
ಗ್ವಾಲಿಯರ್, ನವೆಂಬರ್ 17: ಮಧ್ಯಪ್ರದೇಶದ ಗ್ವಾಲಿಯರ್ನ ರಾಜಮನೆತನದ ಯುವ ಕುಡಿ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ ಮಹಾನ್ ಆರ್ಯಮನ್ ಸಿಂಧಿಯಾ ಅವರು ನವೆಂಬರ್ 17ರಂದು 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದಿರುವ ಮಹಾನ್ ಆರ್ಯಮನ್, ಇದೀಗ ಕ್ರಿಕೆಟ್ ಆಡಳಿತ ಮತ್ತು ಯುವಜನರ ಅಭಿವೃದ್ಧಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಂಪಿಸಿಎ) ಅಧ್ಯಕ್ಷರಾಗಿರುವ ಅವರು, ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಹಲವು ಯೋಜನೆಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು, ಕ್ರಿಕೆಟ್ಗೆ ತಂತ್ರಜ್ಞಾನದ ಬಳಕೆ ಮತ್ತು ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.
ಮಹಾನ್ ಆರ್ಯಮನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಸಂದರ್ಭದಲ್ಲಿ ಅವರ ಶಿಕ್ಷಣ, ಕುಟುಂಬದ ಹಿನ್ನೆಲೆ, ಕ್ರಿಕೆಟ್ ಆಡಳಿತದ ಜವಾಬ್ದಾರಿ ಮತ್ತು ವೈಯಕ್ತಿಕ ಆಸಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕಾದ ಏಳು ಪ್ರಮುಖ ಸಂಗತಿಗಳು ಇಲ್ಲಿವೆ.
ಮಹಾನ್ ಆರ್ಯಮನ್ ಸಿಂಧಿಯಾ ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಿಯದರ್ಶಿನಿ ರಾಜೆ ಸಿಂಧಿಯಾ ಅವರ ಪುತ್ರ. ಗ್ವಾಲಿಯರ್ನ ಸಿಂಧಿಯಾ ರಾಜಮನೆತನಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ ಅವರು, ರಾಜಮನೆತನದ ಪರಂಪರೆ ಮತ್ತು ರಾಜಕೀಯ ಹಿನ್ನೆಲೆಯ ನಡುವೆ ಬೆಳೆದಿದ್ದಾರೆ. ಅವರ ಅಜ್ಜ ಮಾಧವರಾವ್ ಸಿಂಧಿಯಾ ಕೂಡ ಹಿರಿಯ ರಾಜಕಾರಣಿಯಾಗಿದ್ದರು.
ಮಹಾನಾರ್ಯಮನ್ ಅವರು ಉತ್ತರಾಖಂಡದ ಡೆಹ್ರಾಡೂನ್ನ ಪ್ರಸಿದ್ಧ ದಿ ಡೂನ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದಿದ್ದಾರೆ. ದೇಶದ ಹಲವು ಗಣ್ಯರು ಓದಿರುವ ಈ ಶಿಕ್ಷಣ ಸಂಸ್ಥೆ ತನ್ನ ಶೈಕ್ಷಣಿಕ ಗುಣಮಟ್ಟ ಮತ್ತು ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ಅಮೆರಿಕದ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಅಧ್ಯಯನ ಮಾಡಿದ್ದಾರೆ. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಉನ್ನತ ಶಿಕ್ಷಣ ಮುಂದುವರೆಸಿದ್ದಾರೆ. ಈ ಶಿಕ್ಷಣವು ಆಡಳಿತ, ರಾಜಕೀಯ ಮತ್ತು ಜಾಗತಿಕ ವಿಚಾರಗಳ ಬಗ್ಗೆ ಅವರ ಆಸಕ್ತಿಗೆ ಪೂರಕವಾಗಿದೆ.
2025ರ ಸೆಪ್ಟೆಂಬರ್ನಲ್ಲಿ ಮಹಾನಾರ್ಯಮನ್ ಸಿಂಧಿಯಾ ಅವರು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (MPCA) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಸಂಘದ ಇತಿಹಾಸದಲ್ಲೇ ಅತ್ಯಂತ ಕಿರಿಯ ಅಧ್ಯಕ್ಷರಲ್ಲಿ ಒಬ್ಬರೆಂಬ ಗುರುತಿಗೆ ಪಾತ್ರರಾದರು. ವಿಶೇಷವೆಂದರೆ, ಅವರ ತಂದೆ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಜ್ಜ ಮಾಧವರಾವ್ ಸಿಂಧಿಯಾ ಕೂಡ ಈ ಹಿಂದೆ ಎಂಪಿಸಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಕ್ರಿಕೆಟ್ ಆಡಳಿತದಲ್ಲಿ ಸಿಂಧಿಯಾ ಕುಟುಂಬದ ಮೂರನೇ ತಲೆಮಾರಿನ ಪ್ರವೇಶ ಇದಾಗಿದೆ.
2024ರಲ್ಲಿ ಗ್ವಾಲಿಯರ್ನಲ್ಲಿ ಆರಂಭವಾದ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ (MPL) ರೂಪಿಸುವಲ್ಲಿ ಮಹಾನಾರ್ಯಮನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಟೂರ್ನಿಯಲ್ಲಿ ರಾಜ್ಯದ ವಿವಿಧ ಭಾಗಗಳ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಐಪಿಎಲ್ ಮಾದರಿಯಲ್ಲಿ ಫ್ರಾಂಚೈಸಿ ಆಧಾರಿತ ಪಂದ್ಯಾವಳಿಯಾಗಿ ಇದನ್ನು ರೂಪಿಸಲಾಗಿದೆ.
ಕ್ರಿಕೆಟ್ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಮಹಾನಾರ್ಯಮನ್ ಆಸಕ್ತಿ ಹೊಂದಿದ್ದಾರೆ. ಆಟಗಾರರ ಪ್ರದರ್ಶನ ವಿಶ್ಲೇಷಣೆ, ತರಬೇತಿ ವಿಧಾನಗಳ ಸುಧಾರಣೆ ಮತ್ತು ಕ್ರಿಕೆಟ್ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಲ್ಲಿ ತಂತ್ರಜ್ಞಾನ ನೆರವಾಗಬಹುದು ಎಂಬುದು ಅವರ ಆಶಯವಾಗಿದೆ. ಅವರು ಎಥೆರಾ ಎಐ ಸಂಸ್ಥೆಯೊಂದಿಗೂ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಸಂಸ್ಥೆ ಅಮೆಜಾನ್ ಜೊತೆ ತಿಳುವಳಿಕೆ ಒಪ್ಪಂದ ಮಾಡಿಕೊಂಡಿರುವುದಾಗಿಯೂ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಮಹಾನ್ ಆರ್ಯಮನ್ ಅವರ ಗಮನ ಕೇವಲ ಕ್ರಿಕೆಟ್ ಆಡಳಿತಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಪ್ರದೇಶಗಳ ಯುವ ಆಟಗಾರರು ಮತ್ತು ಮಹಿಳೆಯರಿಗೆ ಕ್ರೀಡೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇತ್ತೀಚಿನ ದೀಪಾವಳಿ ಸಂದರ್ಭದಲ್ಲಿ ಗ್ವಾಲಿಯರ್ನ ಪ್ರತಿಭಾವಂತ ಕ್ರೀಡಾಪಟುಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ವರದಿಯಾಗಿದೆ. ಶಿವಪುರಿಯ ಅಂಗವಿಕಲ ವ್ಯಕ್ತಿಯೊಬ್ಬರಿಗೂ ಸ್ಕೂಟರ್ ಒದಗಿಸಿದ್ದಾರೆ ಎನ್ನಲಾಗಿದೆ.
ಗ್ವಾಲಿಯರ್-ಚಂಬಲ್ ಭಾಗದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ರೈತರು, ಯುವಕರು ಮತ್ತು ಸ್ಥಳೀಯ ಸಮುದಾಯದ ಜನರೊಂದಿಗೆ ಸಂವಾದ ನಡೆಸುವುದು ಅವರ ಸಾರ್ವಜನಿಕ ಚಟುವಟಿಕೆಗಳ ಭಾಗವಾಗಿದೆ.
ಮಹಾನ್ ಆರ್ಯಮನ್ ಸಿಂಧಿಯಾ ಎಂಪಿಸಿಎ ಅಧ್ಯಕ್ಷರಾದ ಬಳಿಕ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ನೀಡುವುದು, ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಅಭಿವೃದ್ಧಿಪಡಿಸುವುದು ಮತ್ತು ಮಹಿಳಾ ಕ್ರಿಕೆಟ್ಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. ಎಂಪಿಸಿಎ 1957ರಲ್ಲಿ ಸ್ಥಾಪನೆಯಾಗಿದ್ದು, ಮಧ್ಯಪ್ರದೇಶದಲ್ಲಿ ಕ್ರಿಕೆಟ್ ಚಟುವಟಿಕೆಗಳ ನಿರ್ವಹಣೆ, ಪಂದ್ಯಾವಳಿಗಳ ಆಯೋಜನೆ ಮತ್ತು ಆಟಗಾರರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದೋರ್ನ ಹೋಳ್ಕರ್ ಕ್ರೀಡಾಂಗಣವೂ ಮಧ್ಯಪ್ರದೇಶ ಕ್ರಿಕೆಟ್ನ ಪ್ರಮುಖ ಕೇಂದ್ರವಾಗಿದೆ.
ಎಂಪಿಸಿಎ ಅಧ್ಯಕ್ಷರಾಗಿ 2025-28ರ ಅವಧಿಗೆ ಜವಾಬ್ದಾರಿ ವಹಿಸಿಕೊಂಡಿರುವ ಮಹಾನ್ ಆರ್ಯಮನ್ ಮುಂದೆ ರಾಜ್ಯದಲ್ಲಿ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿ, ಹೊಸ ಪ್ರತಿಭೆಗಳ ಗುರುತಿಸುವಿಕೆ ಮತ್ತು ಹೆಚ್ಚಿನ ಸ್ಪರ್ಧಾತ್ಮಕ ಪಂದ್ಯಾವಳಿಗಳ ಆಯೋಜನೆ ಪ್ರಮುಖ ಸವಾಲುಗಳಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ