ಅಪ್ಪನಿಗೆ ಹೊಡಿತೀರಾ, ನಿಮ್ಮನ್ನ ಸುಮ್ಮನೆ ಬಿಡಲ್ಲ, ತಂದೆ ಮೇಲೆ ಹಲ್ಲೆ ಖಂಡಿಸಿ ಕ್ಯಾಂಟೀನ್‌ಗೆ ನುಗ್ಗಿ ದಾಂಧಲೆ ನಡೆಸಿದ ಹೆಣ್ಣುಮಕ್ಕಳು
ವಾರಾಣಸಿಯಲ್ಲಿ ತಂದೆಯ ಮೇಲೆ ಕ್ಯಾಂಟೀನ್ ಸಿಬ್ಬಂದಿ ಹಲ್ಲೆ ನಡೆಸಿದ ಆಕ್ರೋಶದಲ್ಲಿ ಇಬ್ಬರು ಹೆಣ್ಣುಮಕ್ಕಳು ಕ್ಯಾಂಟೀನ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪೊಲೀಸ್ ಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡ ಇವರು ಹಿಟ್ಟಿನ ಪಾತ್ರೆಗಳನ್ನು ಉರುಳಿಸಿ, ವಸ್ತುಗಳನ್ನು ಎಸೆದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋ ವೈರಲ್ ಆಗಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ವಾರಾಣಸಿ, ನವೆಂಬರ್ 17: ಇಬ್ಬರು ಹೆಣ್ಣುಮಕ್ಕಳು ಕ್ಯಾಂಟೀನ್‌ಗೆ ನುಗ್ಗಿ ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ವಾರಣಾಸಿಯಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಂದೆಯನ್ನು ಕ್ಯಾಂಟೀನ್ ಸಿಬ್ಬಂದಿ ಥಳಿಸಿದ್ದ ಕಾರಣಕ್ಕೆ ಆಕ್ರೋಶಗೊಂಡು ಈ ಹೆಣ್ಣುಮಕ್ಕಳು ಕ್ಯಾಂಟೀನ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹಿಟ್ಟಿನ ಪಾತ್ರೆಗಳನ್ನು ಉರುಳಿಸಿ, ಪಾತ್ರೆಗಳನ್ನು ಎಸೆದು, ಸಿಬ್ಬಂದಿಯ ಮೇಲೆ ನೀರು ಎರಚಿದ್ದಾರೆ.
ವರದಿಗಳ ಪ್ರಕಾರ, ನವೆಂಬರ್ 4ರಂದು ಸಹೋದರಿಯರ ತಂದೆ ಮತ್ತು ಕ್ಯಾಂಟೀನ್ ಸಿಬ್ಬಂದಿ ನಡುವೆ ಜಗಳ ನಡೆದಿತ್ತು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಸಿಬ್ಬಂದಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಈ ಸಂಬಂಧ ಭೇಲುಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕುಟುಂಬದ ಅಸಮಾಧಾನ. ಇದರಿಂದ ಆಕ್ರೋಶಗೊಂಡ ಇಬ್ಬರು ಸಹೋದರಿಯರು ನವೆಂಬರ್ 16ರಂದು ಉಪಾಹಾರ ಗೃಹಕ್ಕೆ ತೆರಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಸಹೋದರಿಯರ ಆಕ್ರೋಶ
ಉಪಾಹಾರ ಗೃಹದ ಸಮೀಪ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ. ಇಬ್ಬರು ಮಹಿಳೆಯರು ಸ್ಕೂಟರ್‌ನಲ್ಲಿ ಸ್ಥಳಕ್ಕೆ ಬಂದು ಮೊದಲು ಅಂಗಡಿಯ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದು ಕಾಣಿಸುತ್ತದೆ. ನಂತರ ಅವರಲ್ಲಿ ಒಬ್ಬರು ಏಕಾಏಕಿ ಅಂಗಡಿಯೊಳಗೆ ನುಗ್ಗಿ ಹಿಟ್ಟು ತುಂಬಿದ್ದ ಪಾತ್ರೆಯನ್ನು ಉರುಳಿಸುತ್ತಾರೆ. ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾರೆ. ಮತ್ತೊಬ್ಬ ಮಹಿಳೆ ಸಿಬ್ಬಂದಿಯ ಮೇಲೆ ನೀರು ಎರಚುತ್ತಾ, ಅಂಗಡಿಯನ್ನು ಮುಚ್ಚುವಂತೆ ಕೂಗಾಡುತ್ತಾರೆ.
ಇದನ್ನೂ ಓದಿ: Ragi Food: ಸಂಸತ್ನಲ್ಲಿ ಈ ಬಾರಿ ರಾಗಿ ಆಹಾರಗಳದ್ದೇ ಆರ್ಭಟ; ಏನೇನಿರುತ್ತೆ ಖಾದ್ಯಗಳು?
ಈ ವೇಳೆ ಅಂಗಡಿಯಲ್ಲಿದ್ದ ಪಾತ್ರೆಗಳನ್ನು ಒಡೆದು ಹಾಕಿರುವುದೂ ವಿಡಿಯೋದಲ್ಲಿ ಕಂಡುಬಂದಿದೆ. ಮಹಿಳೆಯರ ಆಕ್ರೋಶ ಕಂಡು ಅಂಗಡಿಯ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ.
ಸ್ಥಳೀಯರ ಮಧ್ಯಪ್ರವೇಶಕ್ಕೂ ಜಗ್ಗದ ಸಹೋದರಿಯರು
ಮಹಿಳೆಯರ ವರ್ತನೆ ಕಂಡು ಸ್ಥಳೀಯರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಆಕ್ರೋಶ ಕಡಿಮೆಯಾಗಿಲ್ಲ. ಅಂಗಡಿಯ ಸುತ್ತಮುತ್ತ ಮಕ್ಕಳು ಇರುವುದರಿಂದ ಎಚ್ಚರಿಕೆಯಿಂದ ವರ್ತಿಸುವಂತೆ ಸ್ಥಳೀಯರೊಬ್ಬರು ಮನವಿ ಮಾಡಿದ್ದಾರೆ. ಆದರೆ ಮಹಿಳೆಯೊಬ್ಬರು ಸ್ಥಳೀಯರ ಮಾತಿಗೂ ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ಇತರರು ಮಧ್ಯಪ್ರವೇಶಿಸಿದ್ದಾರೆ.
ವಿಡಿಯೋ
Two girls in Varanasi vandalised a dosa shop after their father was allegedly brutally beaten by the shop’s employees. With no police action for nearly two weeks, their frustration turned into anger. https://t.co/hQFlA6UCM6
— Ghar Ke Kalesh (@gharkekalesh) November 16, 2026
ಇತ್ತ ಉಪಾಹಾರ ಗೃಹದ ಮಾಲೀಕರು ಕೂಡ ಮಹಿಳೆಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಗೌರವ್ ಕುಮಾರ್ ತಿಳಿಸಿದ್ದಾರೆ. ತಂದೆಗೆ ನ್ಯಾಯ ಕೊಡಿಸಬೇಕೆಂಬ ಉದ್ದೇಶದಿಂದ ಸಹೋದರಿಯರು ಈ ರೀತಿ ವರ್ತಿಸಿದ್ದಾರೆಯೇ ಎಂಬುದು ಒಂದು ಕಡೆಯಾದರೆ, ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು ಮತ್ತೊಂದು ಚರ್ಚೆಯಾಗಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
