ಡಿಎಂಕೆ ಪಕ್ಷದ ಅಧ್ಯಕ್ಷರಾಗಿ 2ನೇ ಬಾರಿ ಎಂಕೆ ಸ್ಟಾಲಿನ್ ಆಯ್ಕೆ

TV9kannada Web Team

TV9kannada Web Team | Edited By: Rashmi Kallakatta

Updated on: Oct 09, 2022 | 12:53 PM

ನಾಮಪತ್ರ ಸಲ್ಲಿಸುವ ಮುನ್ನ ಸ್ಟಾಲಿನ್ ಅವರು ಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿಎನ್ ಅಣ್ಣಾದೊರೈ ಮತ್ತು ತಮ್ಮ ತಂದೆ ಎಂ ಕರುಣಾನಿಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿದ್ದರು.

ಡಿಎಂಕೆ ಪಕ್ಷದ ಅಧ್ಯಕ್ಷರಾಗಿ 2ನೇ ಬಾರಿ ಎಂಕೆ ಸ್ಟಾಲಿನ್ ಆಯ್ಕೆ
ಎಂಕೆ ಸ್ಟಾಲಿನ್

ಚೆನ್ನೈ: ದ್ರಾವಿಡ ಮುನ್ನೇಟ್ರ ಕಳಗಂ (DMK) ಅಧ್ಯಕ್ಷರಾಗಿ ಎಂಕೆ ಸ್ಟಾಲಿನ್ (MK Stalin) ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ತಮಿಳುನಾಡು (Tamil Nadu) ಮುಖ್ಯಮಂತ್ರಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 69 ವರ್ಷದ ಸ್ಟಾಲಿನ್ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಅವರು ಪಕ್ಷದ ಸದಸ್ಯರಿಗೆ ಶುಭಾಶಯ ಕೋರಿದ್ದು, ಅವರಿಗೆ ಪಕ್ಷದ ಸದಸ್ಯರಿಂದ ಅದ್ದೂರಿ ಸ್ವಾಗತ ದೊರೆಯಿತು ಎಂದು ಎಎನ್ಐ ವರದಿ ಮಾಡಿದೆ. ಡಿಎಂಕೆ ನಾಯಕರಾದ ದುರೈ ಮುರುಗನ್ ಮತ್ತು ಟಿ.ಆರ್.ಬಾಲು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಡಿಎಂಕೆಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಹೊಂದಿರುವ ಮೂವರು ನಾಯಕರು ತಮ್ಮ ನಾಮನಿರ್ದೇಶನ ಪತ್ರವನ್ನು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಅವರಿಗೆ ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸುವ ಮುನ್ನ ಸ್ಟಾಲಿನ್ ಅವರು ಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿಎನ್ ಅಣ್ಣಾದೊರೈ ಮತ್ತು ತಮ್ಮ ತಂದೆ ಎಂ ಕರುಣಾನಿಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿದ್ದರು.

ಡಿಎಂಕೆ  ಮುಖ್ಯಸ್ಥರಾಗಿದ್ದ ಎಂ ಕರುಣಾನಿಧಿ ಅವರ ಕಿರಿಯ ಪುತ್ರ ಸ್ಟಾಲಿನ್, ಡಿಎಂಕೆ ಖಜಾಂಚಿ ಮತ್ತು ಯುವ ಘಟಕದ ಕಾರ್ಯದರ್ಶಿ ಸೇರಿದಂತೆ ಹಲವಾರು ಪಕ್ಷದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕರುಣಾನಿಧಿ ಅವರ ನಿಧನದ ನಂತರ 2018 ರಲ್ಲಿ ಪಕ್ಷದ ಉನ್ನತ ಹುದ್ದೆಗೆ ಅವರು ಆಯ್ಕೆಯಾದರು.

2019 ರ ಸಂಸತ್ ಚುನಾವಣೆ ಮತ್ತು 2021 ರ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸಿದ ಸ್ಟಾಲಿನ್ ಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತಂದರು. ಸ್ಟಾಲಿನ್ ಅವರು 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ವಿವಿಧ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ.

ಅಧ್ಯಕ್ಷರಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಯ್ಕೆ. ವೈಚಾರಿಕತೆ, ಸ್ವಾಭಿಮಾನ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಹಿಳಾ ಹಕ್ಕುಗಳ ಪರವಾಗಿ ನಿಂತಿರುವ ಡಿಎಂಕೆ ಪಕ್ಷದ ಅಧ್ಯಕ್ಷರಾಗಿ ಸಿಎಂ ಸ್ಟಾಲಿನ್ ಅವರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಹಕ್ಕುಗಳನ್ನು ರಕ್ಷಿಸುತ್ತಾರೆ, ”ಎಂದು ಪಕ್ಷದ ಸಾಮಾನ್ಯ ಸಭೆಯ ನಂತರ ಡಿಎಂಕೆ  ಟ್ವೀಟ್ ಮಾಡಿದೆ.

ದ್ರಾವಿಡ ಚಳವಳಿಯ ಐಕಾನ್ ಸಿ ಎನ್ ಅಣ್ಣಾದೊರೈ ಅವರು 1949 ರಲ್ಲಿ ಡಿಎಂಕೆ ಸ್ಥಾಪಿಸಿದರು. ಅವರು 1969 ರಲ್ಲಿ ನಿಧನರಾಗುವವರೆಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದರು, ನಂತರ ಕರುಣಾನಿಧಿ ಅವರು ಡಿಎಂಕೆಯ ಮೊದಲ ಅಧ್ಯಕ್ಷರಾದರು. ಸ್ಟಾಲಿನ್ ಅವರ ತಂದೆಯ ನಿಧನದ ನಂತರ 2018 ರಲ್ಲಿ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada