Ayodhya Ram Mandir: ನೀವು ಅರ್ಚಕರೇ? ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಿಸಿದ್ದಕ್ಕೆ ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ
ತ್ರಿಪುರಾದಲ್ಲಿ ಬಿಜೆಪಿಯ ‘ಜನ್ ವಿಶ್ವಾಸ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಿದೆ. ಮುಂದಿನ ವರ್ಷ ಜನವರಿ 1ಕ್ಕೆ ಲೋಕರ್ಪಣೆ ಮಾಡಲಿದೆ ಎಂದು ಹೇಳಿದ್ದರು.
ಪಾಣಿಪತ್: ಅಯೋಧ್ಯೆಯಲ್ಲಿ (Ayodhya) 2024ರ ಜನವರಿ 1ರಂದು ರಾಮಮಂದಿರ (Ram Mandir) ಉದ್ಘಾಟನೆಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಇಷ್ಟು ಬೇಗ ಈ ಹೇಳಿಕೆ ನೀಡುವುದರ ಉದ್ದೇಶವೇನು ಎಂದು ಪ್ರಶ್ನಿಸಿರುವ ಅವರು, ಅಮಿತ್ ಶಾ ಅವರು ರಾಮ ಮಂದಿರದ ಅರ್ಚಕ ಅಥವಾ ಮಹಾಂತರಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಭಾಗವಹಿಸಿ ಅವರು ಮಾತನಾಡಿದ್ದಾರೆ.
‘ಪ್ರತಿಯೊಬ್ಬರಿಗೂ ದೇವರಲ್ಲಿ ನಂಬಿಕೆ ಇರುತ್ತದೆ. ಆದರೆ, ನೀವೇಕೆ ಅಂಥ ದೊಡ್ಡ ಘೋಷಣೆ ಮಾಡುತ್ತೀರಿ? ಅದೂ ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ? 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಮ ಮಂದಿರ ಉದ್ಘಾಟನೆಯಾಗಲಿದೆ ಎಂದು ಹೇಳುತ್ತಿದ್ದೀರಿ. ಅಂಥ ಘೋಷಣೆ ಮಾಡಲು ನೀವು ಯಾರು? ರಾಮ ಮಂದಿರದ ಅರ್ಚಕರೇ ಅಥವಾ ಮಹಾಂತರೇ?’ ಎಂದು ಶಾ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.
ಇದನ್ನು ಓದಿ: Ayodhya Ram Mandir: 2024ರ ಜನವರಿ 1ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಅಮಿತ್ ಶಾ ಮಹತ್ವದ ಘೋಷಣೆ
‘ರಾಮ ಮಂದಿರದ ಉದ್ಘಾಟನೆ ಬಗ್ಗೆ ಮಹಾಂತರು ಮತ್ತು ಸಂತರು ಹೇಳಿಕೆ ನೀಡಲಿ. ನೀವೊಬ್ಬ ರಾಜಕಾರಣಿ. ನೀವು ದೇಶವನ್ನು ಭದ್ರವಾಗಿ ನೋಡಿಕೊಳ್ಳಬೇಕಾದವರು. ಕಾನೂನು ಸುವ್ಯವಸ್ಥೆ ಜಾರಿಗೊಳಿಸಬೇಕಾದವರು. ಜನರಿಗೆ ಆಹಾರ ಭದ್ರತೆ ಮತ್ತು ರೈತರು ಬೆಳೆದ ಬೆಳೆಗೆ ಬೆಲೆ ಖಾತರಿ ನೀಡಬೇಕಾದವರು. ಅದು ನಿಮ್ಮ ಕೆಲಸ’ ಎಂದು ಖರ್ಗೆ ಹೇಳಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿಯ ‘ಜನ್ ವಿಶ್ವಾಸ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ, ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಿದೆ. ಮುಂದಿನ ವರ್ಷ ಜನವರಿ 1ಕ್ಕೆ ಲೋಕರ್ಪಣೆ ಮಾಡಲಿದೆ ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರದ ಅರ್ಧದಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಮತ್ತು 2024 ರ ಜನವರಿಯಲ್ಲಿ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ ಭವ್ಯವಾದ ದೇವಾಲಯವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಕ್ಟೋಬರ್‌ನಲ್ಲಿ ತಿಳಿಸಿತ್ತು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ