ಸೂರ್ಯಪೇಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಗೂ ಮೊದಲು ಅವಘಡ.. ಪ್ರೇಕ್ಷಕರ ಗ್ಯಾಲರಿ ಕುಸಿದು ನೂರಾರು ಜನರಿಗೆ ಗಾಯ
ಅಲ್ಲಿ ಕಬಡ್ಡಿ ಪಂದ್ಯಾವಳಿ ನಡೀತಿತ್ತು. ಜನರು ಖುಷಿ ಖುಷಿಯಾಗಿ ಕಬಡ್ಡಿ ನೋಡ್ತಾ ಇದ್ರು. ಜೋಷ್ ಕೂಡ ಜಾಸ್ತಿನೇ ಇತ್ತು. ಆದರೆ ದಿಢೀರ್ ಅಂತಾ ಸಂಭ್ರಮವೆಲ್ಲಾ ಮಾಯವಾಗಿ ಸೂತಕದ ಛಾಯೆ ಆವರಿಸಿತು. ಪ್ರೇಕ್ಷಕರಿದ್ದ ಗ್ಯಾಲರಿ ಕುಸಿದು ನೂರಾರು ಜನ ಗಾಯಗೊಂಡರು.
ತೆಲಂಗಾಣದ ಸೂರ್ಯಪೇಟ್ಯಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಗೂ ಮೊದಲು ಭೀಕರ, ಭಯಾನಕ ಅವಘಡ ಸಂಭವಿಸಿದೆ. ಸೂರ್ಯಪೇಟ್ ಜಿಲ್ಲೆಯಲ್ಲಿ ಆಯೋಜಿಸಿದ್ದ 47ನೇ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆ ವೇಳೆ ಅವಘಡ ನಡೆದಿದೆ. ಪ್ರೇಕ್ಷಕರು ತುಂಬಿ ತುಳುಕುತ್ತಿದ್ದ ಗ್ಯಾಲರಿ ದಿಢೀರ್ ಕುಸಿದು ಬಿದ್ದಿದೆ. ತಕ್ಷಣ ನೂರಾರು ಜನರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ಸಾಕಷ್ಟು ಜನರಿಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನೆಲ್ಲಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿದ್ದೇ ತಪ್ಪಾಯ್ತಾ? ಹೌದು ಇಂತಹದ್ದೊಂದು ಆರೋಪ ಕೂಡ ಇದೀಗ ಕೇಳಿಬಂದಿದೆ. ಕಬಡ್ಡಿ ಪಂದ್ಯ ನಡೆಯುತ್ತಿದ್ದ ಗ್ಯಾಲರಿಯಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಕೂರಿಸಿದ್ದೇ ಕಾರಣ ಎನ್ನಲಾಗ್ತಿದೆ. 1500ಕ್ಕೂ ಹೆಚ್ಚು ಜನ ಗ್ಯಾಲರಿಗೆ ಹತ್ತಿದ್ದು, ಒಟ್ಟು 3 ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತಾದರೂ ಈ ಪೈಕಿ 1 ಗ್ಯಾಲರಿ ಮಾತ್ರ ಕುಸಿದಿದೆ. ಕಬಡ್ಡಿ ಪಂದ್ಯಾವಳಿಗೆ ಚಾಲನೆ ಸಿಗುವ ಕೆಲವೇ ಕ್ಷಣಗಳ ಮುನ್ನ ಈ ದುರ್ಘಟನೆ ಸಂಭವಿಸಿದೆ.
ಒಟ್ನಲ್ಲಿ ಖುಷಿ ಖುಷಿಯಾಗಿ ಕಬಡ್ಡಿ ಮ್ಯಾಚ್ ನೋಡಲು ಬಂದವರು ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ. ಇನ್ನು ಈ ಘಟನೆ ಬಗ್ಗೆ ಪೊಲೀಸರು ಕೂಡ ತನಿಖೆ ನಡೆಸ್ತಿದ್ದಾರೆ. ಅದೇನೆ ಇರ್ಲಿ, ಸ್ಪರ್ಧೆ ಆರಂಭದಲ್ಲೇ ಸಂಭವಿಸಿರುವ ಈ ದುರ್ಘಟನೆ ಆಟಗಾರರಿಗೂ ಆಘಾತ ತಂದಿದೆ.
ಇದನ್ನೂ ಓದಿ: ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ, ದಂಪತಿ ಸೇರಿ ಮೂವರ ಸಾವು