ಲೇಡಿಸ್ ಹಾಸ್ಟೆಲ್ಗೆ ನುಗ್ಗಿ ಹುಡುಗಿಯರ ಬಟ್ಟೆ ಬಿಚ್ಚಿಸಿ ಡ್ಯಾನ್ಸ್ ಮಾಡಿಸಿದ ಪೊಲೀಸರು, ತನಿಖೆಗೆ ಆದೇಶ
ಈ ಘಟನೆಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಜನರನ್ನು ರಕ್ಷಣೆ ಮಾಡಬೇಕಿರುವ ಪೊಲೀಸರೇ ಈ ರೀತಿ ಮಾಡಿದರೆ ಹೇಗೆ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದಾರೆ.
ಹೆಣ್ಣುಮಕ್ಕಳಿಗೆ ತೊಂದರೆ ಉಂಟಾದರೆ ಪೊಲೀಸರು ಅವರನ್ನು ರಕ್ಷಿಸುವ ಕಾರ್ಯ ಮಾಡಬೇಕು. ಆದರೆ, ಮಹಾರಾಷ್ಟ್ರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಕೆಲಸವಾಗಿದೆ. ರಕ್ಷಣೆ ಮಾಡಬೇಕಿದ್ದ ಪೊಲೀಸರೇ ಸರ್ಕಾರ ನಡೆಸುತ್ತಿರುವ ಲೇಡಿಸ್ ಹಾಸ್ಟೇಲ್ಗೆ ನುಗ್ಗಿ, ಹೆಣ್ಣು ಮಕ್ಕಳ ಬಟ್ಟೆ ಬಿಚ್ಚಿಸಿ ಡ್ಯಾನ್ಸ್ ಮಾಡಿಸಿದ್ದಾರೆ. ಈ ನಾಚಿಕೆಗೇಡಿನ ಕೃತ್ಯಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಜಲ್ಗಾಂವ್ ನಗರದಲ್ಲಿ ಲೇಡಿಸ್ ಹಾಸ್ಟೆಲ್ ಒಂದಿದೆ. ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನಡೆಸುತ್ತಿದ್ದಾರೆ. ರಾತ್ರಿ ವೇಳೆ ಪೊಲೀಸರು ಹಾಗೂ ಕೆಲ ವ್ಯಕ್ತಿಗಳು ಹಾಸ್ಟೆಲ್ ಒಳಗೆ ನುಗ್ಗಿದ್ದಾರೆ. ಎದುರು ಸಿಕ್ಕ ಕೆಲ ಹುಡುಗಿಯರ ಬಟ್ಟೆ ಬಿಚ್ಚಿಸಿದ್ದಾರೆ. ನಂತರ ಅವರ ಬಳಿ ಡ್ಯಾನ್ಸ್ ಮಾಡಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಕೆಳಮನೆಯಲ್ಲಿ ಚಿಖ್ಲಿ ಕ್ಷೇತ್ರದ ಶಾಸಕಿ ಶ್ವೇತಾ ಮಹಾಲೆ ಈ ವಿಚಾರದ ಬಗ್ಗೆ ಆಕ್ಷೇಪ ಹೊರ ಹಾಕಿದ್ದಾರೆ. ಸ್ಥಳೀಯ ಎನ್ಜಿಒಗಳು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
ಪೊಲೀಸರು ಸಹ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ರಾಜ್ಯಕ್ಕೆ ಅವಮಾನ ತಂದಿದೆ. ಮಹಿಳೆಯರಿಗೆ ಭದ್ರತೆ ಒದಗಿಸುವ ಜವಾಬ್ದಾರಿಯುಳ್ಳವರು ಕಿರುಕುಳ ಕೊಡುವವರಾಗಿ ಬದಲಾಗುತ್ತಿದ್ದಾರೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಶ್ವೇತಾ ಮಹಾಲೆ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಲು ಗೃಹ ಸಚಿವ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ. ಘಟನೆ ತನಿಖೆ ನಡೆಸಲು ರಾಜ್ಯವು 4 ಸದಸ್ಯರ ಸಮಿತಿಯನ್ನು ರಚಿಸಿ ಎರಡು ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ದೇಶ್ಮುಖ್ ಹೇಳಿದ್ದಾರೆ.
ಈ ಘಟನೆಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಜನರನ್ನು ರಕ್ಷಣೆ ಮಾಡಬೇಕಿರುವ ಪೊಲೀಸರೇ ಈ ರೀತಿ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.
ಇದನ್ನೂ ಓದಿ: ಪಾರದರ್ಶಕ ಬಟ್ಟೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಶ್ರೀದೇವಿ ಮಗಳು ಖುಷಿ ಕಪೂರ್ ಟ್ರೋಲ್