
ನವದೆಹಲಿ, ಅಕ್ಟೋಬರ್ 16: ಎದೆ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭೀಷ್ಮ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (98) ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಅಕ್ಟೋಬರ್ 19ರಂದು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ (ICU) ಹಿರಿಯ ನರವಿಜ್ಞಾನಿ ಡಾ. ವಿನೀತ್ ಸೂರಿ ಅವರ ನೇತೃತ್ವದ ವೈದ್ಯರ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದು, ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೆಲ್ತ್ ಬುಲೆಟಿನ್‌ನಲ್ಲಿ ಸ್ಪಷ್ಟಪಡಿಸಿದೆ.
ಅಕ್ಟೋಬರ್ 16 ರಂದು ತೀವ್ರ ಎದೆ ಸೋಂಕು ಮತ್ತು ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಡ್ವಾಣಿ ಅವರನ್ನು ಜಸೋಲಾ ವಿಹಾರ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ದೌರ್ಬಲ್ಯ ಹಾಗೂ ಎದೆಯ ಸೋಂಕು ಹೆಚ್ಚಾಗಿದ್ದ ಕಾರಣ ಅವರನ್ನು ತಕ್ಷಣವೇ ಐಸಿಯುಗೆ ಸ್ಥಳಾಂತರಿಸಿ ತಜ್ಞ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರೆಸಲಾಯಿತು.
ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಅವರ ಪ್ರಮುಖ ಆರೋಗ್ಯ ಸೂಚ್ಯಂಕಗಳು (Vitals) ಸಹಜ ಸ್ಥಿತಿಗೆ ಮರಳಿದ ಬಳಿಕ ವಾರ್ಡ್‌ಗೆ ಸ್ಥಳಾಂತರಿಸಿ, ಇದೀಗ ಸಂಪೂರ್ಣ ಡಿಸ್ಚಾರ್ಜ್ ಮಾಡಲಾಗಿದೆ. ಇಳಿ ವಯಸ್ಸಿನಲ್ಲಿರುವ ಅಡ್ವಾಣಿ ಅವರು ನಿಯಮಿತವಾಗಿ ಆರೋಗ್ಯ ತಪಾಸಣೆಗಾಗಿ ಅಪೋಲೋ ಮತ್ತು ಏಮ್ಸ್ (AIIMS) ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಹಿಂದೆಯೂ ಅವರು ಡಾ. ವಿನೀತ್ ಸೂರಿ ಅವರ ಬಳಿಯೇ ನರರೋಗ ಹಾಗೂ ವಯೋಸಹಜ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಮತ್ತಷ್ಟು ಓದಿ: ರಾಜಕೀಯ ಗುರು ಎಲ್ಕೆ ಅಡ್ವಾಣಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ
ರಾಜಕೀಯ ಮೇರು ನಾಯಕ: ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟಿ, ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಬೆಳೆಸಿದ ರೂವಾರಿಗಳಲ್ಲಿ ಅಡ್ವಾಣಿ ಪ್ರಮುಖರು. ಇವರು ವಾಜಪೇಯಿ ಅವರ ಸಂಪುಟದಲ್ಲಿ ಭಾರತದ 7ನೇ ಉಪ ಪ್ರಧಾನಿಯಾಗಿ (2002-2004) ಹಾಗೂ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ರಾಜಕಾರಣಕ್ಕೆ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಕೇಂದ್ರ ಸರ್ಕಾರವು 2024 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತರತ್ನ’ ನೀಡಿ ಅಡ್ವಾಣಿ ಅವರನ್ನು ಗೌರವಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Mon, 19 October 26