ನವದೆಹಲಿ: ನೂತನ ಸಂಸತ್ ಭವನದಲ್ಲಿ ಸೋಮವಾರದಿಂದ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಇಂದು (ಬುಧವಾರ) ಈ ನೂತನ ಸಂಸತ್ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಇಂದು ಲೋಕಸಭೆಯ ಸ್ಪೀಕರ್ ಚುನಾವಣೆ (Lok Sabha Speaker Election) ನಡೆಯಲಿದೆ. ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಮತ್ತು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ (ಕೆ. ಸುರೇಶ್) ಮಂಗಳವಾರ ಲೋಕಸಭೆ ಸ್ಪೀಕರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಓಂ ಬಿರ್ಲಾ ಮತ್ತು ಕೆ. ಸುರೇಶ್ ನಡುವೆ ಇಂದು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ. ಸ್ಪೀಕರ್ ಆಯ್ಕೆಯ ಬಗ್ಗೆ ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್ ನಡುವಿನ ಮಾತುಕತೆ ವಿಫಲವಾಗಿತ್ತು. ಹೀಗಾಗಿ, ಚುನಾವಣೆ ಮೂಲಕ ಸ್ಪೀಕರ್ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು ಇದೇ ಮೊದಲು.
ಇದನ್ನೂ ಓದಿ: ಲೋಕಸಭೆ ಸ್ಪೀಕರ್ ಚುನಾವಣೆ; ನಾಳೆ ಸದನಕ್ಕೆ ಹಾಜರಾಗುವಂತೆ ಬಿಜೆಪಿ, ಕಾಂಗ್ರೆಸ್ ಸಂಸದರಿಗೆ ವಿಪ್ ಜಾರಿ
ಡೆಪ್ಯೂಟಿ ಸ್ಪೀಕರ್ ಅವರು ಇಂಡಿಯಾ ಬ್ಲಾಕ್‌ನ ಸದಸ್ಯರಾಗಿರಬೇಕು ಎಂಬ ಷರತ್ತಿನ ಅಡಿಯಲ್ಲಿ ಸರ್ಕಾರಿ ಬೆಂಬಲಿತ ಅಭ್ಯರ್ಥಿ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿತ್ತು. ಆದರೂ ಸ್ಪಷ್ಟವಾಗಿ, ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ.
ಮಂಗಳವಾರ ಬೆಳಗ್ಗೆ ಅಧಿವೇಶನಕ್ಕೂ ಮುನ್ನ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ಪ್ರತಿಪಕ್ಷಗಳ ಬಳಿ ಸ್ಪೀಕರ್ ಆಯ್ಕೆಗೆ ಬೆಂಬಲ ನೀಡಲು ಪ್ರಸ್ತಾಪಿಸಿದ್ದರು. ಆದರೆ, ಓಂ ಬಿರ್ಲಾ ನಾಮಪತ್ರ ಸಲ್ಲಿಕೆಗೆ ಕೆಲವೇ ನಿಮಿಷಗಳ ಮೊದಲು, ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ಡಿಎಂಕೆಯ ಟಿ.ಆರ್ ಬಾಲು ಅವರು ರಾಜನಾಥ್ ಸಿಂಗ್ ಅವರ ಕಚೇರಿಯಿಂದ ಹೊರನಡೆದರು. ಹಾಗೇ, ಎನ್‌ಡಿಎ ಅಭ್ಯರ್ಥಿಯನ್ನು ಸ್ಪೀಕರ್ ಸ್ಥಾನಕ್ಕೆ ಅನುಮೋದಿಸಲು ನಿರಾಕರಿಸಿದರು.
ಇದನ್ನೂ ಓದಿ: ಸ್ಪೀಕರ್ ಹುದ್ದೆಗೆ ಇಂಡಿಯಾ ಬ್ಲಾಕ್ ನಾಮನಿರ್ದೇಶನದ ಬಗ್ಗೆ ನಮ್ಮೊಂದಿಗೆ ಚರ್ಚಿಸಿಲ್ಲ; ಟಿಎಂಸಿ
ನಂತರ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಲ್ಲಿ ಸರ್ಕಾರ ಬದ್ಧವಾಗಿಲ್ಲ. ಹೀಗಾಗಿ, ಸ್ಪೀಕರ್ ಅಭ್ಯರ್ಥಿಯನ್ನು ನಾವು ಬೆಂಬಲಿಸುವುದಿಲ್ಲ ಎಂದಿದ್ದರು.
ಕೆ ಸುರೇಶ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರು 8ಟನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಕೆ. ಸುರೇಶ್ ಅವರು ಕೇರಳದ ದಲಿತ ನಾಯಕ. ಅವರು ಉಪಸಭಾಪತಿಯಾಗಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು. ಆದರೆ, ಆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಇಂದು ಈ ಚುನಾವಣೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ