ತಡ ಮಾಡದೆ ನನ್ನನ್ನು ಮುಖ್ಯಮಂತ್ರಿ ಮಾಡಿ; ಪಂಜಾಬ್ ಉದಾಹರಣೆ ಕೊಟ್ಟು, ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿದ ಸಚಿನ್ ಪೈಲಟ್
ಸಚಿನ್ ಪೈಟಲ್ ಆಗಲೇ ಒಮ್ಮೆ ಪಕ್ಷದಿಂದ ರೆಬಲ್ ಆಗಿದ್ದವರು. 2020ರಲ್ಲಿ ಒಂದು ಬಾರಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದರು. ಇವರಿಗೆ 18 ಶಾಸಕರು ಬೆಂಬಲವನ್ನೂ ಕೊಟ್ಟಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ರಾಜಸ್ಥಾನ ರಾಜಕೀಯದಲ್ಲಿ ವಿವಿಧ ಬೆಳವಣಿಗೆಗಳು ನಡೆದಿದ್ದವು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಬರುವ ವರ್ಷ ಅಂದರೆ 2023ರ ಡಿಸೆಂಬರ್ನಲ್ಲಿ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ತಮ್ಮನ್ನು ಕೂಡಲೇ ಮುಖ್ಯಮಂತ್ರಿ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ. ಇನ್ನೂ ವಿಳಂಬ ಮಾಡಬೇಡಿ. ಆದಷ್ಟು ಬೇಗ ನನ್ನನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿ. ಖಂಡಿತ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವೇ ರಾಜಸ್ಥಾನದಲ್ಲಿ ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಸಚಿನ್ ಪೈಲಟ್ ಕಾಂಗ್ರೆಸ್ ವರಿಷ್ಠರ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ಸಚಿನ್ ಪೈಲಟ್ ಅವರು ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಮೂರು ಸಭೆಗಳನ್ನೂ ನಡೆಸಿದ್ದಾರೆ. ಅಷ್ಟೇ ಅಲ್ಲ, ರಾಜಸ್ಥಾನದಲ್ಲಿ ಪಕ್ಷ ಸದೃಢಗೊಳಿಸಲು ಕೂಡಲೇ ಯಾವುದಾದರೂ ಕ್ರಮ ಕೈಗೊಳ್ಳಬೇಕು. ತಡಮಾಡದೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಇಲ್ಲದೆ ಹೋದರೆ ಪಂಜಾಬ್ನಲ್ಲಿ ಸೋತಂತೆ, ರಾಜಸ್ಥಾನದಲ್ಲೂ ಸೋಲಬೇಕಾಗುತ್ತದೆ ಎಂದು ತಮ್ಮ ಬಾಸ್ಗಳಿಗೆ ಪೈಟಲ್ ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಮರಿಂದರ್ ಸಿಂಗ್ರನ್ನು ಚುನಾವಣೆಗೆ ಕೆಲವೇ ತಿಂಗಳು ಮೊದಲು ಬದಲಿಸಿ, ಚರಣಜಿತ್ ಸಿಂಗ್ ಛನ್ನಿಯವರನ್ನು ಸಿಎಂ ಮಾಡಲಾಗಿತ್ತು. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿ ಪಕ್ಷ ಸೋತಿದೆ. ರಾಜಸ್ಥಾನದಲ್ಲಿ ಹಾಗೆ ಮಾಡಬೇಡಿ. ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂಬುದು ಸಚಿನ್ ಪೈಲಟ್ ಬೇಡಿಕೆ.
ಸಚಿನ್ ಪೈಟಲ್ ಆಗಲೇ ಒಮ್ಮೆ ಪಕ್ಷದಿಂದ ರೆಬಲ್ ಆಗಿದ್ದವರು. 2020ರಲ್ಲಿ ಒಂದು ಬಾರಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದರು. ಇವರಿಗೆ 18 ಶಾಸಕರು ಬೆಂಬಲವನ್ನೂ ಕೊಟ್ಟಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ರಾಜಸ್ಥಾನ ರಾಜಕೀಯದಲ್ಲಿ ವಿವಿಧ ಬೆಳವಣಿಗೆಗಳು ನಡೆದಿದ್ದವು. ಕೊನೆಗೂ ಆ ಭಿನ್ನಾಭಿಪ್ರಾಯವನ್ನು ಸುಧಾರಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದರು. ಈಗ ಮತ್ತೆ ಅಶೋಕ್ ಗೆಹ್ಲೋಟ್ರನ್ನು ಕಾಂಗ್ರೆಸ್ ಸಿಎಂ ಹುದ್ದೆಯಿಂದ ಕೆಳಗಿಳಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಡೆಯುತ್ತಿರುವ ಎಲ್ಲ ಚುನಾವಣೆಗಳಲ್ಲೂ ಸೋಲುತ್ತಿರುವ ಕಾಂಗ್ರೆಸ್, ಅಧಿಕಾರದಲ್ಲಿ ಇರುವುದೇ ಒಂದೆರಡು ರಾಜ್ಯಗಳಲ್ಲಿ. ಅದರಲ್ಲಿ ರಾಜಸ್ಥಾನ ಕೂಡ ಒಂದು. ಇಲ್ಲಿ ಬರುವ ವರ್ಷವೂ ಅಧಿಕಾರ ಹಿಡಿಯಲು ಈಗಿನಿಂದಲೇ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆಯೂ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅಶೋಕ್ ಗೆಹ್ಲೋಟ್, ನನ್ನ ರಾಜೀನಾಮೆ ಪತ್ರ ಯಾವಾಗಲೂ ಸೋನಿಯಾ ಗಾಂಧಿ ಬಳಿಯೇ ಇರುತ್ತದೆ. ಅವರು ಯಾವಾಗ ಮುಖ್ಯಮಂತ್ರಿ ಸ್ಥಾನ ತೊರೆಯುವಂತೆ ಹೇಳಿದರೂ ನಾನು ಸಿದ್ಧ ಎಂದಿದ್ದಾರೆ.
ಇದನ್ನೂ ಓದಿ: ‘ಸುದೀಪ್ ಸರ್ ಪರ ನಾವು ಯಾವತ್ತೂ ಇರ್ತೀವಿ’; ಉಮೇಶ್ ಬಣಕಾರ್