ನವದೆಹಲಿ: ರಾಷ್ಟ್ರಪಿತ ಗಾಂಧೀಜಿಯ ಸಬರಮತಿ ಆಶ್ರಮದ (Sabarmati Ashram) ವಿನ್ಯಾಸವನ್ನು ಬದಲಾಯಿಸುವ ರೀತಿಯಲ್ಲಿ ಪುನರಾಭಿವೃದ್ಧಿ ಮಾಡುವ ಗುಜರಾತ್ ಸರ್ಕಾರದ (Gujarat Government) ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ (Tushar Gandhi) ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಏಪ್ರಿಲ್ 1ರಂದು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ರಾಷ್ಟ್ರಪಿತ ಗಾಂಧೀಜಿಯವರ (Mahatma Gandhiji) ಆಶ್ರಮದ ಮತ್ತು ಅದರ ಪ್ರಾಚೀನ ಸರಳತೆಯನ್ನು ಭ್ರಷ್ಟಗೊಳಿಸಲಾಗುತ್ತಿದೆ ಎಂದು ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
2021ರ ನ. 25ರಂದು ಸಬರಮತಿ ಆಶ್ರಮದ ಮರುಅಭಿವೃದ್ಧಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುಜರಾತ್ ಹೈಕೋರ್ಟ್ ವಜಾಗೊಳಿಸಿದ ನಂತರ ತುಷಾರ್ ಗಾಂಧಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತುರ್ತು ವಿಚಾರಣೆಯನ್ನು ಕೋರಿ ತುಷಾರ್ ಗಾಂಧಿ ಪರ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಪ್ರಸ್ತಾಪಿಸಿದ ಈ ವಿಷಯವನ್ನು ಏಪ್ರಿಲ್ 1ರಂದು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ರಮಣ ಭರವಸೆ ನೀಡಿದರು.
2019ರ ಗುಜರಾತ್ ಸರ್ಕಾರದ ಆದೇಶವು ಸಬರಮತಿ ಆಶ್ರಮವನ್ನು “ವಿಶ್ವ ದರ್ಜೆಯ ವಸ್ತುಸಂಗ್ರಹಾಲಯ” ಮತ್ತು “ಪ್ರವಾಸಿ ತಾಣ”ವನ್ನಾಗಿ ಮಾಡಲು ಮರುವಿನ್ಯಾಸಗೊಳಿಸುವ ಮತ್ತು ಮರುಅಭಿವೃದ್ಧಿ ಮಾಡುವ ಉದ್ದೇಶವನ್ನು ಪ್ರಕಟಿಸಿದೆ ಎಂದು ತುಷಾರ್ ಗಾಂಧಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
“ಈ ಯೋಜನೆಯು ಸಬರಮತಿ ಆಶ್ರಮದ ಭೌತಿಕ ರಚನೆಯನ್ನು ಬದಲಾಯಿಸುತ್ತದೆ ಮತ್ತು ಗಾಂಧೀಜಿಯ ಸಿದ್ಧಾಂತವನ್ನು ಒಳಗೊಂಡಿರುವ ಅದರ ಪ್ರಾಚೀನ ಸರಳತೆಯನ್ನು ಭ್ರಷ್ಟಗೊಳಿಸುತ್ತದೆ. ಆಶ್ರಮವು ಇಂದು ಸಾಕಾರಗೊಳಿಸುತ್ತಿರುವ ಗಾಂಧಿ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ತುಷಾರ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಹೌದು, ನಾವು ಗಾಂಧಿ-ನೆಹರೂ ಕುಟುಂಬದ ಗುಲಾಮರೇ; ವಿಧಾನಸಭೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡ ಕಾಂಗ್ರೆಸ್ ಶಾಸಕ
75 years of India’s Independence: ಆತ್ಮನಿರ್ಭರ ಭಾರತದ ಮೂಲಕ ಗಾಂಧೀಜಿಯವರ ಕನಸು ನನಸಾಗಿಸೋಣ: ಪ್ರಧಾನಿ ಕರೆ
Published On - 3:00 pm, Fri, 25 March 22