
ಮಥುರಾ, ಆಗಸ್ಟ್ 19: ಉತ್ತರ ಪ್ರದೇಶದ ಮಥುರಾದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿದ್ದ ಸುಮಾರು 500 ಕೆಜಿ ಕಲುಷಿತ ಹಾಗೂ ನಕಲಿ ಪನೀರ್(Paneer) ಅನ್ನು ವಶಪಡಿಸಿಕೊಂಡು ಸ್ಥಳದಲ್ಲೇ ನಾಶಪಡಿಸಿದ್ದಾರೆ. ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FSDA) ನಡೆಸಿದ ಈ ಕಾರ್ಯಾಚರಣೆಯಲ್ಲಿ ನಕಲಿ ಡೈರಿ ದಂಧೆಯು ಬಯಲಾಗಿದ್ದು, ಪನೀರ್ ತಯಾರಿಕೆಗೆ ಬಳಸುತ್ತಿದ್ದ ಭಾರಿ ಪ್ರಮಾಣದ ಅಪಾಯಕಾರಿ ರಾಸಾಯನಿಕಗಳು ಹಾಗೂ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಅಪಾಯಕಾರಿ ರಾಸಾಯನಿಕಗಳ ಬಳಕೆ: ದಾಳಿಯ ವೇಳೆ ಅಧಿಕಾರಿಗಳು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ, ಇರಾ ಸೋಡಿಯಂ ಹೈಡ್ರೋಜನ್ ಹಾಗೂ ಬಟ್ಟೆ ತೊಳೆಯಲು ಬಳಸುವ ‘ಟಿನೋಪೋಲ್’ ಎಂಬ ಬಿಳುಪುಗೊಳಿಸುವ ರಾಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ.
2,000 ಲೀಟರ್ ಹಾಲು ಜಪ್ತಿ: ಸುಮಾರು1.25 ಲಕ್ಷ ಮೌಲ್ಯದ 2 ಸಾವಿರ ಲೀಟರ್ ಸಂಶಯಾಸ್ಪದ ಕೃತಕ ಹಾಲನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 9 ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
ಮತ್ತಷ್ಟು ಓದಿ: ಪನೀರ್ ಸೇವನೆಯಿಂದ ಆರೋಗ್ಯಕ್ಕೆ ಆಗುವ 8 ಪ್ರಯೋಜನಗಳಿವು
ನಕಲಿ ಡೈರಿ ಉತ್ಪನ್ನ: ನೈಜ ಹಾಲಿನ ಬದಲು ಅಗ್ಗದ ಸಸ್ಯಜನ್ಯ ಎಣ್ಣೆ, ಪಾಮ್ ಆಯಿಲ್, ಸೋಯಾ ಪ್ರೋಟೀನ್ ಮತ್ತು ರಾಸಾಯನಿಕಗಳನ್ನು ಬೆರೆಸಿ ನೈಜ ಪನೀರ್‌ನಂತೆ ಕಾಣುವಂತೆ ಮಾಡುವ ಉತ್ಪನ್ನಕ್ಕೆ ‘ಅನಲಾಗ್ ಪನೀರ್’ ಎನ್ನಲಾಗುತ್ತದೆ.ಈ ರೀತಿಯ ಕೃತಕ ಪನ್ನೀರ್ ಸೇವನೆಯಿಂದ ಜಠರದ ಕಾಯಿಲೆಗಳು, ಯಕೃತ್ತಿನ ಸಮಸ್ಯೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುವ ಅಪಾಯವಿರುತ್ತದೆ.
ಹಲವು ರಾಜ್ಯಗಳಲ್ಲಿ ನಿಷೇಧ: ಮಹಾರಾಷ್ಟ್ರ, ಗುಜರಾತ್ ಹಾಗೂ ಛತ್ತೀಸ್‌ಗಢ ರಾಜ್ಯಗಳನ್ನು ಅನುಸರಿಸಿ, ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರವೂ ಕೂಡ ಅನಲಾಗ್ ಪನೀರ್ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಪಶ್ಚಿಮ ಉತ್ತರ ಪ್ರದೇಶದ ಶಾಮ್ಲಿ, ಬಾಗ್‌ಪತ್ ಹಾಗೂ ಹರಿಯಾಣದ ಮೇವಾತ್‌ನಿಂದ ದೆಹಲಿ-ಎನ್‌ಸಿಆರ್‌ನ ಹೋಟೆಲ್ ಮತ್ತು ಮಾರುಕಟ್ಟೆಗಳಿಗೆ ಇಂತಹ ನಕಲಿ ಪನೀರ್, ಖೋವಾ ಮತ್ತು ಹಾಲು ಪೂರೈಕೆಯಾಗುವ ದೊಡ್ಡ ಅಂತಾರಾಜ್ಯ ದಂಧೆ ಸಕ್ರಿಯವಾಗಿದ್ದು, ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ