AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ಕಾಲಕ್ಷೇಪ ಸಲ್ಲದು ಸ್ಥಾನಕ್ಕೆ ಶೋಭೆ ತರಬೇಕು ಸಾಬ್!

‘ಗಂಡಸರೆದುರು ಹಾಗೆಲ್ಲ ಸೆರಗು ಸರಿಪಡಿಸಿಕೊಂಡರೆ ಬೇರೆ ಸೂಚನೆ ಹೋಗುತ್ತೆ ಗಂಡಸರಿಗೆ. ಹುಷಾರಾಗಿರಿ, ಹಾಗೆಲ್ಲ ಮಾಡಬೇಡಿ ಅಂದ. ಸಿಟ್ಟು ಬಂತು ನನಗೆ. ಹಾಗಿದ್ರೆ ಅಕಸ್ಮಾತ್ ಸೆರಗು ಸರಿದು ಅದನ್ನ ಹಾಗೇ ಬಿಟ್ರೆ ಏನಂತಾರೆ ಗಂಡಸರು, ಬೇಕು ಅಂತಲೇ ನಿಮ್ಮೆದುರು ಸೆರಗು ಜಾರಸ್ತೀವಿ ಅಂತ ತಾನೆ? ಅಂದೆ. ನನ್ನ ಮಾತನ್ನು ಅರ್ಥ ಮಾಡಿಕೊಂಡು ಆ ಜನ ಸುಮ್ಮನಿದ್ದರೂ ಆಗುತ್ತಿತ್ತು. ಆದರೆ ಪೋಲಿ ನಗು ನಕ್ಕರು. ಉರಿದು ಹೋಯ್ತು ನನಗೆ.’ ಜಯಲಕ್ಷ್ಮೀ ಪಾಟೀಲ್

Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ಕಾಲಕ್ಷೇಪ ಸಲ್ಲದು ಸ್ಥಾನಕ್ಕೆ ಶೋಭೆ ತರಬೇಕು ಸಾಬ್!
ಜಯಲಕ್ಷ್ಮೀ ಪಾಟೀಲ
ಶ್ರೀದೇವಿ ಕಳಸದ
|

Updated on: Mar 23, 2021 | 3:59 PM

Share

ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೇ, ಇತ್ತೀಚೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಸುರಕ್ಷತಾ ಮಾನದಂಡಗಳನ್ನು ಸಡಿಲಿಸುವುದನ್ನು ಸಮರ್ಥಿಸಿಕೊಳ್ಳುತ್ತಾ ನಂಬಿಕೆ, ಶ್ರದ್ಧೆ, ಆಸ್ಥೆ ಇದ್ದಲ್ಲಿ ಎಂಥ ವೈರಸ್​ ಅನ್ನೂ ಸೋಲಿಸಬಹುದು ಎಂದಿದ್ದಿರಿ. ಇರಲಿ, ಸ್ವತಃ ಕೋವಿಡ್​ಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಮಗೀಗಾಗಲೇ ಈ ಹೇಳಿಕೆಯ ಸತ್ಯಾಸತ್ಯದ ಬಗ್ಗೆ ಮನವರಿಕೆ ಆಗಿರುತ್ತದೆ ಎಂದು ಭಾವಿಸಲಾಗುವುದು. ‘Ripped Jeans ಪತ್ರ ಅಭಿಯಾನ’ವನ್ನು ನಿನ್ನೆಗೇ ಮುಗಿಸೋಣವೆಂದರೆ ಮತ್ತೆರಡು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟಿರಿ; ಮೊದಲನೆಯದು, ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಅಮೆರಿಕನ್ನರು ಆಳಿದರು. ಎರಡನೆಯದು, ಕೋವಿಡ್ ಸಮಯದಲ್ಲಿ ಹೆಚ್ಚು ಪಡಿತರ ಪಡೆಯಲು ಹೆಣ್ಣುಮಕ್ಕಳು ಹೆಚ್ಚೆಚ್ಚು ಹೆರಬೇಕು. ಇರಲಿ, ಸದ್ಯಕ್ಕೆ ನಿಮಗೆ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಷ್ಟು ಬೇಗ ಎಲ್ಲ ರೀತಿಯಿಂದಲೂ ನೀವು ಚೇತರಿಸಿಕೊಳ್ಳಿ. 

ಆದರೆ ನೆನಪಿಡಿ, ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ಅಪಾಯವಿದೆ. ಆದ್ದರಿಂದ ಸಮಾಜದ ವಾಸ್ತವಿಕ ನೋಟಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈವತ್ತೂ ಈ ಪತ್ರ ಅಭಿಯಾನ ಜಾರಿಯಲ್ಲಿರುತ್ತದೆ.  

ಪರಿಕಲ್ಪನೆ : ಶ್ರೀದೇವಿ ಕಳಸದ

ರಂಗಭೂಮಿ ಕಲಾವಿದೆ, ಲೇಖಕಿ, ಸಂಘಟಕಿ ಜಯಲಕ್ಷ್ಮೀ ಪಾಟೀಲ ಅವರಿಗೆ ಈ ಸಂದರ್ಭದಲ್ಲಿ ನೆನಪಾದ ಪ್ರಸಂಗ ಯಾವುದು?

‘ಹೌದು ನೋಡಬೇ, ನಾ ಹಿಂಗ ಯೋಚನೇನs ಮಾಡಿರ್ಲಿಲ್ಲ! ನಾವು ಗಂಡಸ್ರು ಅಂಗಿ ಹಾಕ್ಕೆಳ್ದನ ಮಾಳ್ಗಿ ಮ್ಯಾಗ ಬರೆ ಮಯ್ಯಾಗ ನಿಂದರ್ತೀವಿ. ಆದ್ರ ಹೆಣ್ಮಕ್ಳು ಫ್ಯಾಶನ್ ಅಂತ ಜಂಪರ್ ಬೆನ್ನಾಗ ಡಿಸೈನ್ ಮಾಡಸ್ಕೆಂಡು ಒಂತಟಗ ಕಿಂಡಿ ಬಿಟ್ಟ್ರೂ ಸಂಸ್ಕೃತಿ, ಸಂಸ್ಕಾರ ಮರ್ಯಾದಿ ಅಂತೆಲ್ಲಾ ಮಾತಾಡ್ತೀವಿ! ತಪ್ಪ್ ಅದು ತಪ್ಪು’

ಇತ್ತೀಚಿಗೆ ಬಿಡುಗಡೆಯಾದ ನನ್ನ ಕವನ ಸಂಕಲನದಲ್ಲಿನ ಕವನಗಳ ಕುರಿತು ಮೊನ್ನೆಯಷ್ಟೇ ಫೋನಿನಲ್ಲಿ ತಮ್ಮ ಮೆಚ್ಚುಗೆ ಸೂಸುತ್ತಾ, ಫೆಮಿನಿಸಂ ಬಗ್ಗೆ ತಮಗಿದ್ದ ಕೊಂಚ ಆಕ್ಷೇಪಣೆಯನ್ನೂ ವ್ಯಕ್ತಪಡಿಸಿದ ನನ್ನ ವಿದ್ಯಾ ಗುರುಗಳಾದ ಬಿ. ಜಿ. ಹುಲಿ ಸರ್ ಜೊತೆಗೆ ಸಂವಾದ ಬೆಳೆದ ಒಂದು ಹಂತದಲ್ಲಿ, ಅವರು ಹೇಳಿದ ಮಾತಿದು. ಹೈಸ್ಕೂಲಿನಲ್ಲಿ ನನಗೆ ಕನ್ನಡ ಕಲಿಸಿದ ಮೇಷ್ಟ್ರು ಅವರು. ಅಂದರೆ ವಯಸ್ಸಲ್ಲಿ ಹಿರಿಯರು. ಪುರುಷಪ್ರಧಾನ ಸಮಾಜದ ನೀತಿ ನಿಯಮಗಳನ್ನೆ ಹಾಸಿಹೊದ್ದುಕೊಳ್ಳುವ ಪರಿಸರದಲ್ಲಿ ತಮ್ಮ ಜೀವನವನ್ನು ಮಾಗಿಸಿದ ಹಿರಿಯರೊಬ್ಬರ ಆರೋಗ್ಯವಂತ ಮನಸಿನ ಲಕ್ಷಣವಿದು. ಸಮಾಜದಲ್ಲಿನ ಅಸಮಾನತೆಯನ್ನು ಅವರ ವಿದ್ಯಾರ್ಥಿನಿಯೊಬ್ಬಳು ಎತ್ತಿ ತೋರಿಸಿದರೆ ಒಪ್ಪಿಕೊಳ್ಳುವ ವಿವೇಚಾನಶೀಲ ವ್ಯಕ್ತಿತ್ವ.

ಇದೇ ಸಮಯದಲ್ಲಿ ಒಂದು ಹಳೆಯ ಘಟನೆಯೂ ನೆನಪಾಗುತ್ತಿದೆ. ಅದೊಮ್ಮೆ ರಂಗ ನಿರ್ದೇಶಕನೊಬ್ಬನೊಂದಿಗೆ ರಿಹರ್ಸಲ್ ಗೆ ಹೊರಟಿದ್ದೆ. ಸೀರೆ ಉಟ್ಟಿದ್ದೆ. ಅದ್ಯಾವಾಗಲೋ ನಾನು ಸೆರಗನ್ನು ಸರಿಪಡಿಸಿಕೊಂಡಿದ್ದನ್ನ ನೋಡಿದ ಆತ ದಾರಿಯಲ್ಲಿ,

‘ನಿಮಗೊಂದು ಮಾತು ಹೇಳ್ತೀನಿ, ತಪ್ಪು ತಿಳೀಬೇಡಿ’ ಎಂದರು.

‘ಇಲ್ಲ ಏನು ಹೇಳಿ ಸರ್?’

‘ಗಂಡಸರೆದುರು ಹಾಗೆಲ್ಲ ಸೆರಗು ಸರಿಪಡಿಸಿಕೊಂಡರೆ ಬೇರೆ ಸೂಚನೆ ಹೋಗುತ್ತೆ ಗಂಡಸರಿಗೆ. ಹುಷಾರಾಗಿರಿ, ಹಾಗೆಲ್ಲ ಮಾಡಬೇಡಿ’

ಅರೇ! ಸಿಟ್ಟು ಬಂತು ನನಗೆ. ’ಹಾಗಿದ್ರೆ ಅಕಸ್ಮಾತ್ ಸೆರಗು ಸರಿದು ಅದನ್ನ ಹಾಗೇ ಬಿಟ್ರೆ ಏನಂತಾರೆ ಗಂಡಸರು? ಬೇಕು ಅಂತಲೇ ನಿಮ್ಮೆದುರು ಸೆರಗು ಜಾರಸ್ತೀವಿ ಅಂತ ತಾನೆ?’

ಸಿಟ್ಟಿನ ನನ್ನ ಈ ಮಾತನ್ನ ಅರ್ಥ ಮಾಡಿಕೊಂಡು ಆ ಜನ ಸುಮ್ಮನಿದ್ದರೂ ಆಗುತ್ತಿತ್ತು. ಆದರೆ ಪೋಲಿ ನಗು ಕಾಣಿಸಿತು ಅವರ ಮುಖದಲ್ಲಿ. ಉರಿದು ಹೋಯ್ತು ನನಗೆ.

‘ಮೊದ್ಲು ಗಂಡಸರು ಮನಸ್ಸನ್ನ ಸ್ವಚ್ಛವಾಗಿಟ್ಟುಕೊಳ್ಳೋದನ್ನ ಕಲಿತ್ಕೊಳ್ಳಿ. ನಾವು ಹೇಗಿರಬೇಕು ಅಂತ ನಮಗೊತ್ತು. ನಿಮ್ಮ ಹೊಲಸು ಆಲೋಚನೆಗಳನ್ನ ನಮ್ಮ ಬಟ್ಟೆಗೆ ಒರೆಸುವ ಅಗತ್ಯವಿಲ್ಲ’ ಎಂದೆ ಖಾರವಾಗಿ. ಹುಳ್ಳುಳ್ಳಗೆ ನಗುತ್ತಾ ತೆಪ್ಪಗಾದರಾತ.

ಅಲ್ಲ, ಯಾವಾಗ್ಲೂ ಹೆಣ್ಮಕ್ಳ ಮಾತು, ಹೆಣ್ಮಕ್ಳ ಬಟ್ಟೆ, ಹೆಣ್ಮಕ್ಕಳ ವರ್ತನೆ, ಹೆಣ್ಮಕ್ಕಳ ನಿರ್ಧಾರ ಹೀಗಿರಬೇಕು ಹಾಗಿರಬಾರದು ಅಂತ ಸತತ ಎಲ್ಲೆಡೆ ತೋಳೇರಿಸಿಕೊಂಡು ಬಂದು ಉಪದೇಶಾಮೃತ ಸುರಿಸಿ, ನಮ್ಮನ್ನು ಉದ್ಧಾರ ಮಾಡೋ ಹುಕಿಯಲ್ಲಿರ್ತಾರಲ್ಲ ಕೆಲವರಲ್ಲ ಬಹುತೇಕರು! ಯಾಕೆ ಏನೂ ತಿಳಿಯದ ಎಳೆಮಕ್ಕಳಾ ನಾವು? ಇಲ್ಲಾ ಎಲ್ಲದಕ್ಕೂ ಅಸಹಾಯಕಾರಾಗಿ ಯಾರಾದ್ರೂ ಬಂದು ನಮ್ಮನ್ನು ಉದ್ಧಾರ ಮಾಡ್ಲಿ ಅಂತ ಕಾಯ್ಕೊಂಡು ಕೂತಿರ್ತೀವಾ? ನಮಗೆ ಸ್ವಂತ ಆಲೋಚನೆ, ಆಯ್ಕೆಗಳೇ ಇರಬಾರದು/ಇರುವುದಿಲ್ಲ ಎಂದುಕೊಳ್ಳುವ ಇಂಥವರ ಧಾರ್ಷ್ಟ್ಯಕ್ಕೆ ಏನನ್ನಬೇಕು? ಹೆಣ್ಣು ಯಾರನ್ನ ಮದುವೆಯಾಗಬೇಕು? ಎಷ್ಟು ಮಕ್ಕಳನ್ನ ಹೆರಬೇಕು? ಯಾವ ಬಟ್ಟೆ ತೊಟ್ಟುಕೊಳ್ಳಬೇಕು? ಎಷ್ಟು ಮಿಲಿಮೀಟರ್ ಬಾಯ್ತೆರೆದು ನಗಬೇಕು, ಎಷ್ಟು ಮೆಲುದನಿಯಲ್ಲಿ ಮಾತಾಡಬೇಕು, ಭೂಮೀಲಿ ಎಷ್ಟು ಆಳಕ್ಕೆ ತಲೆ ತಗ್ಗಿಸಿ ನಡೀಬೇಕು, ಯಾರೊಂದಿಗೆ ಮಾತಾಡಬೇಕು ಯಾರೊಂದಿಗೆ ಮಾತನಾಡಬಾರದು… ಇವೆಲ್ಲ ಯಾಕಪ್ಪಾ ಒಣ ಉಸಾಬರಿ? ಯಾಕೆ ಅನಗತ್ಯವಾಗಿ ಹೆಣ್ಣುಮಕ್ಕಳ ಎಲ್ಲ ವಿಷಯದಲ್ಲೂ ಅಧಿಕಪ್ರಸಂಗತನ? ಇದರಿಂದ ಸಮಾಜದ ಒಳಿತಿಗಾಗಿ ‘ನೀವು ಕೊಡುವ’ ಕೊಡುಗೆ ಯಾವುದು?

ಗಂಡೋ ಹೆಣ್ಣೋ ಊಟ, ಬಟ್ಟೆ ಅವರವರ ಆಯ್ಕೆ. ಎದುರಿನವರ ಟೇಸ್ಟ್ ನಮ್ಮ ಟೇಸ್ಟಿಗೆ ಸರಿಹೊಂದುತ್ತಿಲ್ಲವಾ? ಸರಿ, ಸುಮ್ಮನಿದ್ದು ಅವರ ಆಯ್ಕೆಯನ್ನು ಗೌರವಿಸಿ ನಮ್ಮ ಪಾಡಿಗೆ ನಾವಿದ್ದರಾಯ್ತು. ಅದು ಬಿಟ್ಟು…

ಬದಲಾವಣೆ ಒಂದೇ ಶಾಶ್ವತ ಅಂತಾರಲ್ಲ ಹಾಗೇ ಫ್ಯಾಶನ್ ಅನ್ನುವುದು ಎಂದಿಗೂ ಆಯಾ ಸಮಯಕ್ಕೆ ಮಾತ್ರ. ಅಲ್ಲೂ ಬದಲಾವಣೆ ಒಂದೇ ಶಾಶ್ವತ. ಇಂದು ರಿಪ್ಡ್ ಜೀನ್ಸ್ ತೊಡುವವರೇ ನಾಳೆ ಅದು ಓಲ್ಡ್ ಫ್ಯಾಶನ್ ಎಂದು ತಿರುಗಿಯೂ ಅತ್ತ ನೋಡದಿರಬಹುದು. ಇನ್ನ್ಯಾವುದೋ ಹಳೆಯ ಕಾಲದ ವಿನ್ಯಾಸ ಮುನ್ನೆಲೆಗೆ ಬಂದು ಅದರತ್ತ ಎಲ್ಲರೂ ಆಕರ್ಷಿತರಾಗಬಹುದು. ಹೊಸ ವಿನ್ಯಾಸಗಳ ಉಡುಗೆಗಳು ಆಗಾಗ ಜೀವನದ ಹುರುಪಿಗೆ ಕಾರಣವಾಗುತ್ತವೆ ಅನ್ನುವ ಸತ್ಯ ಎಲ್ಲರಿಗೂ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.

ದೊಡ್ದ ಸ್ಥಾನಗಳಲ್ಲಿರೋರಿಗೆ ದೊಡ್ಡ ದೊಡ್ಡ ಜವಾಬ್ದಾರಿಗಳಿರುತ್ತವೆ. ಕೇಳಿ ಪರಿಹರಿಸಲು ಪ್ರಜೆಗಳ ಸಾವಿರಾರು ಸಮಸ್ಯೆಗಳಿರುತ್ತವೆ. ಅತ್ತ ಗಮನ ಹರಿಸಿದರೆ ಒಳಿತು. ಅದು ಬಿಟ್ಟು ಗಣನೆಗೇ ಬರಬಾರದ ವಿಷಯವನ್ನು ದೊಡ್ಡದು ಮಾಡಿ ಈ ರೀತಿ ಮಾತನಾಡುತ್ತ ಕಾಲಕ್ಷೇಪ ಮಾಡುವುದು ಆ ಸ್ಥಾನಕ್ಕೆ ಶೋಭೆ ತರುವುದಿಲ್ಲ ತೀರಥ್  ಸಾಬ್. ಈ ಕುರಿತು ಕ್ಷಮೆ ಕೇಳಿದ್ದೀರೆಂದು ಗೊತ್ತಾಯಿತು. ಮೊದಲು ಸುಧಾರಿಸಿಕೊಳ್ಳಿ. ಮುಂದೆ ಯೋಚಿಸಿ ಮಾತನಾಡಲು ಮತ್ತು ಕೆಲಸ ಮಾಡಲು ಸಾಕಷ್ಟು ವಿಷಯಗಳಿವೆ.

ಇದನ್ನೂ ಓದಿ : Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ದಿನಕ್ಕೊಂದು ನೌಟಂಕಿ ಆಯಿತಲ್ಲ ನಿಮ್ಮದು!

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ