
ಲಕ್ನೋ, ಜೂನ್ 23: ಕನಿಷ್ಠ 15 ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಲಕ್ನೋದ ಅಲಿಗಂಜ್ ಕೋಚಿಂಗ್ ಸೆಂಟರ್ನಲ್ಲಿ ನಡೆದ ಭೀಕರ ಅಗ್ನಿ ದುರಂತವನ್ನು (Lucknow Fire Accident) ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಮತ್ತು ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಕೋಚಿಂಗ್ ಸೆಂಟರ್ ಮಾಲೀಕರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ದುರಂತದ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಲಕ್ನೋ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ನಡೆಸಿದ ಉನ್ನತ ಮಟ್ಟದ ಸಭೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ, ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. 7 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ತಂಡಕ್ಕೆ ಸೂಚಿಸಲಾಗಿದೆ. ಪ್ರವಾಸೋದ್ಯಮ, ಧಾರ್ಮಿಕ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮೃತ್ ಅಭಿಜತ್ ಅವರನ್ನು SITಯಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: ಲಕ್ನೋ ಕೋಚಿಂಗ್ ಸೆಂಟರ್ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು
ಇದಕ್ಕೂ ಮೊದಲು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದರು. ಗಾಯಗೊಂಡವರಿಗೆ ತಲಾ 50,000 ಆರ್ಥಿಕ ಸಹಾಯವನ್ನೂ ಘೋಷಿಸಿದ್ದರು.
ನಾಲ್ವರು ಅಧಿಕಾರಿಗಳು ಅಮಾನತು:
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ತನಿಖೆ ಚುರುಕುಗೊಳಿಸಿರುವ ಸರ್ಕಾರ, ಕರ್ತವ್ಯ ಲೋಪ ಎಸಗಿದ ವಿವಿಧ ಇಲಾಖೆಗಳ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದರಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಅಧಿಕಾರಿಗಳು ಸೇರಿದ್ದಾರೆ. ವಾಣಿಜ್ಯ ಕಟ್ಟಡದಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕೋಚಿಂಗ್ ಸೆಂಟರ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡು ತಕ್ಷಣವೇ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಸಂಸ್ಥೆ ನಡೆಸುತ್ತಿದ್ದ ಕೋಚಿಂಗ್ ಸೆಂಟರ್‌ನ ಮಾಲೀಕರು ಹಾಗೂ ಕಟ್ಟಡದ ವ್ಯವಸ್ಥಾಪಕರು ಸೇರಿದಂತೆ ಒಟ್ಟು 4 ಜನರನ್ನು ಬಂಧಿಸಲಾಗಿದೆ.
ಈ ಭೀಕರ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ವಾಣಿಜ್ಯ ಕಟ್ಟಡಗಳಲ್ಲಿ, ಬೇಸ್‌ಮೆಂಟ್‌ಗಳಲ್ಲಿ ಹಾಗೂ ಕಿರಿದಾದ ಜಾಗಗಳಲ್ಲಿ ನಡೆಯುತ್ತಿರುವ ಎಲ್ಲಾ ಕೋಚಿಂಗ್ ಸೆಂಟರ್‌ಗಳು, ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಆಡಳಿತ ಮಂಡಳಿಗೆ ಆದೇಶಿಸಿದೆ. ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ತಕ್ಷಣವೇ ಅಂತಹ ಸಂಸ್ಥೆಗಳನ್ನು ಸೀಲ್ ಮಾಡಲು ಸೂಚಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ