ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ ಲೋಕಸಭೆಯಲ್ಲಿ ಶೀಘ್ರದಲ್ಲೇ ಪ್ರಕ್ರಿಯೆ ಆರಂಭ; ಕಿರಣ್ ರಿಜಿಜು

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ಲೋಕಸಭೆಯಲ್ಲಿ ಪ್ರಕ್ರಿಯೆಗಳು ಸದ್ಯದಲ್ಲೇ ಆರಂಭವಾಗಲಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಒಗ್ಗಟ್ಟಿನಿಂದ ಮುಂದುವರಿಯುವುದು ಎಲ್ಲಾ ರಾಜಕೀಯ ಪಕ್ಷಗಳ ಸರ್ವಾನುಮತದ ನಿರ್ಧಾರ ಎಂದು ಇಂದು ಲೋಕಸಭೆಯಲ್ಲಿ ಹೇಳಲಾಗಿದ್ದು, ಲೋಕಸಭೆಯಲ್ಲಿ ಈ ಪ್ರಸ್ತಾವನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಪ್ರತಿಪಾದಿಸಿದ್ದಾರೆ.

ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ ಲೋಕಸಭೆಯಲ್ಲಿ ಶೀಘ್ರದಲ್ಲೇ ಪ್ರಕ್ರಿಯೆ ಆರಂಭ; ಕಿರಣ್ ರಿಜಿಜು
Yashwant Varma

Updated on: Jul 25, 2025 | 6:42 PM

ನವದೆಹಲಿ, ಜುಲೈ 25: ಭ್ರಷ್ಟಾಚಾರದ ಆರೋಪದ ನಂತರ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ವಜಾಗೊಳಿಸಲು ಲೋಕಸಭೆ ಶೀಘ್ರದಲ್ಲೇ ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಇಂದು (ಶುಕ್ರವಾರ) ಘೋಷಿಸಿದ್ದಾರೆ. “ನಾವು ಯಾವುದೇ ಸಂದೇಹ ಇಟ್ಟುಕೊಳ್ಳಬಾರದು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ವಜಾಗೊಳಿಸುವ ಪ್ರಕ್ರಿಯೆಗಳು ಲೋಕಸಭೆಯಲ್ಲಿ ಪ್ರಾರಂಭವಾಗುತ್ತವೆ” ಎಂದು ರಿಜಿಜು ಹೇಳಿದ್ದಾರೆ.

ಅಕ್ರಮ ನಗದು ಪತ್ತೆ ಪ್ರಕರಣದಲ್ಲಿ ರಾಜ್ಯಸಭೆಯಲ್ಲಿ ಇದೇ ರೀತಿಯ ಪ್ರಸ್ತಾವನೆಗೆ ವಿರೋಧ ಪಕ್ಷಗಳು ಸಲ್ಲಿಸಿದ್ದ ನೋಟಿಸ್‌ಗೆ ಅಂಗೀಕಾರ ದೊರೆಯಲಿಲ್ಲ. ಇದರ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ಲೋಕಸಭೆಯಲ್ಲಿ ದ್ವಿಪಕ್ಷೀಯ ನಿರ್ಣಯವನ್ನು ಆರಂಭಿಸಲಾಗುವುದು. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಒಗ್ಗಟ್ಟಿನಿಂದ ಮುಂದುವರಿಯುವುದು ಎಲ್ಲಾ ರಾಜಕೀಯ ಪಕ್ಷಗಳ ಸರ್ವಾನುಮತದ ನಿರ್ಧಾರ ಎಂದು ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷದ 152 ಸಂಸದರು ಸಹಿ ಮಾಡಿರುವ ಪ್ರಸ್ತಾವನೆಯನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿದ್ದು ದೃಢ; ರಾಜೀನಾಮೆಗೆ ಸೂಚನೆ

ಅಧಿಕೃತ ಮೂಲಗಳ ಪ್ರಕಾರ, ರಾಜ್ಯಸಭಾ ಕಾರ್ಯದರ್ಶಿಯು ಜುಲೈ 21ರಂದು ಲೋಕಸಭೆಯು ಉಭಯ ಪಕ್ಷಗಳ ನೋಟಿಸ್ ಸ್ವೀಕರಿಸಿದ ದಿನವೇ ಸಲ್ಲಿಸಲಾದ ವಿರೋಧ ಪಕ್ಷದ ಬೆಂಬಲಿತ ನಿಲುವಳಿಯನ್ನು ಅಂಗೀಕರಿಸಲಿಲ್ಲ. ಈ ಕ್ರಮವು ವಿರೋಧ ಪಕ್ಷಗಳ 63 ರಾಜ್ಯಸಭಾ ಸದಸ್ಯರು ಸಹಿ ಮಾಡಿದ ನಿಲುವಳಿಯನ್ನು ಸುತ್ತುವರೆದಿರುವ ಊಹಾಪೋಹಗಳನ್ನು ಕೊನೆಗೊಳಿಸಿತು. ಜುಲೈ 21ರಂದು ಆಗಿನ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಮೇಲ್ಮನೆಯಲ್ಲಿ ನೋಟಿಸ್ ಸ್ವೀಕರಿಸಿರುವುದನ್ನು ಒಪ್ಪಿಕೊಂಡರು. ಇದು ಸರ್ಕಾರದೊಳಗೆ ಆತಂಕವನ್ನು ಹುಟ್ಟುಹಾಕಿತು. ಅದೇ ದಿನ ಸಂಜೆ ಅವರು ದಿಢೀರನೆ ರಾಜೀನಾಮೆಯನ್ನು ನೀಡಿದರು.

ಯಶವಂತ್ ವರ್ಮಾ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರವು ಸಾಮೂಹಿಕ ನಿರ್ಧಾರವಾಗಿದೆ ಎಂದು ಸಚಿವ ಕಿರಣ್ ರಿಜಿಜು ಒತ್ತಿ ಹೇಳಿದ್ದಾರೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತ್ರಿಸದಸ್ಯ ತನಿಖಾ ಸಮಿತಿಯನ್ನು ಘೋಷಿಸುವ ನಿರೀಕ್ಷೆಯಿದೆ. ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯ ಪ್ರಕಾರ, ಒಂದೇ ದಿನ ಎರಡೂ ಸದನಗಳಲ್ಲಿ ನೋಟಿಸ್‌ಗಳನ್ನು ಸಲ್ಲಿಸಿದರೆ ಆರೋಪಗಳ ತನಿಖೆಗಾಗಿ ಸಮಿತಿಯನ್ನು ಲೋಕಸಭೆ ಜಂಟಿಯಾಗಿ ರಚಿಸಬೇಕು.

ಏನಿದು ಪ್ರಕರಣ?:

ದೆಹಲಿಯಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಆಗ ಅವರ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ಆರಿಸುವಾಗ ಮನೆಯ ಒಂದು ಕೊಠಡಿಯಲ್ಲಿ ಅರೆಬರೆ ಸುಟ್ಟ ಕಂತೆಗಟ್ಟಲೆ ನೋಟುಗಳು ಕಾಣಿಸಿಕೊಂಡಿದ್ದವು. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದಾದ ನಂತರ ವಿವಾದ ಪ್ರಾರಂಭವಾಯಿತು. ಯಾವುದೇ ಮೂಲಗಳಿಲ್ಲದ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು ಯಶವಂತ್ ವರ್ಮಾ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪಕ್ಕೆ ಕಾರಣವಾಯಿತು. ಬಳಿಕ ದೆಹಲಿಯಿಂದ ಅವರನ್ನು ಅಲಹಾಬಾದ್ ಹೈಕೋರ್ಟ್​ಗೆ ವರ್ಗಾವಣೆ ಮಾಡಲಾಯಿತು.

ಇದನ್ನೂ ಓದಿ: ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್‌ಗೆ ನ್ಯಾ. ಯಶವಂತ್ ವರ್ಮಾ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

ನಂತರ ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತನಿಖೆಗೆ ಮೂವರು ನ್ಯಾಯಾಧೀಶರ ಸಮಿತಿಯನ್ನು ರಚಿಸಿದರು. ಅದು ಅಂತಿಮವಾಗಿ ಯಶವಂತ್ ವರ್ಮಾ ಅವರ ಮೇಲೆ ದೋಷಾರೋಪಣೆ ಮಾಡಿತು. ಇದರ ಹೊರತಾಗಿಯೂ, ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದ ಯಶವಂತ್ ವರ್ಮಾ ರಾಜೀನಾಮೆ ನೀಡಲು ನಿರಾಕರಿಸಿದರು. ಇದರಿಂದಾಗಿ ಮುಖ್ಯ ನ್ಯಾಯಾಧೀಶರು ವರದಿಯನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ರವಾನಿಸಿ, ನ್ಯಾ. ಯಶ್ವಂತ್ ವರ್ಮಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿದರು. ನ್ಯಾಯಮೂರ್ತಿ ಯಶವಂತ್ ವರ್ಮಾ ಸಮಿತಿಯ ಸಂಶೋಧನೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ