Assam Ragging Case: ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ರ‍್ಯಾಗಿಂಗ್; ಪ್ರಮುಖ ಆರೋಪಿ ಬಂಧನ

| Updated By: ಸುಷ್ಮಾ ಚಕ್ರೆ

Updated on: Dec 06, 2022 | 8:31 AM

ನವೆಂಬರ್ 27ರಿಂದ ನಾಪತ್ತೆಯಾಗಿದ್ದ ರಾಹುಲ್ ಚೆಟ್ರಿ ಸೋಮವಾರ ಬೆಳಿಗ್ಗೆ ಅಸ್ಸಾಂ ಪೊಲೀಸರ ಮುಂದೆ ಶರಣಾಗಿದ್ದ. ಅದಾದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Assam Ragging Case: ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ರ‍್ಯಾಗಿಂಗ್; ಪ್ರಮುಖ ಆರೋಪಿ ಬಂಧನ
ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯ
Follow us on

ದಿಬ್ರುಗಢ: ಅಸ್ಸಾಂನ ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ (Dibrugarh University) ನಡೆದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಹುಲ್ ಚೆಟ್ರಿಯನ್ನು (Rahul Chetry) ಪೊಲೀಸರ ವಶಕ್ಕೆ ಪಡೆಯಲಾಗಿದೆ. ದಿಬ್ರುಗಢ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್​ (Ragging) ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಆನಂದ್ ಶರ್ಮಾಗೆ (Anand Sharma) ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿದ್ದು, ರ‍್ಯಾಗಿಂಗ್ ವೇಳೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಯೂನಿವರ್ಸಿಟಿಯ ಹಾಸ್ಟೆಲ್​ನ 2ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗಳಾಗಿತ್ತು. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಆನಂದ್ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನ. 27ರಂದು ದಿಬ್ರುಗಢ ವಿವಿ ಹಾಸ್ಟೆಲ್​ನಲ್ಲಿ ಈ ಘಟನೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಚೆಟ್ರಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 27ರಿಂದ ನಾಪತ್ತೆಯಾಗಿದ್ದ ರಾಹುಲ್ ಚೆಟ್ರಿ ಸೋಮವಾರ ಬೆಳಿಗ್ಗೆ ಅಸ್ಸಾಂ ಪೊಲೀಸರ ಮುಂದೆ ಶರಣಾಗಿದ್ದ. ಅದಾದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Student Ragging: ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್  ತಡೆಯಲಾಗದೇ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಜಿಗಿದ ಜೂನಿಯರ್ ವಿದ್ಯಾರ್ಥಿ

“ದಿಬ್ರುಗಢ ವಿಶ್ವವಿದ್ಯಾಲಯದ ರ‍್ಯಾಗಿಂಗ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 7 ಜನರನ್ನು ಬಂಧಿಸಿದ್ದಾರೆ” ಎಂದು ದಿಬ್ರುಗಢ ಜಿಲ್ಲೆಯ ಎಸ್ಪಿ ತಿಳಿಸಿದ್ದಾರೆ.ಈ ಹಿಂದೆ, ದಿಬ್ರುಗಢ ವಿಶ್ವವಿದ್ಯಾಲಯದ ಪ್ರಾಧಿಕಾರವು ವಿಶ್ವವಿದ್ಯಾಲಯದ ಹಾಸ್ಟೆಲ್‌ನ ಮೂವರು ವಾರ್ಡನ್‌ಗಳನ್ನು ಅಮಾನತುಗೊಳಿಸಿತ್ತು. ಸರ್ಕಾರಿ ಸ್ವಾಮ್ಯದ ದಿಬ್ರುಗಢ ವಿಶ್ವವಿದ್ಯಾಲಯದ ಎಂಕಾಂ ವಿದ್ಯಾರ್ಥಿ ಆನಂದ್ ಶರ್ಮಾ ನವೆಂಬರ್ 27ರಂದು ರ‍್ಯಾಗಿಂಗ್​​ನ ಕಿರುಕುಳದಿಂದ ತಪ್ಪಿಸಿಕೊಳ್ಳಲು ತಮ್ಮ ಪಿಎನ್‌ಜಿಬಿ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದಿದ್ದ. ತಕ್ಷಣ ಶರ್ಮಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಈ ಘಟನೆಯಲ್ಲಿ ಭಾಗಿಯಾಗಿರುವ ಐವರ ವಿರುದ್ಧ ಆನಂದ್ ಶರ್ಮಾ ಅವರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ