AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಬಿಜೆಪಿ ಹಿರಿಯ ನಾಯಕ

LK advani hospitalised: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಎದೆ ಸೋಂಕು ಹಾಗೂ ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. 98 ವರ್ಷದ ಅಡ್ವಾಣಿ ಅವರು ಸದ್ಯ ವೈದ್ಯರ ನಿಗಾದಲ್ಲಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿಯೂ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಎಲ್​ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಬಿಜೆಪಿ ಹಿರಿಯ ನಾಯಕ
ಲಾಲ್ ಕೃಷ್ಣ ಅಡ್ವಾಣಿImage Credit source: PTI
ಗಣಪತಿ ಶರ್ಮಾ
|

Updated on: Oct 17, 2026 | 6:26 AM

Share

ಮುಖ್ಯಾಂಶಗಳು

  • ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾದ ಎಲ್​ಕೆ ಅಡ್ವಾಣಿ
  • ಎದೆ ಸೋಂಕು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು
  • ಅಡ್ವಾಣಿ ಆರೋಗ್ಯ ಸ್ಥಿರ ಎಂದ ವೈದ್ಯರು

ನವದೆಹಲಿ, ಅಕ್ಟೋಬರ್ 17: ಬಿಜೆಪಿ ಹಿರಿಯ ನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರು ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಸಂಜೆ ಸುಮಾರು 7.30ಕ್ಕೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಶ್ವಾಸಕೋಶ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದು, ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. 98 ವರ್ಷದ ಅಡ್ವಾಣಿ ಅವರು ಸದ್ಯ ವೈದ್ಯರ ನಿಗಾದಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದರೆ.

ಈ ವರ್ಷದ ಮೇ ತಿಂಗಳಲ್ಲಿಯೂ ವಯೋಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಡ್ವಾಣಿ ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದೀಗ ಉಸಿರಾಟ ಸಮಸ್ಯೆ, ಎದೆ ಸೋಂಕಿನ ಕಾರಣಕ್ಕೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಜೆಪಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ ಆಧುನಿಕ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖ ನಾಯಕರಲ್ಲಿ ಒಬ್ಬರು. ಅವರು ಮೂರು ಅವಧಿಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1986ರಿಂದ 1990ರವರೆಗೆ, 1993ರಿಂದ 1998ರವರೆಗೆ ಹಾಗೂ 2004ರಿಂದ 2005ರವರೆಗೆ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

1990ರ ಸೆಪ್ಟೆಂಬರ್ 25ರಂದು ಗುಜರಾತ್‌ನ ಸೋಮನಾಥದಿಂದ ಅವರು ರಾಮ ರಥಯಾತ್ರೆ ಆರಂಭಿಸಿದ್ದರು. ರಾಮ ಮಂದಿರ ಚಳವಳಿಯನ್ನು ರಾಷ್ಟ್ರೀಯ ರಾಜಕೀಯದ ಪ್ರಮುಖ ವಿಚಾರವನ್ನಾಗಿಸುವಲ್ಲಿ ಈ ಯಾತ್ರೆ ಮಹತ್ವದ ಪಾತ್ರ ವಹಿಸಿತ್ತು. ಅದೇ ವರ್ಷದ ಅಕ್ಟೋಬರ್ 23ರಂದು ಬಿಹಾರದ ಸಮಸ್ತಿಪುರದಲ್ಲಿ ಅಡ್ವಾಣಿ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಯಾತ್ರೆ ಸ್ಥಗಿತಗೊಂಡಿತ್ತು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಬಳಿಕ ವಿಶೇಷ ಸಿಬಿಐ ನ್ಯಾಯಾಲಯವು ಅಡ್ವಾಣಿ ಸೇರಿದಂತೆ ಆರೋಪಿಗಳನ್ನೆಲ್ಲ ಖುಲಾಸೆಗೊಳಿಸಿತ್ತು.

ಗೃಹ ಸಚಿವ, ಉಪಪ್ರಧಾನಿಯಾಗಿ ಅಡ್ವಾಣಿ ಸೇವೆ

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅಡ್ವಾಣಿ ಅವರು 1998ರಿಂದ 2004ರವರೆಗೆ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2002ರಿಂದ 2004ರವರೆಗೆ ಭಾರತದ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಗೃಹ ಸಚಿವರ ಅವಧಿಯಲ್ಲಿ 1999ರ ಕಾರ್ಗಿಲ್ ಸಂಘರ್ಷ ಹಾಗೂ 2001ರಲ್ಲಿ ಸಂಸತ್ ಭವನದ ಮೇಲಿನ ದಾಳಿ ನಡೆದಿದ್ದವು. ಇದಕ್ಕೂ ಮೊದಲು, 1977ರಿಂದ 1979ರವರೆಗೆ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

2024ರಲ್ಲಿ ಭಾರತ ರತ್ನ ಗೌರವ

ದೇಶದ ರಾಜಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2024ರಲ್ಲಿ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More