬರು ಪಾಕಿಸ್ತಾನಿ ಉಗ್ರರ ಚಲವಲನಗಳ ಮೇಲೆ ಭದ್ರತಾ ಸಿಬ್ಬಂದಿ ನಂತರದ ದಿನಗಳಲ್ಲಿ ನಿರಂತರ ನಿಗಾ ಇರಿಸಿದ್ದರು.
#SrinagarEncounterUpdate:As per the documents and other #incriminating materials, one of the killed #terrorist has been identified as Abdullah Goujri, resident of Faisalabad, #Pakistan. A big success: IGP Kashmir@JmuKmrPolice https://t.co/kFtQd1cNSo
— Kashmir Zone Police (@KashmirPolice) June 13, 2022
ಎನ್ಕೌಂಟರ್ ನಡೆದ ಸ್ಥಳದಲ್ಲಿ ಎರಡು ಎಕೆ-47 ರೈಫಲ್ಗಳು, 10 ಮ್ಯಾಗಜಿನ್ಗಳು, ಸಜೀವ ಗುಂಡುಗಳು, ವೈ-ಎಸ್ಎಂಸ್ ಉಪಕರಣ ಮತ್ತು ದುಷ್ಕೃತ್ಯಗಳಿಗೆ ಬಳಸುವ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಕಳೆದ ವಾರ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪರಿಶೀಲಿಸಿದ್ದರು. ದಕ್ಷಿಣ ಕಾಶ್ಮೀರದ ಈ ವಾರ್ಷಿಕ ತೀರ್ಥಯಾತ್ರೆಯು 43 ದಿನಗಳ ಅವಧಿಗೆ ನಡೆಯಲಿದೆ. ಜೂನ್ 30ರಿಂದ ಆರಂಭವಾಗಲಿದೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಜಮ್ಮು ಕಾಶ್ಮೀರದ ಭದ್ರತಾ ಸ್ಥಿತಿಗತಿ ಮತ್ತು ಅಮರನಾಥ ಯಾತ್ರೆಯ ಸಿದ್ಧತೆಯ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:28 am, Tue, 14 June 22