Ragi Food: ಸಂಸತ್ನಲ್ಲಿ ಈ ಬಾರಿ ರಾಗಿ ಆಹಾರಗಳದ್ದೇ ಆರ್ಭಟ; ಏನೇನಿರುತ್ತೆ ಖಾದ್ಯಗಳು?
Millets in Parliament Food Menu List: ಸಂಸತ್ ಭವನದಲ್ಲಿ ಸಂಸದರಿಗಾಗಿ ಇರುವ ಊಟದ ಮೆನುವಿನಲ್ಲಿ ಸಿರಿಧಾನ್ಯಗಳ ಖಾದ್ಯಗಳನ್ನು ಸೇರಿಸಲಾಗುತ್ತಿದೆ. ರಾಗಿ ದೋಸೆ, ರಾಗಿ ಪಾಯಸದಿಂದ ಹಿಡಿದು ಸಜ್ಜೆ ರೊಟ್ಟಿಯವರೆಗೂ ವಿವಿಧ ಖಾದ್ಯಗಳು ಮೆನು ಪಟ್ಟಿಗೆ ಸೇರಲಿವೆ ಎಂದು ಹೇಳಲಾಗುತ್ತಿದೆ.
ನವದೆಹಲಿ: ಸಂಸತ್ ಭವನದಲ್ಲಿ ಸಾಮಾನ್ಯವಾಗಿ ಚಪಾತಿ, ರೋಟಿ, ಬಿರಿಯಾನಿ ಇತ್ಯಾದಿ ತಿನಿಸುಗಳು ಇರುತ್ತವೆ. ಆದರೆ, ಇನ್ಮುಂದೆ ಇಲ್ಲಿ ಸಿರಿಧಾನ್ಯಗಳ ಖಾದ್ಯಗಳು (Millets Food Menu) ಲಭ್ಯ ಇರಲಿವೆ. ಅದರಲ್ಲೂ ವಿಶೇಷವಾಗಿ ರಾಗಿ (Finger Millet), ಜೋಳದ ಖಾದ್ಯಗಳಿಗೆ ವಿಶೇಷ ಬೇಡಿಕೆ ಬಂದಿದೆ. ಜನವರಿ 29ರಂದು ತಮ್ಮ ಮನ್ ಕೀ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಗಿ ಇತ್ಯಾದಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಮಾತನಾಡಿದ್ದರು. ಸಿರಿಧಾನ್ಯಗಳ ಉತ್ಪಾದಕರ ಕಾರ್ಯಗಳನ್ನು ಶ್ಲಾಘಿಸಿದ್ದರು. ಎಲ್ಲರೂ ಆರೋಗ್ಯಪಾಲನೆಗೆ ಸಿರಿಧಾನ್ಯಗಳ ಆಹಾರ ಸೇವನೆಯ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದ್ದರು. ಅಷ್ಟೇ ಅಲ್ಲ ಭಾರತದಲ್ಲಿ ನಡೆಯುವ ಎಲ್ಲಾ ಜಿ20 ಸಭೆಗಳಲ್ಲೂ (G20 Meet) ಸಿರಿಧಾನ್ಯಗಳ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಗುತ್ತದೆ ಎಂದೂ ಅವರು ಹೇಳಿದರು.
ಇದೇ ವೇಳೆ, ಸಂಸತ್ ಭವನದಲ್ಲಿ ಸಂಸದರಿಗಾಗಿ ಇರುವ ಊಟದ ಮೆನುವಿನಲ್ಲಿ ಸಿರಿಧಾನ್ಯಗಳ ಖಾದ್ಯಗಳನ್ನು ಸೇರಿಸಲಾಗುತ್ತಿದೆ. ರಾಗಿ ದೋಸೆ, ರಾಗಿ ಪಾಯಸದಿಂದ ಹಿಡಿದು ಸಜ್ಜೆ ರೊಟ್ಟಿಯವರೆಗೂ ವಿವಿಧ ಖಾದ್ಯಗಳು ಮೆನು ಪಟ್ಟಿಗೆ ಸೇರಲಿವೆ ಎಂದು ಹೇಳಲಾಗುತ್ತಿದೆ.
ರಾಗಿ ಖಾದ್ಯಗಳು
ರಾಗಿ ದೋಸೆ, ರಾಗಿ ಘೀ ರೋಸ್ಟ್, ರಾಗಿ ತಟ್ಟೆ ಇಡ್ಲಿ, ರಾಗಿ ಪೂರಿ, ರಾಗಿ ವಾಲ್ನಟ್ ಲಾಡು (ರಾಗಿ ಆರೋಟು ಲಡ್ಡು), ರಾಗಿ ಬಟಾಣಿ ಸೂಪು (Ragi Matar Soup) ಮೊದಲಾದ ರಾಗಿ ಖಾದ್ಯಗಳು ಸಿರಿಧಾನ್ಯ ಆಹಾರಗಳ ಮೆನು ಪಟ್ಟಿಯಲ್ಲಿ ಇವೆ.
ರಾಷ್ಟ್ರಪತಿ ಭವನದಲ್ಲಿ ಐದೂವರೆಗೆ ವರ್ಷಗಳ ಕಾಲ ಮುಖ್ಯ ಬಾಣಸಿಗರಾಗಿದ್ದ ಐಟಿಡಿಸಿಯ ಮೋಂಟು ಸೈನಿ ಅವರು ಸಂಸತ್ ಸದಸ್ಯರಿಗಾಗಿ ಈ ಮೆನು ಸಿದ್ಧಪಡಿಸಿದ್ದಾರೆ. ಅವರ ಪ್ರಕಾರ, ರಾಗಿ ವಾಲ್ನಟ್ ಲಡ್ಡು ಅತ್ಯಂತ ಬೇಡಿಕೆಯಲ್ಲಿರುವ ಖಾದ್ಯಗಳಲ್ಲಿ ಒಂದಾಗಿದೆಯಂತೆ.
ಸಿರಿಧಾನ್ಯಗಳು (Millets): ರಾಗಿ, ಜೋಳ, ಸಜ್ಜೆ, ಬರಗು, ನವಣೆ, ಹಾರಕ, ಸಾಮೆ, ಅಕ್ಕಡಿ, ಕೊರಲೆ ಇವು ಭಾರತದ 9 ಸಿರಿಧಾನ್ಯಗಳೆನಿಸಿವೆ. ಅಕ್ಕಿ, ಗೋಧಿ, ಬಾರ್ಲಿಗಳ ಹೊರತಾದ ಬೇರೆ ಆಹಾರಧಾನ್ಯಗಳೇ ಸಿರಿಧಾನ್ಯಗಳು. ಎಲ್ಲಾ ಹವಾಮಾನಕ್ಕೂ ಒಗ್ಗುವ ಈ ಧಾನ್ಯಗಳಲ್ಲಿ ಬಹಳ ಹೆಚ್ಚು ಪೌಷ್ಟಿಕಾಂಶಗಳಿರುತ್ತವೆ. ಸಣ್ಣ ಕಾಳುಗಳಾದ್ದರಿಂದ ಇವನ್ನು ಕಿರು ಧಾನ್ಯಗಳೆಂದೂ ಕರೆಯಲಾಗುತ್ತದೆ. ರಾಗಿ, ಜೋಳದ ಜೊತೆ ನವಣೆ ಮತ್ತು ಸಜ್ಜೆ ಬಹಳ ಬೇಡಿಕೆ ಇರುವ ಇತರ ಸಿರಿಧಾನ್ಯಗಳಾಗಿವೆ.
ರಾಗಿ ಜನಪ್ರಿಯತೆ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ರಾಗಿಯುಕ್ತ ಖಾದ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚೆಚ್ಚು ಜನರು ರಾಗಿ ಬಳಸುತ್ತಿದ್ದಾರೆ. ಕರ್ನಾಟಕದ, ಅದರಲ್ಲೂ ದಕ್ಷಿಣ ಕರ್ನಾಟದಲ್ಲಿ ರಾಗಿ ಸಹಜ ಬೆಳೆ. ಭಾರತದಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಮತ್ತು ಬಳಕೆಯಾಗುವ ರಾಜ್ಯ ಕರ್ನಾಟಕ. ಇದು ಬಿಟ್ಟರೆ ತಮಿಳುನಾಡು, ಆಂಧ್ರದ ಕೆಲ ಕಡೆ ರಾಗಿಯ ಬಳಕೆ ಇದೆ. ಮೈಸೂರು ಸೀಮೆಯ ಆಹಾರದಲ್ಲಿ ಪ್ರಮುಖವಾದುದು ರಾಗಿ ಮುದ್ದೆ. ಆಂಧ್ರದಲ್ಲೂ ರಾಯಲಸೀಮೆ ಭಾಗದಲ್ಲಿ ರಾಗಿ ಮುದ್ದೆ ಬಳಸುತ್ತಾರೆ. ಈ ಮೂರು ರಾಜ್ಯಗಳಲ್ಲದೇ ಮಹಾರಾಷ್ಟ್ರ, ಬಿಹಾರ, ಛತ್ತೀಸ್ಗಡ, ಝಾರ್ಖಂಡ್, ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಉತ್ತರಾಂಚಲ ರಾಜ್ಯಗಳಲ್ಲೂ ರಾಗಿಯನ್ನು ಅಲ್ಪಸ್ವಲ್ಪ ಪ್ರಮಾಣದಲ್ಲಿ ಬೆಳೆಯುತ್ತಾರೆ.
Published On - 11:40 am, Mon, 30 January 23