ರಾಜ್ಯಸಭೆಯಲ್ಲಿ ಬಿರುಗಾಳಿ ಎಬ್ಬಿಸಿದ ಮಲ್ಲಿಕಾರ್ಜುನ ಖರ್ಗೆ; ಅಗ್ನಿವೀರ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯ

|

Updated on: Jul 01, 2024 | 4:20 PM

ಎನ್​ಡಿಎ ಸರ್ಕಾರ ಪ್ರತಿಪಕ್ಷಗಳನ್ನು ಬದಿಗೊತ್ತಿ ಸಂವಿಧಾನವನ್ನೇ ಚುನಾವಣಾ ವಿಷಯವನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಅಧಿವೇಶನದಲ್ಲಿ ಆರೋಪಿಸಿದ್ದಾರೆ. ಹಾಗೇ, ಅಗ್ನಿವೀರ್ ಯೋಜನೆಯನ್ನು ರದ್ದುಪಡಿಸಲು ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಬಿರುಗಾಳಿ ಎಬ್ಬಿಸಿದ ಮಲ್ಲಿಕಾರ್ಜುನ ಖರ್ಗೆ; ಅಗ್ನಿವೀರ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯ
ಮಲ್ಲಿಕಾರ್ಜುನ ಖರ್ಗೆ
Follow us on

ನವದೆಹಲಿ: ಅಗ್ನಿವೀರ್ ಯೋಜನೆಯನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು (ಸೋಮವಾರ) ರಾಜ್ಯಸಭಾ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ಕೇವಲ ಘೋಷಣೆಗಳನ್ನು ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಬಿಜೆಪಿ ಅಧಿಕಾರಕ್ಕೇರಿದೆ ಎಂದು ಆಡಳಿತ ಪಕ್ಷದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

‘ಅಗ್ನಿವೀರ್‌ನಂತಹ ಯೋಜಿತವಲ್ಲದ ಮತ್ತು ‘ತುಘಲಕಿ’ ಯೋಜನೆಯನ್ನು ಜಾರಿಗೆ ತರುವ ಮೂಲಕ ಯುವಕರ ನೈತಿಕ ಸ್ಥೈರ್ಯವನ್ನು ಛಿದ್ರಗೊಳಿಸಲಾಗಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಮಲ್ಲಿಕಾರ್ಜುನ ಖರ್ಗೆ, “ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ; ಉದ್ಧವ್ ಠಾಕ್ರೆಯನ್ನು ಎಂವಿಎ ಸಿಎಂ ಅಭ್ಯರ್ಥಿಯಾಗಿ ಸ್ವೀಕರಿಸಲು ಶರದ್ ಪವಾರ್ ನಕಾರ

2024ರ ಲೋಕಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ಈ ಹೊಸ ನೇಮಕಾತಿ ಯೋಜನೆಯನ್ನು ರದ್ದುಗೊಳಿಸುವುದಾಗಿ ಮತ್ತು 16 ವರ್ಷಗಳ ಸೇವೆಗಾಗಿ ಸೈನಿಕರನ್ನು ನೇಮಿಸಿಕೊಂಡ ಹಳೆಯ ಯೋಜನೆಗೆ ಹಿಂತಿರುಗುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

2024ರ ಲೋಕಸಭೆ ಚುನಾವಣೆಯು ಸಂವಿಧಾನವನ್ನು ಸಮಸ್ಯೆಯಾಗಿಸಿದ ಮೊದಲ ಚುನಾವಣೆಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. “ಸಂವಿಧಾನ ಇದ್ದಾಗ ಮಾತ್ರ ಚುನಾವಣೆ ನಡೆಸಬಹುದು. ಕೆಲವರು ಸಂವಿಧಾನದ ಬಗ್ಗೆ ಮಾತನಾಡುವುದನ್ನು ವಿರೋಧಿಸುತ್ತಾರೆ. ಅದನ್ನು ಚುನಾವಣಾ ವಿಷಯವಾಗಿ ಮಾಡುವುದು ಸರಿಯಲ್ಲ” ಎಂದು ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಕೇವಲ ಘೋಷಣೆಗಳನ್ನು ನೀಡುವುದರಲ್ಲಿ ನಿಪುಣರು. ಕಳೆದ ವರ್ಷದಿಂದ ಮಣಿಪುರ ಹೊತ್ತಿ ಉರಿಯುತ್ತಿದೆ, ಆದರೆ ಪ್ರಧಾನಿ ಆ ರಾಜ್ಯಕ್ಕೆ ಯಾಕೆ ಭೇಟಿ ನೀಡಲಿಲ್ಲ?’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: IAF Recruitment 2024: ವಿವಿಧ ಅಗ್ನಿವೀರ್ವಾಯು ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಅಗ್ನಿವೀರ್ ಎಂದರೆ ಯಾರು?:

ರಕ್ಷಣಾ ಆಧುನೀಕರಣದ ಭಾಗವಾಗಿ ಜೂನ್ 2022ರಲ್ಲಿ ಹೊರತರಲಾದ ಅಗ್ನಿಪಥ್ ಯೋಜನೆಯಡಿ ಯುವಕರನ್ನು 4 ವರ್ಷಗಳವರೆಗೆ ನೇಮಿಸಿಕೊಳ್ಳಲಾಗುತ್ತದೆ. ಅವರನ್ನು ‘ಅಗ್ನಿವೀರ್’ ಎಂದು ಕರೆಯಲಾಗುತ್ತದೆ. 4 ವರ್ಷಗಳ ಸೇವೆಯ ನಂತರ ಶೇ. 25ರಷ್ಟು ಅಗ್ನಿವೀರ್​ಗಳನ್ನು ಉಳಿಸಿಕೊಳ್ಳಲಾಗುತ್ತದೆ, ಉಳಿದವರನ್ನು ಕರ್ತವ್ಯದಿಂದ ತೆಗೆದುಹಾಕಲಾಗುತ್ತದೆ.

ಪ್ರಧಾನಿ ಮೋದಿಯವರು ಚುನಾವಣಾ ಸಮಯದಲ್ಲಿ ತಮ್ಮ ಭಾಷಣದ ಮೂಲಕ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖರ್ಗೆ, ಈ ಹಿಂದೆ ಯಾವ ಪ್ರಧಾನಿಯೂ ಈ ರೀತಿ ಮಾಡಿರಲಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ