ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ: ಮಾಯಾವತಿ
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು ಪ್ರಸ್ತುತ ಯುಪಿಯಲ್ಲಿದೆ. ಈ ನಡುವೆ ಬಿಎಸ್ಪಿ ಯಾವ ಪಕ್ಷದ ಜತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಹೇಳಿಕೆ ನೀಡಿದ್ದಾರೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ(Mayawati) ಲೋಕಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಯು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಎಸ್‌ಪಿಯನ್ನು ಇಂಡಿಯಾ ಒಕ್ಕೂಟವನ್ನು ಸೇರಿಸಿಕೊಳ್ಳಲು ಹಲವು ನಾಯಕರು ಪ್ರಯತ್ನ ನಡೆಸುತ್ತಿದ್ದರು. ಬಿಎಸ್ಪಿ ಯಾವುದೇ ಪಕ್ಷದೊಂದಿಗೆ ಯಾವುದೇ ಒಕ್ಕೂಟವನ್ನು ರಚಿಸುವುದಿಲ್ಲ ಮತ್ತು ಇದನ್ನು ಹಲವು ಬಾರಿ ಹೇಳಲಾಗಿದೆ ಎಂದು ಮಾಯಾವತಿ ಹೇಳಿದರು.
ಸಮಾಜದ ಎಲ್ಲಾ ವರ್ಗಗಳ, ವಿಶೇಷವಾಗಿ ಬಡವರು, ತುಳಿತಕ್ಕೊಳಗಾದ ಮತ್ತು ನಿರ್ಲಕ್ಷಿತರ ಯೋಗಕ್ಷೇಮ ಮತ್ತು ಕಲ್ಯಾಣವನ್ನು ಪರಿಗಣಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇವಲ ಸ್ವಂತ ಬಲವನ್ನು ಅವಲಂಬಿಸಿ ಸ್ವತಂತ್ರವಾಗಿ ಸ್ಪರ್ಧಿಸುವ ಬಿಎಸ್ಪಿಯ ನಿರ್ಧಾರವು ಅಚಲವಾಗಿದೆ ಎಂದು ಹೇಳಿದ್ದಾರೆ.
ಬಿಎಸ್ಪಿಗೆ ಇಂಡಿಯಾ ಒಕ್ಕೂಟದ ಬಾಗಿಲು ತೆರೆದಿದೆ ಎಂದು ಕಾಂಗ್ರೆಸ್‌ನ ಉತ್ತರ ಅವಿನಾಶ್ ಪಾಂಡೆ ತಿಳಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕೇ ಎಂದು ಮಾಯಾವತಿ ನಿರ್ಧರಿಸಬೇಕಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮಾತನಾಡಿ, ಬಿಎಸ್‌ಪಿ ಕೂಡ ಈ ಮೈತ್ರಿಕೂಟದ ಭಾಗವಾಗಬೇಕೆಂದು ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಮನಃಪೂರ್ವಕವಾಗಿ ಬಯಸುತ್ತದೆ.
ಮತ್ತಷ್ಟು ಓದಿ: ಬಿಎಸ್ಪಿಗೆ ತನ್ನ ಸೋದರಳಿಯನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ಮಾಯಾವತಿ
ಕೆಲವು ಸಣ್ಣ ಪಕ್ಷಗಳು ಬೇಷರತ್ತಾಗಿ ಭಾರತ ಮೈತ್ರಿಕೂಟಕ್ಕೆ ಸೇರುತ್ತಿವೆ ಮತ್ತು ಕೆಲವು ಪಕ್ಷಗಳು ಕೆಲವು ನಿರೀಕ್ಷೆಗಳನ್ನು ಹೊಂದಿವೆ. ಆದರೆ ಈ ತಿಂಗಳ ಅಂತ್ಯದೊಳಗೆ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ.ಎಸ್‌ಪಿ ಜೊತೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿದ್ದು, ಬಹುತೇಕ ಸಕಾರಾತ್ಮಕವಾಗಿ ಮಾತುಕತೆ ನಡೆಯುತ್ತಿದೆ ಎಂದು ಪಾಂಡೆ ಹೇಳಿದ್ದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷಗಳೆಲ್ಲವೂ ಸೇರಿ ಇಂಡಿಯಾ ಎಂಬ ಮೈತ್ರಿಕೂಟವನ್ನು ಆರಂಭಿಸಿತ್ತು. ಆದರೆ ಕಾಲ ಕ್ರಮೇಣ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಸೂಚಿಸಿದ್ದ ಕೆಲವು ಪಕ್ಷಗಳು ಬಿಜೆಪಿ ಕಡೆಗೆ ನಡೆದರೆ ಇನ್ನೂ ಕೆಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಜತೆಗೆ ಸೇರಿ ಸರ್ಕಾರ ರಚಿಸಿದ್ದರೆ, ಪಂಜಾಬ್ನಲ್ಲಿ ಸಿಎಂ ಭಗವಂತ್ ಮಾನ್ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ಗೆ ಒಂದು ಸ್ಥಾನವನ್ನು ಬೇಕಾದರೂ ನೀಡುತ್ತೇವೆ ಆದರೆ ಆ ಒಂದು ಸ್ಥಾನಕ್ಕೂ ಅರ್ಹವನ್ನು ಎಂದು ಎಎಪಿ ಹೇಳಿದೆ. ಇನ್ನೂ ಎಸ್‌ಪಿ ಜತೆಗೆ ಮಾತುಕತೆ ಅಂತಿಮವಾಗಿಲ್ಲ. ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Mon, 19 February 24