ಬೇಕಾದರೆ ಈಗ ಮತ್ತೊಂದು ಮದುವೆಯಾಗಿ, ಇಲ್ಲವೇ ಯುಸಿಸಿ ನಂತರ ಜೈಲು ಶಿಕ್ಷೆ ಅನುಭವಿಸಿ: ಎಐಯುಡಿಎಫ್ ಮುಖ್ಯಸ್ಥರಿಗೆ ಹಿಮಂತ ಶರ್ಮಾ ತರಾಟೆ
ಶನಿವಾರ ನಡೆದ ರ‍್ಯಾಲಿಯಲ್ಲಿ ಅಜ್ಮಲ್ ಹೇಳಿಕೆಗೆ ತಿರುಗೇಟು ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಅವರು (ಬದ್ರುದ್ದೀನ್ ಅಜ್ಮಲ್) ಈಗಲೇ ಮದುವೆಯಾಗಬೇಕು, ಚುನಾವಣೆ ನಂತರ, ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ, ನಂತರ ಅವರು ಮದುವೆಯಾದರೆ, ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ.

ದೆಹಲಿ ಮಾರ್ಚ್ 31: ಲೋಕಸಭಾ ಚುನಾವಣೆಗೆ (Lok Sabha Election)ವಾರಗಳ ಮುಂಚೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಧುಬ್ರಿ ಸಂಸದರೂ ಆಗಿರುವ ಅಜ್ಮಲ್ ಮತ್ತೆ ಮದುವೆಯಾಗಲು ಬಯಸಿದರೆ, ಅವರು ಚುನಾವಣೆಗೆ ಮುಂಚಿತವಾಗಿ ಮದುವೆಯಾಗಬೇಕು, ಇಲ್ಲವೇ ಬಂಧನವನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code)ಜಾರಿಯಾಗಲಿದ್ದು, ಬಹುಪತ್ನಿತ್ವ ಕಾನೂನು ಬಾಹಿರವಾಗಲಿದೆ ಎಂದು ಶರ್ಮಾ ಹೇಳಿದ್ದಾರೆ.
ಧುಬ್ರಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುತ್ತಿರುವ ಅಜ್ಮಲ್ ಅವರು “ಕಾಂಗ್ರೆಸ್‌ನ ಜನರು ಮತ್ತು ರಕಿಬುಲ್ ಹುಸೇನ್ (ಅವರ ಕಾಂಗ್ರೆಸ್ ಎದುರಾಳಿ) ನನಗೆ ವಯಸ್ಸಾಗಿದೆ ಎಂದು ಹೇಳಿದರು. ಆದರೆ ನನಗೆ ಇನ್ನೂ ತುಂಬಾ ಶಕ್ತಿ ಇದೆ, ನಾನು ಮದುವೆಯಾಗುತ್ತೇನೆ. ಮುಖ್ಯಮಂತ್ರಿ ಬಯಸದಿದ್ದರೂ ನಾನು ಹಾಗೆ ಮಾಡಬಲ್ಲೆ, ಅದು ನನ್ನ ಶಕ್ತಿ ಅಷ್ಟೆ ಎಂದಿದ್ದರು.
ಶನಿವಾರ ನಡೆದ ರ‍್ಯಾಲಿಯಲ್ಲಿ ಅಜ್ಮಲ್ ಹೇಳಿಕೆಗೆ ತಿರುಗೇಟು ನೀಡಿದ ಅಸ್ಸಾಂ ಮುಖ್ಯಮಂತ್ರಿ, “ಅವರು (ಬದ್ರುದ್ದೀನ್ ಅಜ್ಮಲ್) ಈಗಲೇ ಮದುವೆಯಾಗಬೇಕು, ಚುನಾವಣೆ ನಂತರ, ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ, ನಂತರ ಅವರು ಮದುವೆಯಾದರೆ, ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ.
“ಅವರು ( ಅಜ್ಮಲ್) ಈಗ ನಮ್ಮನ್ನು ಮದುವೆಗೆ ಆಹ್ವಾನಿಸಿದರೆ, ನಾವು ಕೂಡಾ ಹೋಗುತ್ತೇವೆ. ಏಕೆಂದರೆ ಅದು ಇಲ್ಲಿಯವರೆಗೆ ಕಾನೂನುಬಾಹಿರವಾಗಿಲ್ಲ. ನನಗೆ ತಿಳಿದಿರುವಂತೆ, ಅವರಿಗೆ ಒಬ್ಬ ಹೆಂಡತಿ ಇದ್ದಾಳೆ. ಅವರು ಇನ್ನೂ ಎರಡು ಅಥವಾ ಮೂರು ಮದುವೆಯಾಗಬಹುದು, ಆದರೆ ಚುನಾವಣೆಯ ನಂತರ ನಾವು ಬಹುಪತ್ನಿತ್ವವನ್ನು ನಿಲ್ಲಿಸುತ್ತೇವೆ. ಸಂಪೂರ್ಣ ಕರಡು ಸಿದ್ಧವಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯು ಎಲ್ಲಾ ಭಾರತೀಯ ನಾಗರಿಕರಿಗೆ ಅನ್ವಯಿಸುವ ಸಾಮಾನ್ಯ ಕಾನೂನುಗಳನ್ನು ಸೂಚಿಸುತ್ತದೆ. ಇತರ ವೈಯಕ್ತಿಕ ವಿಷಯಗಳ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತುತೆಗೆದುಕೊಳ್ಳುವಲ್ಲಿ ಧರ್ಮವನ್ನು ಆಧರಿಸಿಲ್ಲ.
ಇದನ್ನೂ ಓದಿ: LK Advani: ಬಿಜೆಪಿಯ ದಿಗ್ಗಜ ಎಲ್‌ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ
ಶರ್ಮಾ ಅವರು ತಮ್ಮ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯ ಮೇಲೆ ಕಾನೂನನ್ನು ತರುವುದಾಗಿ ಪದೇ ಪದೇ ಹೇಳಿದ್ದಾರೆ. ಕಳೆದ ತಿಂಗಳು ಉತ್ತರಾಖಂಡ ಅಸೆಂಬ್ಲಿ ಯುಸಿಸಿ ಮಸೂದೆಯನ್ನು ಅಂಗೀಕರಿಸಿದ ನಂತರ ಅವರು ಇದನ್ನೇ ಪುನರುಚ್ಚರಿಸುತ್ತಿದ್ದಾರೆ. ಅಸ್ಸಾಂ ಲೋಕಸಭಾ ಚುನಾವಣೆಯಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ಇಲ್ಲಿ ಮತದಾನ ನಡೆಯಲಿದ್ದು ಫಲಿತಾಂಶವನ್ನು ಜೂನ್ 4 ರಂದು ಘೋಷಿಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



