45 ದಿನಗಳಲ್ಲಿ ಐದು ಬಾರಿ ಹಾವು ಕಚ್ಚಿದರೂ ಪವಾಡವೆಂಬಂತೆ ಬದುಕುಳಿದ ವ್ಯಕ್ತಿ
ವ್ಯಕ್ತಿಗೆ ಒಂದು ಬಾರಿ ಹಾವು ಕಚ್ಚಿದರೇ ಸುಧಾರಿಸಿಕೊಳ್ಳಲು ತಿಂಗಳುಗಳೇ ಬೇಕು ಆದರೆ ಇವರಿಗೆ ಬರೋಬ್ಬರಿ ಐದು ಬಾರಿ ಹಾವು ಕಚ್ಚಿದ್ದರೂ ಪವಾಡವೆಂಬಂತೆ ಬದುಕುಳಿದಿದ್ದಾರೆ. ನಾಲ್ಕು ಬಾರಿ ಹಾವು ಕಚ್ಚಿದ ಬಳಿಕ ಮನೆಯಲ್ಲಿರುವುದು ಬೇಡವೆಂದು ಸಂಬಂಧಿ ಮನೆಗೆ ಹೋದರೆ ಅಲ್ಲೂ ಕೂಡ ಹಾವು ಬಂದು ಕಡಿದಿದೆ.
ವ್ಯಕ್ತಿಯೊಬ್ಬರಿಗೆ 45 ದಿನಗಳಲ್ಲಿ ಐದು ಬಾರಿ ಹಾವು(Snake) ಕಚ್ಚಿದ್ದರೂ ಪವಾಡವೆಂಬಂತೆ ಬದುಕುಳಿದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಫತೇಪುರ್ನಲ್ಲಿ ನಡೆದಿದೆ. ವಿಕಾಸ್ ದುಬೆ ಎಂಬಾತ ಮನೆಯಲ್ಲಿದ್ದರೆ ಹಾವು ಕಚ್ಚುತ್ತೆ ಎಂದು ಚಿಕ್ಕಮ್ಮನ ಮನೆಗೆ ಹೋಗಿದ್ದರೂ ಕೂಡ ಅಲ್ಲಿಗೂ ಹೋಗಿ ಹಾವು ಕಚ್ಚಿತ್ತು. ಜೂನ್ 2ರಂದು ಬೆಳಗ್ಗೆ ಹಾಸಿಗೆಯಿಂದ ಏಳುವ ಸಮಯದಲ್ಲಿ ಮೊದಲನೇ ಬಾರಿಗೆ ಹಾವು ಕಚ್ಚಿತ್ತು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಎರಡು ದಿನಗಳವರೆಗೆ ಅಲ್ಲೇ ಇದ್ದರು, ಬಳಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇದು ಸಾಮಾನ್ಯ ಎಂದು ಜನರು ಭಾವಿಸಿದ್ದರು.
ಇದಾದ ಬಳಿಕ ಜೂನ್ 10ರಂದು ರಾತ್ರಿ ಮತ್ತೆ ಹಾವು ಕಚ್ಚಿತ್ತು, ಅವರ ಕುಟುಂಬದವರು ಮತ್ತೆ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದರು, ಇದಾದ ಬಳಿಕ ಹಾವಿನ ಭಯ ಮನಸ್ಸಿನಲ್ಲಿ ಬೇರೂರಿತ್ತು, ಹಾಗಾಗಿ ಜಾಗ್ರತೆವಹಿಸಿದರು.
ಆದರೂ ಏಳು ದಿನಗಳ ಬಳಿಕ ಜೂನ್ 17ರಂದು ಮನೆಯೊಳಗೆ ಮತ್ತೆ ಹಾವು ಕಚ್ಚಿತ್ತು, ಇದರಿಂದಾಗಿ ಅವರು ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಈ ಘಟನೆಯು ಅವರ ಕುಟುಂಬವನ್ನು ಆತಂಕಕ್ಕೆ ದೂಡಿತ್ತು. ಮತ್ತೊಮ್ಮೆ ದುಬೆಯನ್ನು ಅದೇ ಆಸ್ಪತ್ರೆಗೆ ಕರೆದೊಯ್ದರು ಅಂತಿಮವಾಗಿ ಅವರು ಚೇತರಿಸಿಕೊಂಡರು.
ಮತ್ತಷ್ಟು ಓದಿ:ಹಾವು ಕಡಿತ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ: ಸಾವನ್ನಪ್ಪುವವರ ಸಂಖ್ಯೆ ಏರಿಕೆ
ಮನೆಗೆ ಬಂದ ಬಳಿಕ ನಾಲ್ಕನೇ ಬಾರಿಗೆ ಮತ್ತೆ ಹಾವು ಕಚ್ಚಿತ್ತು, ಮತ್ತೆದೇ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅಚ್ಚರಿಗೊಂಡರು. ಆದರೆ ನಾಲ್ಕನೇ ಬಾರಿ ಹಾವು ಕಚ್ಚಿದ ಬಳಿಕವೂ ಅವರು ಬದುಕುಳಿದಿದ್ದಾರೆ. ಕೆಲವು ದಿನಗಳ ಕಾಲ ಮನೆಯಲ್ಲಿ ಇರುವುದು ಬೇಡವೆಂದು ಅವರನ್ನು ಚಿಕ್ಕಮ್ಮನ ಮನೆಗೆ ಕಳುಹಿಸಲಾಗಿತ್ತು ಆದರೆ ಅಲ್ಲಿಯೂ ಕೂಡ ಅವರಿಗೆ ಹಾವು ಕಚ್ಚಿದೆ.
ವೈದ್ಯರು ಈ ಪ್ರಕರಣವನ್ನು ವಿಚಿತ್ರ ಪ್ರಕರಣವೆಂದು ಕರೆದಿದ್ದಾರೆ. ಅವರಿಗೆ ಕೊನೆಯದಾಗಿ ಆ ಹಳ್ಳಿಯನ್ನೇ ಬಿಟ್ಟು ಹೋಗುವಂತೆ ಸಲಹೆ ನೀಡಲಾಯಿತು. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ