ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ!

ತನ್ನ ಸ್ವಾರ್ಥಕ್ಕಾಗಿ ತಾನು ಜನ್ಮ ಕೊಟ್ಟ ಪುಟ್ಟ ಮಗಳನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವ್ಯಕ್ತಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದಿದ್ದಾನೆ. ಈ ಕೊಲೆಗೂ ಪಂಚಾಯತ್ ಚುನಾವಣೆಗೂ ಏನು ಸಂಬಂಧ? ಎಂದು ನಿಮಗೆ ಆಶ್ಚರ್ಯವಾಗಬಹುದು. ಈ ಕಾರಣ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ.

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ!
Child Death

Updated on: Feb 03, 2026 | 7:17 PM

ಮುಂಬೈ, ಫೆಬ್ರವರಿ 3: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪಾಂಡುರಂಗ ಕೊಂಡ್ಮಂಗಲೆ ಎಂಬ ವ್ಯಕ್ತಿಗೆ ಮೂವರು ಮಕ್ಕಳು. ಆತನಿಗೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಸೆಯಾಗಿತ್ತು. ಆದರೆ, ಈ ಚುನಾವಣೆಗೂ ಮೊದಲೇ ಆತನ 6 ವರ್ಷದ ಮಗಳು ಕೊಲೆಯಾಗಿದ್ದಳು. ಆ ಮಗುವಿನ ಸಾವಿನ ಕಾರಣ ಹುಡುಕುತ್ತಾ ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆ ಮಗುವಿನ ಹಂತ ಯಾರಿರಬಹುದು ಎಂಬ ಕುತೂಹಲ ಊರಿನವರಿಗೂ ಇತ್ತು. ಆದರೆ, ಆ ಮಗುವಿನ ಅಪ್ಪನೇ ಕೊಲೆಗಾರ (Killer) ಎಂದು ತಿಳಿದು ಪೊಲೀಸರು, ಊರಿನವರಿಗೆ ಮಾತ್ರವಲ್ಲ ಆತನ ಮನೆಯವರಿಗೂ ಶಾಕ್ ಆಗಿತ್ತು.

ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಆ ವ್ಯಕ್ತಿಗೆ 2 ಅಥವಾ 2ಕ್ಕಿಂತ ಕಡಿಮೆ ಮಕ್ಕಳಿರಬೇಕು ಎಂದು ನಿಯಮವಿತ್ತು. ಆದರೆ, ಪಾಂಡುರಂಗನಿಗೆ ಮೂವರು ಮಕ್ಕಳಿದ್ದರು. ಹೀಗಾಗಿ, ತನ್ನ ಮಕ್ಕಳ ಕಾರಣದಿಂದ ತಾನು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತನಾಗುವುದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ, ಕೊನೆಯ ಮಗಳಾದ 6 ವರ್ಷದ ಪ್ರಾಚಿಯನ್ನು ಕೊಂದುಬಿಟ್ಟರೆ ತನಗೆ ಇಬ್ಬರೇ ಮಕ್ಕಳು ಉಳಿಯುತ್ತಾರೆ. ಆಗ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ತಾನು ಕೂಡ ಅರ್ಹನಾಗುತ್ತೇನೆ ಎಂದು ಯೋಚಿಸಿದ ಆತ ಕೊಲೆಯ ಪ್ಲಾನ್ ಮಾಡಿದ್ದ.

ಇದನ್ನೂ ಓದಿ: ಒಂದೇ ಕೋಣೆಯಲ್ಲಿ ಸಿಕ್ತು ಮಹಿಳೆ ಮತ್ತು ಕೆಲಸದವನ ಶವ! ವಿದೇಶದಿಂದ ಮರಳಿದ ಪತಿಗೆ ಕಾದಿತ್ತು ಶಾಕ್

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲ್ಲೂಕಿನ ಕೆರೂರ್ ಗ್ರಾಮದ ನಿವಾಸಿ 28 ವರ್ಷದ ಪಾಂಡುರಂಗ ಕೊಂಡ್ಮಂಗಲೆ ತನ್ನ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ. ನಿಜಾಮಾಬಾದ್ ಪೊಲೀಸರು ಸೋಮವಾರ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿರುವುದಾಗಿ ಘೋಷಿಸಿದ್ದಾರೆ.

ಹಲವು ದಿನಗಳಾದರೂ ನಾಪತ್ತೆಯಾಗಿದ್ದ ಪ್ರಾಚಿ ಪತ್ತೆಯಾಗಿರಲಿಲ್ಲ. ಹೀಗಾಗಿ, ಪೊಲೀಸರು ಆಕೆಯ ತಂದೆಯನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು. ಆಗ ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ತನಿಖಾಧಿಕಾರಿ ವಿಚಾರಣೆ ನಡೆಸಿದಾಗ, ತಾನು ಮಗುವನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!

ತನ್ನ ಗ್ರಾಮದಲ್ಲಿ ಕ್ಷೌರಿಕನ ಅಂಗಡಿ ನಡೆಸುತ್ತಿರುವ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದ. ಅವನಿಗೆ 3 ವರ್ಷದ ಗಂಡು ಮಗು ಮತ್ತು 6 ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 2 ಮಕ್ಕಳ ಮಾನದಂಡವಿತ್ತು. ಹೀಗಾಗಿ ಅವನು ಸ್ಪರ್ಧಿಸಲು ಅನರ್ಹನಾಗಿದ್ದನು.

ಹೀಗಾಗಿ, ಅವನು ತನ್ನ ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದ. ಆಗ ಆತ ಅವನ ಅವಳಿ ಮಕ್ಕಳಲ್ಲಿ ಒಬ್ಬಳನ್ನು ಕೊಂದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಲಹೆ ನೀಡಿದ್ದ. ಇದಕ್ಕೆ ಆತ ಮೊದಲು ಒಪ್ಪಿರಲಿಲ್ಲ. ಸಾಯಿಸುವ ಬದಲು ಒಂದು ಮಗುವನ್ನು ಯಾರಿಗಾದರೂ ದತ್ತು ನೀಡಿದರಾಯಿತು ಎಂದು ನಿರ್ಧರಿಸಿದ್ದ. ಆದರೆ, ದತ್ತು ನೀಡಿದರೂ ಕೂಡ ಆ ಮಗುವಿನ ಜನನ ಪ್ರಮಾಣಪತ್ರದಲ್ಲಿ ಆಕೆ ಆತನ ಮಗುವೇ ಎಂದು ರಿಜಿಸ್ಟರ್ ಆಗಿರುತ್ತಿತ್ತು.

ಹೀಗಾಗಿ, ಕೊನೆಗೆ ಆತ ತನ್ನ ಗೆಳೆಯನ ಸಲಹೆಯಂತೆ ಮಗುವನ್ನು ಕೊಲ್ಲುವ ನಿರ್ಧಾರ ಮಾಡಿದ್ದ. ಮಗುವನ್ನು ಕೊಂದು ಅದನ್ನು ಅಪಘಾತದಂತೆ ಕಾಣುವಂತೆ ಮಾಡಲು ಸಂಚು ರೂಪಿಸಿದ್ದ. ನಿಜಾಮಾಬಾದ್ ಜಿಲ್ಲೆ ತನ್ನ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವುದರಿಂದ ಪಾಂಡುರಂಗ ಪ್ರಾಚಿಯನ್ನು ಬೈಕ್​ನಲ್ಲಿ ನಿಜಾಮ್ ಸಾಗರ್ ಕಾಲುವೆಗೆ ಕರೆದೊಯ್ದ. ಅಲ್ಲಿ ಅವನು ಅವಳನ್ನು ಕಾಲುವೆಗೆ ತಳ್ಳಿ ಓಡಿಹೋದ.

ಆ ವೇಳೆ ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಗ್ರಾಮಸ್ಥರು ನೀರಿಗೆ ಏನೋ ಬೀಳುವ ಶಬ್ದ ಕೇಳಿ ಅಲ್ಲಿಗೆ ಬಂದು ನೋಡಿದಾಗ ಆ ಬಾಲಕಿಯ ಶವ ಕಾಲುವೆಯಲ್ಲಿ ತೇಲುತ್ತಿರುವುದನ್ನು ಕಂಡರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತನಿಖೆ ಆರಂಭಿಸಿದರು. ಆ ಬಾಲಕಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಮಹಾರಾಷ್ಟ್ರ ಗ್ರಾಮದ ಯಾರೋ ಒಬ್ಬರು ಪ್ರಾಚಿಯ ಫೋಟೋವನ್ನು ನೋಡಿದಾಗ ಆಕೆಯನ್ನು ಗುರುತಿಸಿದರು. ತಕ್ಷಣ ಪೊಲೀಸ್ ತಂಡ ಗ್ರಾಮಕ್ಕೆ ತಲುಪಿ ತನಿಖೆಯನ್ನು ಪ್ರಾರಂಭಿಸಿತು. ಇದರಿಂದ ಪಾಂಡುರಂಗ ಸಿಕ್ಕಿಬಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us