Mann Ki Baat LIVE: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್
Mann Ki Baat in Kannada LIVE Updates ಮೋದಿ ಸರ್ಕಾರದ 7ನೇ ವರ್ಷದ ಶುಭ ಸಂದರ್ಭದಂದು 'ಮನ್ ಕಿ ಬಾತ್' ನ 77 ನೇ ಆವೃತ್ತಿಯ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು 77ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದು 7ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿಯ ಮನ್ ಕೀ ಬಾತ್ ಇನ್ನಷ್ಟು ಕುತೂಹಲ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ನಲ್ಲಿ ಸಾಮಾನ್ಯವಾಗಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ದೇಶದ ಇನ್ನಿತರ ಸಮಸ್ಯೆ, ಒಳ್ಳೆಯ ವಿಚಾರಗಳು, ಹೆಮ್ಮೆ ಪಡುವ ವಿಷಯಗಳ ಪ್ರಸ್ತಾಪ ಮಾಡುತ್ತಾರೆ. ಅಥವಾ ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಕೊನೆಯಲ್ಲಿ 77ನೇ ಮನ್ ಕೀ ಬಾತ್ನಲ್ಲಿ ಮಾತನಾಡಲಿದ್ದಾರೆ. ಅವರು ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂಬ ಬಗ್ಗೆ ನೀವೂ ಸಲಹೆ, ಅಭಿಪ್ರಾಯ ನೀಡಬಹುದು ಎಂದು ತಿಂಗಳ ಪ್ರಾರಂಭದಲ್ಲಿ ಸಾರ್ವಜನಿಕರಿಗೂ ಅವಕಾಶ ನೀಡಲಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಲಾಗಿತ್ತು. ಇಂದು ತಮ್ಮ ಸರ್ಕಾರ ಎದುರಿಸಿದ ಸವಾಲು, ಕೊರೊನಾ, ಲಸಿಕೆ ಸೇರಿದಂತೆ ಕೆಲ ಸಂಗತಿಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇದೆ.
LIVE NEWS & UPDATES
-
ರೈತರಿಂದ ದಾಖಲೆಯ ಉತ್ಪಾದನೆ
ಕೊರೊನಾ ಬಿಕ್ಕಟ್ಟಿನ ಮಧ್ಯೆ ನಮ್ಮ ರೈತರು ಸಾಧನೆ ಮಾಡಿದ್ದಾರೆ. ದಾಖಲೆಯ ಉತ್ಪನ್ನಗಳನ್ನು ಉತ್ಪಾದಿಸಿದ್ದಾರೆ. ಹಾಗೇ ಅವರಿಂದ ದಾಖಲೆಯ ಪ್ರಮಾಣದಲ್ಲಿ ಬೆಳೆಯನ್ನು ಖರೀದಿಸಲಾಗಿದೆ. ಸಾಸಿವೆಗೆ ಅತಿ ಹೆಚ್ಚು ಪ್ರಮಾಣದಲ್ಲಿ ಬೆಂಬಲ ಬೆಲೆ ಪಡೆದಿದ್ದಾರೆ.
-
7 ವರ್ಷಗಳಲ್ಲಿ ಅನೇಕ ಕಠಿಣ ಸವಾಲುಗಳು..
ಕೊರೊನಾ ಒಂದು ಜಾಗತಿಕ ಸಾಂಕ್ರಾಮಿಕ ರೋಗವಾಗಿದ್ದು, ಇದರ ವಿರುದ್ಧ ಹೋರಾಟದಲ್ಲಿ ಭಾರತ ಸೇವೆ ಮತ್ತು ಸಹಯೋಗ ಎಂಬ ಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ. ಕಳೆದ ಏಳು ವರ್ಷಗಳಲ್ಲಿ ನಾವು ಅನೇಕ ಕಠಿಣ ಪರೀಕ್ಷೆಗಳನ್ನು ಎದುರಿಸಿದ್ದೇವೆ. ಪ್ರತಿ ಬಾರಿಯೂ ಇನ್ನಷ್ಟು ಗಟ್ಟಿಯಾಗಿ ಹೊರಬರುತ್ತಿದ್ದೇವೆ. ಖಂಡಿತ ಭಾರತ ವಿಜಯಶಾಲಿಯಾಗುತ್ತದೆ.
-
21 ತಿಂಗಳಲ್ಲಿ ನಾಲ್ಕೂವರೆ ಕೋಟಿ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ
ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಕೇವಲ ಮೂರುವರೆ ಕೋಟಿ ಗ್ರಾಮೀಣ ಮನೆಗಳಿಗೆ ಮಾತ್ರ ನೀರಿನ ಸಂಪರ್ಕವಿತ್ತು. ಆದರೆ ಕಳೆದ 21 ತಿಂಗಳಲ್ಲಿ ನಾಲ್ಕೂವರೆ ಕೋಟಿ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ ನೀಡಲಾಗಿದೆ. ಆದರೆ ಇದರಲ್ಲೂ 15ತಿಂಗಳು ಕೊರೊನಾ ಅವಧಿಯೇ ಆಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಪಡೆದ ಅನೇಕರು ಗೃಹಪ್ರವೇಶಕ್ಕೆ ಪ್ರೀತಿಯಿಂದ ನನಗೆ ಆಹ್ವಾನ ನೀಡುತ್ತಿದ್ದಾರೆ. ಹಾಗೇ ಬುಡಕಟ್ಟು ಪ್ರದೇಶಗಳಿಗೆ ರಸ್ತೆ ನಿರ್ಮಾಣ ಮಾಡಿಕೊಡಲಾಗಿದೆ. ಅವರೂ ವಿಶ್ವದೊಂದಿಗೆ ಸಂಪರ್ಕ ಹೊಂದಲು ಅನುವು ಮಾಡಿಕೊಡಲಾಗಿದೆ.
ಸೈನಿಕರು, ವಾರಿಯರ್ಸ್ಗೆ ಇಡೀ ರಾಷ್ಟ್ರದ ನಮನ
ಕೊರೊನಾ, ರಾಷ್ಟ್ರೀಯ ವಿಪತ್ತು ಎಲ್ಲ ಒಟ್ಟೊಟ್ಟಿಗೆ ಬಂದಾಗ ಸೈನಿಕರು, ವಾರಿಯರ್ಸ್, ಸಾಮಾನ್ಯ ಜನರೆಲ್ಲ ಸೇರಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಲಕ್ಷಾಂತರ ಮಂದಿ ಒಟ್ಟಾಗಿ ಹಗಲು-ರಾತ್ರಿ ಶ್ರಮಿಸಿದ್ದಾರೆ. ಅವರ ಶ್ರಮಕ್ಕೆ ಇಡೀ ರಾಷ್ಟ್ರ ನಮಸ್ಕರಿಸುತ್ತದೆ. ಆಕ್ಸಿಜನ್ನ್ನು ದೂರದ, ದುರ್ಗಮ ಪ್ರದೇಶಗಳಿಗೆಲ್ಲ ಪೂರೈಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಇದನ್ನು ಯಶಸ್ವಿಗೊಳಿಸಲು ಶ್ರಮಿಸಿದ ಪ್ರತಿಯೊಬ್ಬರೂ ಹೋರಾಟಗಾರರೇ ಆಗಿದ್ದಾರೆ.
ವಾಯುಸೇನಾ ಗ್ರೂಪ್ ಕ್ಯಾಪ್ಟನ್ ಜತೆ ನರೇಂದ್ರ ಮೋದಿ ಮಾತು
ಆಕ್ಸಿಜನ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಾಯುಸೇನಾ ಗ್ರೂಪ್ ಕ್ಯಾಪ್ಟನ್ ಪಟ್ನಾಯಕ್ ಹಾಗೂ ಅವರ ಪುತ್ರಿ ಅದಿತಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಕುಟುಂಬದವರನ್ನೆಲ್ಲ ಬಿಟ್ಟು ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿರುವ ಪಟ್ನಾಯಕ್ ಅವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ನೀನು ನಿನ್ನ ಅಪ್ಪನನ್ನು ಮಿಸ್ ಮಾಡಿಕೊಳ್ತೀಯಾ ಎಂದು ಅದಿತಿ ಬಳಿ ಪ್ರಶ್ನಿಸಿದರು.
ಕೊರೊನಾ ವಿರುದ್ಧ ಭೂಮಿ, ನೀರು ಮತ್ತು ವಾಯು ಮಾರ್ಗದಲ್ಲಿ ಹೋರಾಟ
ಆಕ್ಸಿಜನ್ ಕೊರತೆ ನೀಗಿಸಲು ವಾಯುಪಡೆ, ನೌಕಾಪಡೆಗಳು ತುಂಬ ಶ್ರಮವಹಿಸುತ್ತಿವೆ. ಖಾಲಿ ಟ್ಯಾಂಕರ್ಗಳನ್ನು ಆಮ್ಲಜನಕ ಉತ್ಪಾದನಾ ಘಟಕಗಳಿಗೆ ಸಾಗಿಸಲಾಗುತ್ತಿದೆ. ಮತ್ತೊಂದೆಡೆ ಆಮ್ಲಜನಕ ಸ್ಥಾವರಗಳ ನಿರ್ಮಾಣ ಕೆಲಸವೂ ಪೂರ್ಣಗೊಳ್ಳುತ್ತಿದೆ. ಕೊರೊನಾ, ಆಕ್ಸಿಜನ್ ಕೊರತೆ ಒಂದು ಯುದ್ಧದಂತೆ ಆಗಿದೆ. ಈ ಸವಾಲನ್ನು ಭೂಮಿ, ನೀರು ಮತ್ತು ವಾಯು ಮೂರು ಮಾರ್ಗಗಳ ಮೂಲಕ ಎದುರಿಸಲಾಗುತ್ತಿದೆ.
ಆಕ್ಸಿಜನ್ ಎಕ್ಸ್ಪ್ರೆಸ್ ಲೋಕೋಮೋಟಿವ್ ಪೈಲಟ್ ಶಿರೀಷಾ ಜತೆ ಪಿಎಂ ಮೋದಿ ಮಾತು
ಆಕ್ಸಿಜನ್ ಎಕ್ಸ್ಪ್ರೆಸ್ ರೈಲಿನ ಲೋಕೋ ಪೈಲೆಟ್ ಶಿರೀಷಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ನಲ್ಲಿ ಫೋನ್ ಮೂಲಕ ಮಾತನಾಡಿದರು. ದೇಶದ ಕಷ್ಟದ ಹೊತ್ತಲ್ಲಿ ಸೇವೆ ಸಲ್ಲಿಸಿದ ನಿಮ್ಮಂತಹ ಎಲ್ಲ ಸಹೋದರಿಯರಿಗೂ ನಿಮ್ಮನ್ನು ಹೆತ್ತವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದೂ ಹೇಳಿದರು. ಶಿರೀಷಾ ಜೀ, ನೀವು ಕೊರೊನಾ ಕಷ್ಟದ ಸಮಯದಲ್ಲಿ ಮುಂದೆ ಬಂದು ಉತ್ತಮವಾದ ಕೆಲಸ ಮಾಡಿದ್ದೀರಿ. ಮಹಿಳಾ ಶಕ್ತಿಗೆ ನೀವು ಉದಾಹರಣೆ ಎಂದು ನರೇಂದ್ರ ಮೋದಿಯವರು ಶಿರೀಷಾ ಅವರನ್ನು ಶ್ಲಾಘಿಸಿದರು.
ಆಮ್ಲಜನಕ ಸಮಸ್ಯೆ ನೀಗಿಸಲು ಸೇನಾ ಪಡೆಗಳಿಂದ ಸಹಕಾರ
ದೇಶದಲ್ಲಿ ಉಲ್ಬಣಗೊಂಡ ಕೊರೊನಾ ಸಂದರ್ಭದಲ್ಲಿ ಕಾಡಿದ ಆಕ್ಸಿಜನ್ ಅಭಾವ ನೀಗಿಸಲು ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ದೇಶದ ಮೂಲೆಮೂಲೆಗಳಿಗೆ ಅತ್ಯಂತ ವೇಗವಾಗಿ ಆಮ್ಲಜನಕವನ್ನು ಪೂರೈಸಿದೆ. ಇದರೊಂದಿಗೆ ವಿದೇಶಗಳಿಂದಲೂ ನೌಕಾಪಡೆ, ವಾಯುಪಡೆ, ಡಿಆರ್ಡಿಒ ಸಹಕಾರದಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು, ಕ್ರಯೋಜನಿಕ್ ಟ್ಯಾಂಕರ್ಗಳನ್ನು ಭಾರತಕ್ಕೆ ತರಲಾಗುತ್ತಿದೆ. ಇವರೆಲ್ಲರ ಶ್ರಮ ನಿಜಕ್ಕೂ ಶ್ಲಾಘನೀಯ.
ತಾಳ್ಮೆ-ಶಿಸ್ತು ತೋರಿದ ದೇಶದ ಜನರಿಗೆ ಕೃತಜ್ಞತೆ
ಕೊರೊನಾದಂಥ ವಿಪತ್ತು-ಕಷ್ಟದ ಪರಿಸ್ಥಿತಿಯಲ್ಲಿ ಚಂಡಮಾರುತದಿಂದ ಹಾನಿಗೆ ಒಳಗಾದ ರಾಜ್ಯಗಳ ಜನರು ತುಂಬ ಧೈರ್ಯದಿಂದ ಹೋರಾಡಿದ್ದಾರೆ. ತಾಳ್ಮೆ, ಶಿಸ್ತಿನಿಂದ ವರ್ತಿಸಿದ್ದಾರೆ. ಅಂಥ ಎಲ್ಲ ನಾಗರಿಕರನ್ನೂ ನಾನು ಹೃದಯಪೂರ್ವಕ, ಗೌರವಪೂರ್ವಕವಾಗಿ ಶ್ಲಾಘಿಸುತ್ತೇನೆ.
100 ವರ್ಷಗಳಲ್ಲೇ ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗ ಈ ಕೊರೊನಾ: ಪಿಎಂ ಮೋದಿ
ಕೊರೊನಾ ವೈರಸ್ ಎಂಬುದು ಕಳೆದ 100 ವರ್ಷಗಳಲ್ಲೇ ಅತಿದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗವಾಗಿದೆ. ಈ ಸಾಂಕ್ರಾಮಿಕ ಸಂಕಷ್ಟದ ಹೊತ್ತಲ್ಲೇ ಭಾರತ ತೌಕ್ತೆ, ಯಾಸ್ ಚಂಡಮಾರುತದಂಥ ಹಲವು ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದೆ.
ಪ್ರಾದೇಶಿಕ ಭಾಷೆಗಳಲ್ಲೂ ಮನ್ ಕೀ ಬಾತ್ ಪ್ರಸಾರ
ಈ ಬಾರಿ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ ತಕ್ಷಣ ಅದು ಆಯಾ ಆಕಾಶವಾಣಿ ಸ್ಟೇಶನ್ಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಪ್ರಸಾರ ಆಗಲಿದೆ. ಹಾಗೇ ಮತ್ತೊಮ್ಮೆ ರಾತ್ರಿ 8ಗಂಟೆಗೆ ಪ್ರಸಾರಗೊಳ್ಳಲಿರುವುದು ವಿಶೇಷ.
Listen to the Regional versions of #MannKiBaat , immediately after the PM’s Broadcast today and again at 8 PM tonight, from the concerned regional stations of @AkashvaniAIR . pic.twitter.com/4pkb5Qblsu
— Mann Ki Baat Updates मन की बात अपडेट्स (@mannkibaat) May 30, 2021
Published On - May 30,2021 11:50 AM