ತಮ್ಮ ಮೇಲೆ ನಿಯಂತ್ರಣವಿಲ್ಲದ ಪುರುಷರು ಮಹಿಳೆಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಾರೆ; ಹರಿಯಾಣ ಗೃಹ ಸಚಿವ ಟೀಕೆ
ಮಹಿಳೆಯರನ್ನು ಕಂಡಾಗ ತಮ್ಮನ್ನು ನಿಯಂತ್ರಿಸಲು ಸಾಧ್ಯವಾಗದ ಪುರುಷರು ಮಹಿಳೆಯರಿಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ. ಅವರ ಮನಸ್ಸನ್ನು ಬಲಪಡಿಸುವ ಬದಲು ಶಿಕ್ಷೆಯನ್ನು ಮಹಿಳೆಯರಿಗೆ ನೀಡಲಾಗುತ್ತಿದೆ ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.
ಚಂಡೀಗಢ: ತಮ್ಮ ಮನಸಿನ ಮೇಲೆ ಹಿಡಿತವಿಲ್ಲದ ಪುರುಷರು ಮಹಿಳೆಯರಿಗೆ ಹಿಜಾಬ್ (Hijab) ಧರಿಸಲು ಒತ್ತಾಯಿಸುತ್ತಾರೆ. ಪುರುಷರು ತಮ್ಮ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು, ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು ಎಂದು ಹರಿಯಾಣದ ಸಚಿವ ಅನಿಲ್ ವಿಜ್ (Minister Anil Vij) ಇಂದು ಹಿಜಾಬ್ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.
ಹರಿಯಾಣದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ವಿಭಜಿತ ತೀರ್ಪು ನೀಡುವುದಕ್ಕೂ ಮೊದಲು ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.
“ಮಹಿಳೆಯರನ್ನು ಕಂಡಾಗ ತಮ್ಮ ಉತ್ಸುಕತೆಯನ್ನು ನಿಯಂತ್ರಿಸಲು ಸಾಧ್ಯವಾಗದ ಪುರುಷರು ಮಹಿಳೆಯರಿಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ. ಅವರ ಮನಸ್ಸನ್ನು ಬಲಪಡಿಸುವ ಅಗತ್ಯವಿತ್ತು. ಆದರೆ, ಶಿಕ್ಷೆಯನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಅವರನ್ನು ತಲೆಯಿಂದ ಉಗುರಿನವರೆಗೂ ಮುಚ್ಚಲಾಗುತ್ತಿದೆ. ಇದು ಘೋರ ಅನ್ಯಾಯ” ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Hijab Verdict: ಕರ್ನಾಟಕದ ಹಿಜಾಬ್ ವಿವಾದಕ್ಕೂ, ಇರಾನ್ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗೂ ಇದೆ ಹಲವು ವ್ಯತ್ಯಾಸ
ಪುರುಷರು ತಮ್ಮ ಮನಸ್ಸನ್ನು ಬಲಪಡಿಸಬೇಕು ಮತ್ತು ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿರುವ ಬಗ್ಗೆ ಗಲಾಟೆಯ ನಡುವೆ ಅನಿಲ್ ವಿಜ್ ಅವರು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ಹೇಳಿದ್ದರು.