Viral News: ಹೊಸ ಪೆನ್ಸಿಲ್ ಕೇಳಿದರೆ ಅಮ್ಮ ಹೊಡೆಯುತ್ತಾರೆ; ಪ್ರಧಾನಿ ಮೋದಿಗೆ ಪತ್ರ ಬರೆದ 6 ವರ್ಷದ ಬಾಲಕಿ
Uttar Pradesh News: ಉತ್ತರ ಪ್ರದೇಶದ ಕನ್ನೂಜ್ ಜಿಲ್ಲೆಯ ಕೃತಿ ದುಬೆ ಎಂಬ 6 ವರ್ಷದ ಬಾಲಕಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ.
ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಕೆಳ ವರ್ಗದವರು ಮತ್ತು ಮಧ್ಯಮ ವರ್ಗದವರಿಗೆ ತಟ್ಟುತ್ತಲೇ ಇದೆ. ಇದೀಗ ಪುಟ್ಟ ಬಾಲಕಿಗೂ ಬೆಲೆಯೇರಿಕೆಯ ಬಗ್ಗೆ ತಲೆಬಿಸಿ ಶುರುವಾಗಿದ್ದು, ತನಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಆ 6 ವರ್ಷದ ಬಾಲಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ. ಮ್ಯಾಗಿ (Maggi), ಪೆನ್ಸಿಲ್ (Pencil) ಬೆಲೆ ಜಾಸ್ತಿ ಆಗಿರುವುದರಿಂದ ನನಗೆ ತೊಂದರೆಯಾಗಿದೆ ಎಂದು ಆ ಬಾಲಕಿ ಹಿಂದಿ(Hindi) ಭಾಷೆಯಲ್ಲಿ ಬರೆದಿರುವ ಪತ್ರ ಇದೀಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಕನ್ನೂಜ್ ಜಿಲ್ಲೆಯ ಕೃತಿ ದುಬೆ ಎಂಬ 6 ವರ್ಷದ ಬಾಲಕಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾಳೆ. ನನ್ನ ಹೆಸರು ಕೃತಿ ದುಬೆ. ನಾನು 1ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಯವರೇ, ನಿಮ್ಮ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ. ನನ್ನ ಪೆನ್ಸಿಲ್, ರಬ್ಬರ್ ಬೆಲೆ ಕೂಡ ಹೆಚ್ಚಾಗಿದೆ. ನಾನು ಇಷ್ಟಪಟ್ಟು ತಿನ್ನುವ ಮ್ಯಾಗಿ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ನಾನು ಪೆನ್ಸಿಲ್ ಬೇಕು ಎಂದು ಹೇಳಿದರೆ ನನ್ನ ಅಮ್ಮ ನನಗೆ ಹೊಡೆಯುತ್ತಾಳೆ. ನಾನು ಏನು ಮಾಡಬೇಕು? ಶಾಲೆಯಲ್ಲಿ ನನ್ನ ಜೊತೆ ಕೂರುವವರು ನನ್ನ ಪೆನ್ಸಿಲ್ ಕದ್ದು ನನಗೆ ಅಮ್ಮನಿಂದ ಹೊಡೆಸುತ್ತಿದ್ದಾರೆ ಎಂದು ಆಕೆ ಪತ್ರ ಬರೆದಿದ್ದಾಳೆ.
ಇದನ್ನೂ ಓದಿ: Viral News: ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ 100ಕ್ಕೆ 151 ಅಂಕ; ರಿಸಲ್ಟ್ ನೋಡಿ ವಿದ್ಯಾರ್ಥಿಯೇ ಶಾಕ್
ಹಿಂದಿಯಲ್ಲಿರುವ ಈ ಮುದ್ದಾದ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಬಾಲಕಿಯ ತಂದೆ ವಿಶಾಲ್ ದುಬೆ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಇದು ನನ್ನ ಮಗಳ ಮನ್ ಕಿ ಬಾತ್. ಆಕೆ ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡು ಬಂದು, ಹೊಸ ಪೆನ್ಸಿಲ್ ಕೇಳಿದ್ದಕ್ಕೆ ಆಕೆಯ ಅಮ್ಮ ಪೆಟ್ಟು ಕೊಟ್ಟಿದ್ದಳು. ಅದರಿಂದ ಬೇಸರಗೊಂಡು ಆಕೆ ಈ ಪತ್ರ ಬರೆದಿದ್ದಾಳೆ ಎಂದು ಕೃತಿಯ ತಂದೆ ಹೇಳಿದ್ದಾರೆ.
Published On - 12:46 pm, Mon, 1 August 22