ಲೋಕಸಭಾ ಚುನಾವಣೆ: ಟಿಡಿಪಿ ಕೂಡ ಎನ್ಡಿಎಗೆ ಮರಳುವ ಸಾಧ್ಯತೆ, ಬಿಜೆಪಿ ಜತೆ ಮೈತ್ರಿ ಬಹುತೇಕ ಖಚಿತ
ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಗುರುವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು . ಈ ಸಂದರ್ಭದಲ್ಲಿ, ಆಂಧ್ರಪ್ರದೇಶದಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಟಿಡಿಪಿ ನಡುವೆ ಮೈತ್ರಿ ಸಾಧ್ಯತೆಯ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಟಿಡಿಪಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿತ್ತು, ಆದರೆ ನಾಯ್ಡು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2018 ರಲ್ಲಿ ಅದರಿಂದ ಹೊರನಡೆದರು.
ತೆಲುಗು ದೇಶಂ ಪಕ್ಷ(TDP)ವು ಎನ್‌ಡಿಎ(NDA)ಗೆ ಮರಳುವ ಸಾಧ್ಯತೆ ಇದ್ದು, ಬಿಜೆಪಿ ಜತೆ ಟಿಡಿಪಿ ಮೈತ್ರಿ ಬಹುತೇಕ ಖಚಿತವಾಗಿದೆ. ನಾಯಕ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು(Chandrababu Naidu) ಗುರುವಾರ ತಡರಾತ್ರಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.
ಈ ಸಭೆಯಲ್ಲಿ ಜನಸೇನಾ ನಾಯಕ ಪವನ್ ಕಲ್ಯಾಣ್ ಕೂಡ ಉಪಸ್ಥಿತರಿದ್ದರು. ಆಂಧ್ರಪ್ರದೇಶದಲ್ಲಿ ಬಿಜೆಪಿ, ತೆಲುಗು ದೇಶಂ ಮತ್ತು ಜನಸೇನೆ ನಡುವೆ ಸೀಟು ಹಂಚಿಕೆಯ ಕುರಿತು ಮಾತುಕತೆ ನಡೆಸಲಾಯಿತು. ಆಂಧ್ರಪ್ರದೇಶದಲ್ಲಿ ವಿಸ್ತರಣೆಯತ್ತ ಸಾಗುತ್ತಿರುವ ಎನ್‌ಡಿಎ ತೆಲುಗು ದೇಶಂ ಮತ್ತು ಜನಸೇ ನಾ ಜತೆ ಮೈತ್ರಿ ಮತ್ತು ಸೀಟು ಸಮನ್ವಯದ ಬಗ್ಗೆ ಮಾತುಕತೆ ನಡೆಸಿದೆ.
ಮೂಲಗಳ ಪ್ರಕಾರ, ಆಂಧ್ರಪ್ರದೇಶದ 25 ಸ್ಥಾನಗಳ ಪೈಕಿ ಬಿಜೆಪಿ 8 ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಮತ್ತು ಜನಸೇನೆ ಮೂರು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಉಳಿದ 14 ಸ್ಥಾನಗಳಲ್ಲಿ ತೆಲುಗು ದೇಶಂ ಸ್ಪರ್ಧಿಸಬಹುದು ಎನ್ನಲಾಗಿದೆ.
ಆದರೆ ತೆಲುಗು ದೇಶಂ ಇದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಯಸಿದೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ತಡರಾತ್ರಿವರೆಗೂ ಒಂದು ಸ್ಥಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಮೈತ್ರಿ ಬಹುತೇಕ ಖಚಿತವಾಗಿದ್ದು, ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮತ್ತಷ್ಟು ಓದಿ: ಆಂಧ್ರ ರಾಜಕೀಯದಲ್ಲಿ ಸಂಚಲನ: ಚಂದ್ರಬಾಬು ನಾಯ್ಡು ನಿವಾಸದಲ್ಲಿ ಪ್ರಶಾಂತ್ ಕಿಶೋರ್ ಸಮಾಲೋಚನೆ
ಫೆಬ್ರವರಿಯಲ್ಲಿ ನಾಯ್ಡು ಅವರು ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಮೈತ್ರಿಯತ್ತ ಸಾಗುತ್ತಿದ್ದಾರೆ ಎಂಬ ಊಹಾಪೋಹಗಳು ಬಲಗೊಂಡಿದ್ದವು. ಆದರೆ, ವಿಷಯಗಳು ಇನ್ನೂ ಸ್ಪಷ್ಟವಾಗಿ ಬೆಳಕಿಗೆ ಬಂದಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐದು ರಾಜ್ಯಗಳ 100 ಲೋಕಸಭಾ ಸ್ಥಾನಗಳ ಪೈಕಿ 29 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಇದರಲ್ಲಿ 25 ಸ್ಥಾನಗಳು ಕರ್ನಾಟಕದಿಂದ ಮತ್ತು 4 ಸ್ಥಾನಗಳು ತೆಲಂಗಾಣದಿಂದ ಬಂದಿವೆ. ಟಿಡಿಪಿ ಎನ್ಡಿಎಗೆ ಮರಳಿದರೆ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ.
ಇದಲ್ಲದೇ ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾದಳದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಚರ್ಚೆಯೂ ಅಂತಿಮ ಹಂತದಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ