ಮಮತಾ ಬ್ಯಾನರ್ಜಿ ಪ್ರತಿ ವಿಚಾರದಲ್ಲೂ ಅಹಂಕಾರ ತೋರುತ್ತಾರೆ, ರಾಜಕೀಯ ಮಾಡುತ್ತಾರೆ: ಸುವೇಂದು ಅಧಿಕಾರಿ
ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಅಮಾನಿಸುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಯಾಸ್ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರಿಶೀಲನಾ ಸಭೆಗೆ 30 ನಿಮಿಷ ತಡವಾಗಿ ಬಂದಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ದೀದಿ ಕೂಡ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದಷ್ಟು ಸಮರ್ಥನೆಗಳನ್ನೂ ನೀಡಿದ್ದಾರೆ. ಅಷ್ಟಲ್ಲದೆ, ಕೇಂದ್ರ ಸರ್ಕಾರ ನನ್ನನ್ನು ಅವಮಾನಿಸುತ್ತಿದೆ ಎಂದೂ ಆರೋಪ ಮಾಡಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಬ್ಬರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇವರಿಬ್ಬರೂ ಪ್ರಧಾನಿ ಮೋದಿಯವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳದೆ ಅವರನ್ನು ಅವಮಾನಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿಯವರು ಯಾಸ್ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅವರು ಪಾಲ್ಗೊಳ್ಳಲಿಲ್ಲ. 30 ನಿಮಿಷಗಳ ನಂತರ ಅವರಿದ್ದ ಕೋಣೆಗೆ ಹೋಗಿ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಈ ಹೊತ್ತಲ್ಲಿ ಅವರೊಂದಿಗೆ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಡೋಪಾಧ್ಯಯ ಅವರೂ ಇದ್ದರು. ಅದಾದ ಕೆಲವೇ ಹೊತ್ತಲ್ಲಿ ಆಲಾಪನ್ ಅವರನ್ನು ವಾಪಸ್ ದೆಹಲಿಗೆ ವರ್ಗಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅವರು ಶಿಷ್ಟಾಚಾರವನ್ನು ಮೀರಿದ್ದರಿಂದಲೇ ವರ್ಗಾವಣೆ ಮಾಡಲಾಗಿದೆ. ಆದರೆ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಅಮಾನಿಸುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರು ಪ್ರತಿ ವಿಚಾರದಲ್ಲೂ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ರಾಜಕಾರಣ ಮಾಡಲು ಮುಂದಾಗುತ್ತಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಗರ್ಭಿಣಿಯರಿಗೂ ಕೋವಿಡ್ ಲಸಿಕೆ ನೀಡುವಂತೆ ಆಗ್ರಹಿಸಿ, ಅರೋಗ್ಯ ಸಚಿವರಿಗೆ ಪತ್ರ ಬರೆದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ
Published On - 9:02 pm, Sat, 29 May 21