ಮಲಯಾಳಂ ನಟ ಅನಿಲ್ ನೆದುಮಂಗಡ್ ವಿಧಿವಶ; ಚಿತ್ರರಂಗದ ಗಣ್ಯರಿಂದ ಸಂತಾಪ
ಇತ್ತೀಚೆಗೆ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅಯ್ಯಪ್ಪನುಂ ಕೋಶಿಯುಂ ಚಿತ್ರದ ಪೊಲೀಸ್ ಪಾತ್ರಧಾರಿ ಅನಿಲ್ ನೆಡುಮಾಂಗಡ್ (48) ನಿನ್ನೆ ನಿಧನ ಹೊಂದಿದ್ದಾರೆ.
ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ, ಇತ್ತೀಚೆಗೆ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅಯ್ಯಪ್ಪನುಂ ಕೋಶಿಯುಂ ಚಿತ್ರದ ಪೊಲೀಸ್ ಪಾತ್ರಧಾರಿ ಅನಿಲ್ ನೆದುಮಂಗಡ್ (48) ನಿನ್ನೆ ನಿಧನ ಹೊಂದಿದ್ದಾರೆ. ಮಾಲಂಕಾರ ಡ್ಯಾಮ್ ಪ್ರದೇಶದಲ್ಲಿ ಅನಿಲ್ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ. ನಿನ್ನೆ ಸಂಜೆ ದುರ್ಘಟನೆ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅನಿಲ್ ನೆದುಮಂಗಡ್, ತೋಡುಪುಳದಲ್ಲಿ ತಮ್ಮ ಹೊಸ ಚಿತ್ರ ‘ಪೀಸ್’ನ ಶೂಟಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಗೆಳೆಯರೊಂದಿಗೆ ಡ್ಯಾಮ್ ಪ್ರದೇಶಕ್ಕೆ ಸ್ನಾನಕ್ಕೆ ತೆರಳಿದ್ದರು. ಆ ಸಮಯದಲ್ಲಿ ಅವಘಡ ಸಂಭವಿಸಿದೆ.
ನಟನ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅನಿಲ್ ನೆದುಮಂಗಡ್ ಉತ್ತಮ ಪಾತ್ರಗಳನ್ನು ನಿರ್ವಹಿಸುವ ಮೂಲಕ ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ತಮ್ಮ ನಟನಾ ಸಾಮರ್ಥ್ಯದ ಮೂಲಕ ಪ್ರೇಕ್ಷಕರ ಮನದಲ್ಲಿ ಅಳಿಸಲಾಗದ ಸ್ಥಾನ ಪಡೆದುಕೊಂಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅನಿಲ್, ಮಲಯಾಳಂ ಟಿವಿ ವಾಹಿನಿಗಳಲ್ಲಿ ಆ್ಯಂಕರ್ ಆಗುವ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಬಳಿಕ, ಪವಡ, ಕಮ್ಮಟ್ಟಿ ಪಾಡಮ್, ಕಿಸ್ಮತ್, ಪೊರಿಂಜು ಮರಿಯಮ್ ಜೋಸ್, ಅಯ್ಯಪ್ಪನುಂ ಕೋಶಿಯುಂ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ, ಅಯ್ಯಪ್ಪನುಂ ಕೋಶಿಯುಂ ನಿರ್ದೇಶಕ ಕೆ.ಆರ್. ಸಚ್ಚಿದಾನಂದನ್ (ಸಚ್ಚಿ) ತೀರಿಕೊಂಡಿದ್ದಾಗ, ಅನಿಲ್ ಸಚ್ಚಿ ಬಗ್ಗೆ ಫೇಸ್ಬುಕ್ನಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದರು. ನಿನ್ನೆ ಸಚ್ಚಿ ಅವರ ಹುಟ್ಟುಹಬ್ಬವಾಗಿತ್ತು. ಇದೇ ಸಂದರ್ಭದಲ್ಲಿ ಅನಿಲ್ ತೀರಿಕೊಂಡಿರುವುದು ಮಲಯಾಳಂ ಚಿತ್ರರಂಗದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ.
ಅನಿಲ್ ನೆದುಮಂಗಡ್ಗೆ ಪೃಥ್ವಿರಾಜ್ ಸುಕುಮಾರನ್, ಬಿಜು ಮೆನನ್, ದುಲ್ಖರ್ ಸಲ್ಮಾನ್ ಸಹಿತ ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Nothing. I have nothing to say. Hope you’re at peace Anil etta. ? pic.twitter.com/B6hOHGffkA
— Prithviraj Sukumaran (@PrithviOfficial) December 25, 2020
‘Jallikattu’ Enters Oscar Awards ಮಲಯಾಳಂನ ‘ಜಲ್ಲಿಕಟ್ಟು’ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ
Published On - 5:16 pm, Sat, 26 December 20